ಕುಮಟಾ: ಬ್ರಹ್ಮ ಕ್ರಿಯೇಷನ್ಸ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಕಿರುಚಿತ್ರ ಆಚೆ ಮೇ. 26 ರಂದು ಪಟ್ಟಣದ ನೆಲ್ಲಿಕೇರಿ ಹಳೆಯ ಬಸ್ ನಿಲ್ದಾಣದ ಆವಾರದಲ್ಲಿ ಸಂಜೆ 6 ಗಂಟೆಗೆ ಬಿಡುಗಡೆಗೊಳ್ಳಲಿದೆ ಎಂದು ಚಿತ್ರ ನಿರ್ದೇಶಕ ವಿನಾಯಕ ಬ್ರಹ್ಮೂರು ತಿಳಿಸಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡ ಅವರು, ಕಾರ್ಯಕ್ರಮದಲ್ಲಿ ಆಚೆ ಟ್ಯಾಲೆಂಟ್ ಹಂಟ್ ಅವಾರ್ಡ್ ವಿತರಣೆ ಹಾಗೂ ಭಟ್ಕಳದ ಸೂಪರ್‍ಸ್ಟಾರ್ ಡ್ಯಾನ್ಸ್ ಅಕಾಡೆಮಿ ತಂಡದಿಂದ ಡ್ಯಾನ್ಸ್ ಧಮಾಕಾ ನಡೆಯಲಿದೆ. ಶಾಸಕ ದಿನಕರ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಉದ್ಯಮಿ ಸುಬ್ರಾಯ ವಾಳ್ಕೆ ಅಧ್ಯಕ್ಷತೆ ವಹಿಸಲಿದ್ದಾರೆ. ಶಾಸಕ ಸುನೀಲ ನಾಯ್ಕ, ಶಿವಾನಂದ ಹೆಗಡೆ ಕಡತೋಕಾ, ರಾಜಗೋಪಾಲ ಅಡಿ, ಭೀಮಣ್ಣ ನಾಯ್ಕ, ಶ್ರೀನಿವಾಸ ಹೆಬ್ಬಾರ, ಜಿ.ಜಿ.ಶಂಕರ, ನಾಗೇಶ ಭಟ್ಟ ಮುಂತಾದವರು ವೇದಿಕೆಯಲ್ಲಿರುವರು ಎಂದರು.
ಚಿತ್ರದ ನಾಯಕ ದಯಾನಂದ ಬಿಳಗಿ ಮಾತನಾಡಿ, ನನಗೆ ಇದೊಂದು ಹೊಸ ತರಹದ ಅನುಭವ. ಎಲ್ಲ ವಯಸ್ಸಿನವರೂ ನೋಡುವಂತಹ ಚಿತ್ರ ಇದಾಗಿದೆ. ಅದೇ ರೀತಿ ಆಚೆ ಚಿತ್ರತಂಡದಿಂದ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಈ ಎಲ್ಲಾ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕಲಾಭಿಮಾನಿಗಳು ಆಗಮಿಸಬೇಕೆಂದು ಕೋರಿಕೊಂಡರು.
ನಂತರ ಸಹ ನಟರಾದ ಹರೀಶ ಹಿರಿಯೂರು, ಜಯದೇವ ಬಳಗಂಡಿ ಚಿತ್ರದ ಬಗ್ಗೆ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿ, ವಿನಾಯಕ ಬ್ರಹ್ಮೂರಿನಂತಹ ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸಿ ಎಂದರು. ಸುದ್ದಿಗೋಷ್ಠಿಯಲ್ಲಿ ನಾಗರಾಜ (ಸ್ನೇಹಜೀವಿ)ಕಡ್ಲೆ ಇದ್ದರು.