ಪ್ರಸಕ್ತ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶ ಎಪ್ರಿಲ್ ೩೦ ರಂದು ಪ್ರಕಟ ಗೊಂಡಿತು.ಆದಿನ ಬೆಳಿಗ್ಗೆ ಕಾಗಾಲದ ನಾಗ ದೇವಸ್ಥಾನದ ಪರಿಸರದಲ್ಲಿ ಸ್ವಚ್ಛತಾ ಕಾರ್ಯದಲ್ಲಿ ತೊಡಿಗಿದ ನನಗೆ ಹತ್ತಿರದ ಸಂಬಂಧಿಯೊಬ್ಬರು ಕರೆಮಾಡಿ ಈ ಬಾರಿ ಎಸ್ ಎಸ್ ಎಲ್ ಸಿ ರಿಸಲ್ಟ ಬಂದಿದೆ ನಾಗಾಂಜಲಿ ಎಂಬ ಹುಡುಗಿ ಎಲ್ಲ ವಿಷಯದಲ್ಲೂ ಪೂರ್ಣ ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಬಂದಿದ್ದಾಳೆ ಎಂದು ತಿಳಿಸಿದರು.ವಿಪರೀತ ಶೆಖೆಯಲ್ಲಿ ಕೆಲಸ ಮಾಡುತ್ತಿದ್ದರ ಪರಿಣಾಮ ಮೈಯೆಲ್ಲ ಬೆವರಿನ ಸ್ನಾನಮಾಡಿದ ಹಾಗೆ ಆಗಿತ್ತು. ಕುತೂಹಲ ಸಂತೋಷಗಳಿಗೆ ಕಡಿವಾಣ ಹಾಕಿಕೊಳ್ಳಲು ಸಾಧ್ಯವಾಗದೇ ಕೂಡಲೇ ಮನೆಯಕಡೆ ಧಾವಿಸಿದೆ ಅವಸರಾವಸರವಾಗಿ ಸ್ನಾನ ,ಊಟ ಮುಗಿಸಿ ಹತ್ತಿರದಲ್ಲೇ ಇರುವ ನಮ್ಮ ಶಾಲಾ ವಿದ್ಯಾರ್ಥಿನಿಯಾದ ನಾಗಾಂಜಲಿಯ ಮನೆಯಕಡೆ ಧಾವಿಸಿದೆ . ಮುಂಜಾನೆ ಜನರಿಲ್ಲದೇ ಬಿಕೋ ಎನ್ನುತ್ತಿದ್ದ ಅವಳ ಮನೆಯಲ್ಲಿ ಮಧ್ಯಾಹ್ನದ ಹೊತ್ತಿಗೆ ಜನವೋ ಜನ ! ಹೆಚ್ಚಿನವರೆಲ್ಲ ಮಾಧ್ಯಮದವರೇ ಆಗಿದ್ದರು.ಒಬ್ಬರ ನಂತರ ಒಬ್ಬರು ನಾಗಾಂಜಲಿಯ ಹಾಗೂ ಆಕೆಯ ತಂದೆತಾಯಿಯರ ಸಂದರ್ಶನ ಭಾವ ಚಿತ್ರಕ್ಕಾಗಿ‌ ಪ್ರಯತ್ನಿಸುತ್ತಿದ್ದರು .ಎಲ್ಲ ಟಿವಿ ಮಾಧ್ಯಮದಲ್ಲೂ ನಾಗಾಂಜಲಿ !


ಆಕೆಯ ಸಾಧನೆಗೆ ಅಭಿನಂದನೆಗಳ ಮಹಾಪೂರವೇ ಹರಿದುಬಂತು.
ಶಾಸಕರಾದಿಯಾಗಿ ಜನಪ್ರತಿನಿಧಿಗಳು ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಂಡವರು, ಅಧಿಕಾರಿಗಳು , ವಿಜ್ಞಾನಿಗಳು ಶಿಕ್ಷಣ ಸಂಸ್ಥೆಗಳ ವತಿಯಿಂದ ಹಾಗೂ ಅನೇಕ ಸಂಘ ಸಂಸ್ಥೆಗಳವರುಲ ನಾಗಾಂಜಲಿಯನ್ನು ಸನ್ಮಾನಿಸಿ ಹರಸಿದರು.


ದೂರದೂರಿನ ಹಲವರು ಆಕೆಗೆ ದೂರವಾಣಿಯ ಮೂಲಕ ಅಭಿನಂದಿಸಿದರು.
ಸರಸ್ವತಿ ಕೊಂಕಣ ಮಹೇಶ್ ಪಿ ಯು ಕಾಲೇಜಿನ ವತಿಯಿಂದ ಆಕೆ ಎರಡು ವರ್ಷಗಳ ಸಂಪೂರ್ಣ ಉಚಿತ ಶಿಕ್ಷಣದ ಘೋಷಣೆಯೂ ಆಯಿತು.ತಾನು ಮುಂದೆ ವೈದ್ಯೆಯಾಗುತ್ತೇನೆಂದು ಎಲ್ಲರ ಬಳಿಯೂ ನಾಗಾಂಜಲಿ ತನ್ನ ಭವಿಷ್ಯದ ಕನಸನ್ನು ಹಂಚಿಕೊಂಡಳು.


ಇದು ಆಕೆಯ ಜೀವನದ ಅಮೂಲ್ಯ ಕ್ಷಣ.ಅವಳ ಹೆತ್ತವರಿಗೆ,ಹುಟ್ಟೂರಿಗೆ ಕಲಿಸಿದ ಶಾಲೆಗೆ ಅವಿಸ್ಮರಣೀಯ ಕ್ಷಣ.

ನಾಗಾಂಜಲಿ ಎಂಬ ನಗು ಮೊಗದ ಬಾಲೆ ಕೊಂಕಣದ ಸರಸ್ವತಿ ವಿದ್ಯಾಕೇಂದ್ರವೆಂಬ ಶಾಲೆ ಸೇರಿ ಸದಾ ಹಸನ್ಮುಖಿ,ಮಿತ ಭಾಷಿ ತಾನಾಯಿತು ತನ್ನ ಪಾಡಾಯಿತು ಎಂಬಂತೆ ಎಲ್ಲಿಯೂ ತನ್ನನ್ನು ಅತಿಯಾಗಿ ತೋರಿಸಿಕೊಳ್ಳದೆಯೇ ಬೆಳೆದವಳು. ಆಕೆಯಷ್ಟೇ ಮುದ್ದಾದ ಕೈಬರಹ ಹೇಳಿದಷ್ಟನ್ನೂ ಚಾಚೂ ತಪ್ಪದೇ ಬರೆವ ಬರೆದುದನು ಸ್ಮರಿಸಿ ಹೇಳುವ ಕಲೆ ಆಕೆಗೆ ಕರತಲಾಮಲಕ. ಪಠ್ಯೇತರ ಚಟುವಟಿಕೆಯ ಪ್ರಬಂಧ ಬರೆಹ ಅವಳಿಗೆ ಅಚ್ಚು ಮೆಚ್ಚು.ಕೆಲವೊಮ್ಮೆ ಎಲ್ಲೋ ಕಳೆದು ಹೋದವಳಂತೆ ಮುಖಮುದ್ರೆ ಹಾಕಿ ಕುಳಿತಿರುವ ಈಕೆಗೆ ಸದಾ ಪುಸ್ತಕದ ವಿಷಯಗಳದ್ದೇ ಧ್ಯಾನ.

RELATED ARTICLES  ವ್ಯಕ್ತಿಯ ಗುರುತು ಸಿಕ್ಕರೆ ಮಾಹಿತಿ ನೀಡಲು ವಿನಂತಿ.


ಒಮ್ಮೊಮ್ಮೆ ಇವಳ ಅವಸ್ಥೆಯನ್ನು ನೆನಪಿಸುವಾಗ ಅಂದು ಅಕ್ಕ ಮಹಾದೇವಿ ಚನ್ನಮಲ್ಲಿಕಾರ್ಜುನನಲ್ಲದೇ ಅನ್ಯರಿಲ್ಲ ಎಂದು ಏಕತಾನತಳಾಗಿ ಹೇಳಿದ ಹಾಗೆ ಈ ಮುಗುದೆ ನಾಗಾಂಜಲಿ ಗೆ ಪಠ್ಯಪುಸ್ತಕ ವಲ್ಲದೇ ಅನ್ಯವಿಲ್ಲ .ಇಂದಿಗೂ ಮನೆಯಲ್ಲಿ ಅವಳು ಬಾಯ್ದೆರೆಯಾಗಿಯೇ ಓದುತ್ತಾಳಂತೆ.


ಹಾಗೆ ನೋಡಿದರೆ ಈ ಬಾರಿ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ಸಿ ವಿ ಎಸ್ ಕೆ                ಹೈ ಸ್ಕೂಲಿನ ಹತ್ತನೇ ತರಗತಿಯ ಬ್ಯಾಚ್ ಅತ್ಯಂತ ಉತ್ತಮವಾದ ಬ್ಯಾಚ್ ಆಗಿತ್ತು.ನಾಗಾಂಜಲಿಯ ಹಾಗೇ ಪೂರ್ಣ ಫಲಿತಾಂಶ ಪಡೆಯ ಬಹುದಾದ ಇನ್ನೂ ಕೆಲವು ವಿದ್ಯಾರ್ಥಿಗಳು ಇದ್ದರು.ಕೆಲವರಿಗೆ ಒಂದೆರಡು ಅಂಕಗಳು ಕಡಿಮೆ ಆಗಿದೆ. ನೂರಾ ಇಪ್ಪತ್ತೊಂಬತ್ತು ವಿದ್ಯಾರ್ಥಿಗಳಲ್ಲಿ ಎಲ್ಲರೂ ಶೇ ೭೫  ಪಡೆದವರೇ ಆಗಿದ್ದಾರೆ.ಎಸ್ ಎಸ್ ಎಲ್ ಸಿಯ ಫಲಿತಾಂಶದಲ್ಲಿ ಸಂಪೂರ್ಣ ಅಂಕ ನೀಡುವ ಪರಿಪಾಠ ಆರಂಭ ಆಗಿ ಕೆಲವು ವರ್ಷಗಳು ಕಳೆದಿದೆ.ಹಾಗೆ ನೋಡಿದರೆ ಭಾಷಾ ವಿಷಯದಲ್ಲಿ ನೂರಕ್ಕೆ ನೂರು ಅಂಕ ಸಾಧುವೆ ? ಯಾವುದೇ ಉತ್ತರಕ್ಕಿಂತ ಉತ್ತಮವಾದ ಉತ್ತರದ ಸಾಧ್ಯತೆ ಇರುವುದು ಭಾಷಾ ವಿಷಯಗಳಲ್ಲಿ ಮಾತ್ರ ಎಂಬ ಜಿಜ಼್ಞಾಸೆ ಇದೆ.ಅದೇನೇ ಇದ್ದರೂ ಈ ರೀತಿಯ ಫಲಿತಾಂಶ ನೀಡುವ ಪರಂಪರೆ ಆರಂಭಗೊಂಡ ಕಾಲದಿಂದಲೂ ಕೊಂಕಣ ಪ್ರತಿವರ್ಷವೂ ನೂರಕ್ಕೆ ನೂರರೊಂದಿಗೆ ಪೂರ್ಣ ಅಂಕದ ಪ್ರಥಮ ಸ್ಥಾನದ ನಿರೀಕ್ಷೆಯಲ್ಲಿ ಇತ್ತು .ಅಷ್ಟು ಅದಮ್ಯವಾದ ವಿಶ್ವಾಸಕ್ಕೆ ಕಾರಣವೆಂದರೆ ಈ ಸಂಸ್ಥೆಯ ಕಲಿಕೆಯು ಕೇವಲ ಇಲಾಖಾ ನಿಯಮಾವಳಿಗೆ ಅಂಟಿಕೊಳ್ಳದೇ ರಾಷ್ಟ್ರೀಯತೆ,ಸಂಸ್ಕಾರ ಮೊದಲಾದ ಸುವಿಚಾರಗಳ ಹೂರಣದ ಶಿಕ್ಷಣ ಕೊಂಕಣದ ಧ್ಯೇಯವಾಗಿದ್ದು ಪ್ರತಿ ತಿಂಗಳಲ್ಲಿ ಸರಿಸುಮಾರು ಮೂರು ದಿನ ಇಲ್ಲಿ ವಿಭಿನ್ನವಾದ ಕಾರ್ಯಕ್ರಮಗಳ ಜರುಗುತ್ತವೆ. ವಿದ್ಯಾರ್ಥಿಗಳು ಇವುಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಾರೆ.ಆಟೋಟ ಮನರಂಜನೆ ಕೃಷಿ, ತೋಟಗಾರಿಕೆ,ಜಲಸಂರಕ್ಷಣೆ ಪರಿಸರಪ್ರೇಮದ ಪಾಠಗಳು ದೊರೆಯುತ್ತದೆ.ನಮ್ಮ ನಾಡಿನ ಅನೇಕ ಸಾಧು ಸಂತರು,ಸಾಧಕರು ,ಶಿಕ್ಷಣಪ್ರೇಮಿಗಳು ಕೊಂಕಣದ ನೆಲವನ್ನು ಪುನೀತ ಗೊಳಿಸಿದ್ದಾರೆ.

RELATED ARTICLES  ಎರಡು ಲಾರಿಗಳ ನಡುವೆ ಅಪಘಾತ : ಓರ್ವನ ಸ್ಥಿತಿ ಗಂಭೀರ.


ಇವೆಲ್ಲದರ ಜೊತೆ ಪಠ್ಯಬೋಧನೆ ಹಾಗೂ ಇದರ ಫಲಿತಾಂಶಗಳು ಉಪ  ಉತ್ಪನ್ನವಾಗಿ ದೊರೆಯಬೇಕು ಎಂಬ ಸಂಸ್ಥೆಯ ಆಶಯ ಸಾಕಾರ ಗೊಂಡಿದೆ. ಇಂದು ಕೊಂಕಣದ ನಾಗಾಂಜಲಿ ಇಡೀ ರಾಜ್ಯದಲ್ಲಿ ಜಿಲ್ಲೆಗೆ ಕೀರ್ತಿ ತಂದಿದ್ದಾಳೆ.


ವೈಯಕ್ತಿಕವಾಗಿ ಅವಳನ್ನು ಅಭಿನಂದಿಸಲು ಶನಿವಾರ ಸಾಯಂಕಾಲ ಅವಳ ಮನೆಗೆ ನನ್ನ ಕುಟುಂಬದೊಂದಿಗೆ ಹೋಗಿದ್ದೆ .ನಾನು ಹಾಗೂ ನನ್ನ ಮಡದಿ ಹರ್ಷಿತಾ ಅವಳಿಗೆ ಬೋಧಿಸಿದ ಭಾಗ್ಯವನ್ನು ಪಡೆದವರು ! ಬಹಳ ವಿನೀತಳಾಗಿ ನಮ್ಮನ್ನು ಬರಮಾಡಿಕೊಂಡವಳು ,ಸರ್ ನಾನು ಮುಂದೆ ಎಂ ಬಿ ಬಿ ಎಸ್ ಓದಿ ಡಾಕ್ಟರ್ ಆಗ್ತೇನೆ ಹಾಗೇ ನೀವು ಯಾವಾಗಲೂ ತರಗತಿಯಲ್ಲಿ ಹೇಳ್ತಾ ಇರ್ತಿದ್ದೀರಿ ಆಯ್ ಏ ಎಸ್ ಪಾಸ್ ಮಾಡಿ ಅಂತ ನಾನು ಖಂಡಿತ ಆಯ್ ಏ ಎಸ್ ಪಾಸ್ ಮಾಡಿ ಅಧಿಕಾರಿ ಆಗ್ತೇನೆ ಅಂತ ಆತ್ಮ ವಿಶ್ವಾಸದಿಂದ ಹೇಳಿದಳು.
ಒಬ್ಬ ಶಿಕ್ಷಕ ತರಗತಿಯಲ್ಲಿ ವಿದ್ಯಾರ್ಥಿಗಳಿಗೆ  ಹುರುದುಂಬಿಸಿ ಹೇಳುವ ಮಾತಿನ‌ ಶಕ್ತಿಯ ಅಘಾಧತೆಯ  ಅವರಿವಾಗಿ ನನಗೆ ಆಕೆಯ ಮಾತಿನ ಪ್ರಖರತೆ ಅತೀವ ಆನಂದವನ್ನು ಉಂಟು ಮಾಡಿತು .
ನಾಗಾಂಜಲಿಯ ಬ್ಯಾಚ್ ನಲ್ಲಿ ಓದುವ ಅನೇಕ ನನ್ನ ವಿದ್ಯಾರ್ಥಿಗಳು ಭವಿಷ್ಯದ ಆಯ್ ಏ ಎಸ್ ಅಧಿಕಾರಿಗಳಾಗುವ ಭರವಸೆ ನೀಡಿದ್ದಾರೆ.ಹಾಗೂ ಬಹುತೇಕ ಎಲ್ಲರೂ ಅರ್ಹರಾಗಿದ್ದಾರೆ .

ಜೀವನದ ಸಂಧ್ಯಾ ಕಾಲದಲ್ಲಿ ಮುಂದೊಂದು ದಿನ ಈ ದೇಶದ ಹಿರಿಯ ಅಧಿಕಾರಿ ನನ್ನ ಮುಂದೆ ಬಂದು ಸರ್ ನಾನು ನಿಮ್ಮ ವಿದ್ಯಾರ್ಥಿ ಇಂದು ಆಯ್ ಏ ಎಸ್ ಅಧಿಕಾರಿ ಎಂದು ಹೆಮ್ಮೆಯಿಂದ ಹೇಳಿದ್ದನ್ನು ಕೇಳಿ ಅಭಿಮಾನ ಹೊಂದುವ ದಿನಗಳು ಎಂದು ಬರುವವೋ ಎಂಬ  ನಿರೀಕ್ಷೆಯಲ್ಲಿ ಇದ್ದೇನೆ.

ಚಿದಾನಂದ ಭಂಡಾರಿ ಕಾಗಾಲ.