ರಾಯಚೂರು, : ಸಾಮಾನ್ಯವಾಗಿ ತೀರ್ಥಕ್ಷೇತ್ರಕ್ಕೆ ಹೋದಾಗ ಅಲ್ಲಿಯ ನದಿಯಲ್ಲಿ ಪುಣ್ಯಸ್ನಾನ ಮಾಡಿ ದೇವರ ದರ್ಶನ ಪಡೆಯುವುದು ವಾಡಿಕೆ. ಆದರೆ ಈ ಬರ ಭೀಕರತೆಯಿಂದಾಗಿ ತೀರ್ಥಕ್ಷೇತ್ರಗಳಲ್ಲಿ ನೀರು ಇಲ್ಲದೆ ಭಕ್ತರು ನಿರಾಸೆಯಾಗಿದ್ದಾರೆ. ಭಕ್ತರ ಕಾಮಧೇನು ಎಂದು ಕರೆಯುವ ರಾಯರ ಕ್ಷೇತ್ರದಲ್ಲಿಯೂ ನದಿ ನೀರಿಗೆ ಬರ ಬಂದಿದೆ.
ಭಕ್ತರ ಕಾಮಧೇನು, ಕಲ್ಪವೃಕ್ಷ ಎಂದು ಕರೆಯುವ ಪೂಜ್ಯಾಯ ರಾಘವೇಂದ್ರರ ಪುಣ್ಯ ಕ್ಷೇತ್ರ ಮಂತ್ರಾಲಯದಲ್ಲಿ ತುಂಗಭದ್ರಾ ನದಿ ಹರಿಯುತ್ತಿದೆ. ತುಂಗಭದ್ರಾ ನದಿ ಸಾಮಾನ್ಯವಾಗಿ ಮಳೆಗಾಲದಲ್ಲಿ ತುಂಬಿ ಹರಿಯುತ್ತದೆ. ಏಪ್ರಿಲ್, ಮೇ ತಿಂಗಳಲ್ಲಿ ನೀರಿನ ಹರಿವು ಕಡಿಮೆಯಾಗಿರುತ್ತದೆ. ಆದರೆ ಈ ಭಾರಿ ಭೀಕರ ಬರದ ಹಿನ್ನೆಲೆಯಲ್ಲಿ ತುಂಗಭದ್ರಾ ನದಿಯು ಮಾರ್ಚ್ ತಿಂಗಳ ಆರಂಭದಲ್ಲಿಯೇ ಬತ್ತಿ ಹೋಗಿದೆ.
ಮಂಜುನಾಥೇಶ್ವರನ ಪಕ್ಕದಲ್ಲೇ ಹರಿಯುವ ನೇತ್ರಾವತಿ ನದಿಯಲ್ಲಿ ನೀರಿನ ಹರಿವು ತೀರಾ ಕಡಿಮೆಯಾಗಿದೆ. ಈ ಹಿನ್ನೆಲೆಯಲ್ಲಿ ಶ್ರೀ ಕ್ಷೇತ್ರಕ್ಕೆ ಬರಬೇಕೆನ್ನುವ ಭಕ್ತರು ತಮ್ಮ ಪ್ರವಾಸವನ್ನು ಕೆಲ ದಿನಗಳ ಕಾಲ ಮುಂದೂಡಬೇಕೆಂದು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಮನವಿ ಮಾಡಿಕೊಂಡಿದ್ದರು. ಯಾತ್ರಾರ್ಥಿಗಳ ಉಪಯೋಗಕ್ಕೆ ಅಧಿಕ ಪ್ರಮಾಣದ ನೀರು ಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಪ್ರವಾಸ ಮುಂದೂಡಬೇಕೆಂದು ಅವರು ಭಕ್ತರಲ್ಲಿ ವಿನಂತಿ ಮಾಡಿ ಪ್ರಕಟಣೆ ನೀಡಿದ್ದರು. ಇದರ ಬೆನ್ನಲ್ಲೇ ಮಂತ್ರಾಲಯ ಪಕ್ಕದಲ್ಲೇ ಹರಿಯುವ ತುಂಗಭದ್ರಾ ನದಿಯೂ ಬತ್ತಿಹೋಗಿದ್ದು, ಭಕ್ತರಿಗೆ ಪುಣ್ಯಸ್ನಾನ ಇಲ್ಲದಂತಾಗಿದೆ.
ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ದರ್ಶನಕ್ಕೆ ಬರುವ ಭಕ್ತರು ತುಂಗಭದ್ರಾ ನದಿಯಲ್ಲಿ ಪುಣ್ಯಸ್ನಾನ ಮಾಡಿಕೊಂಡು ರಾಯರ ದರ್ಶನ ಪಡೆಯುತ್ತಿದ್ದರು. ಆದರೆ ತುಂಗಭದ್ರಾ ನದಿಯಲ್ಲಿ ನೀರು ಇಲ್ಲದ ಹಿನ್ನೆಲೆ, ಮಠದಿಂದ ಅನತಿ ದೂರದಲ್ಲಿರುವ ನದಿ ದಡದಲ್ಲಿ ಕೊಳವೆ ಬಾವಿ ಕೊರೆಸಿದ್ದಾರೆ. ಅಲ್ಲಿ ನಲ್ಲಿ ಅಳವಡಿಸಿ ಆ ನೀರಿನಲ್ಲೇ ಪುಣ್ಯಸ್ನಾನ ಮಾಡುತ್ತಿದ್ದಾರೆ.
ರಾಯರ ಸನ್ನಿಧಾನಕ್ಕೆ ಆಗಮಿಸಿ ತುಂಗಭದ್ರಾ ನದಿಯಲ್ಲಿ ಪುಣ್ಯಸ್ನಾನ ಮಾಡುತ್ತಿದ್ದ ಲಕ್ಷಾಂತರ ಭಕ್ತರಿಗೆ ನಿರಾಸೆಯಾಗಿದೆ. ಪುಣ್ಯಸ್ನಾನವನ್ನು ತುಂಗಭದ್ರಾ ನದಿಯಲ್ಲಿ ಮಾಡದೆ, ತಾವು ವಾಸ್ತವ್ಯ ಹೂಡಿರುವ ಲಾಡ್ಜ್ಗಳಲ್ಲಿ ಸ್ನಾನ ಮಾಡುವ ಅನಿವಾರ್ಯತೆ ಎದುರಾಗಿದೆ. ಸಂಪ್ರದಾಯಕ್ಕಾದರೂ ಸ್ನಾನ ಮಾಡಲು ನದಿಗೆ ನೀರು ಬಿಡಬೇಕು ಎಂದು ಭಕ್ತರು ಒತ್ತಾಯಿಸುತ್ತಿದ್ದಾರೆ.
ಕಡು ಬೇಸಿಗೆಯ ಸಮಯದಲ್ಲಿ ರಾಯರ ಸನ್ನಿಧಿ ಮಂತ್ರಾಲಯದಲ್ಲಿ ನೀರಿನ ಸಮಸ್ಯೆ ಇರುವ ಹಿನ್ನೆಲೆಯಲ್ಲಿ ಈ ಬಾರಿಯ ಬಜೆಟ್ನಲ್ಲಿ ರಾಜ್ಯ ಸರಕಾರ ಬ್ರೀಜ್ ಕಂ ಬ್ಯಾರೇಜ್ ನಿರ್ಮಿಸುವ ಘೋಷಣೆ ಮಾಡಿದೆ. ಈ ಘೋಷಣೆಗೆ ತೆಲಂಗಾಣ ಹಾಗೂ ಆಂಧ್ರ ಸರಕಾರಗಳು ವಿರೋಧಿಸದಿದ್ದರೆ ನಿಗಿದಿತ ಸಮಯಕ್ಕೆ ಸೇತುವೆ ಕಾರ್ಯ ಪೂರ್ಣಗೊಳ್ಳುತ್ತದೆ. ಈ ಕೆಲಸ ಬೇಗ ಪೂರ್ಣಗೊಳ್ಳಲಿ ಎಂಬುದು ಭಕ್ತರ ಆಶಯವಾಗಿದೆ.
ಮೂಲ: ಸುದ್ದಿ 18