ಹೊನ್ನಾವರ: ಹೊಸಾಕುಳಿಯ ಹಳ್ಳಿಗೊಂದು ಘನತೆ ತಂದ ಹುಡುಗಿಯರು……ಸಾಧಕಿಯರಿಗೆ ಸನ್ಮಾನ ಕಾರ್ಯಕ್ರಮ ದಿನಾಂಕ 18/05/2019 ರಂದು ಹೊಸಾಕುಳಿಯ ಲಕ್ಷ್ಮೀನಾರಾಯಣ ದೇವಸ್ಥಾನದಲ್ಲಿ ಸುಸಂಪನ್ನಗೊಂಡಿತು. ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಉತ್ತರಕನ್ನಡ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ ಅಂಕಿತಾ ಶ್ರೀಧರ ಭಟ್ಟ, ಕರ್ನಾಟಕ ವಿಶ್ವವಿದ್ಯಾಲಯದ ಬಿ.ಬಿ.ಎ ದಲ್ಲಿ 7ನೇ ರ್ಯಾಂಕ್ ಗಳಿಸಿದ ಕಾವ್ಯಾ ಎಂ. ಭಟ್ಟ, ಎಸ್.ಎಸ್.ಎಲ್.ಸಿ ಕನ್ನಡ ಮಾಧ್ಯಮದಲ್ಲಿ ತಾಲೂಕಿಗೆ ತೃತೀಯ ಸ್ಥಾನ ಗಳಿಸಿದ ನಯನಾ ಗಣಪತಿ ಹೆಗಡೆ ಇವರಿಗೆ ಸನ್ಮಾನ ನಡೆಯಿತು.
ಉದ್ಘಾಟಕರಾಗಿ ಆಗಮಿಸಿದ ಶ್ರೀಯುತ ದಿನಕರ ಶೆಟ್ಟಿಯವರು ಹೊಸಾಕುಳಿಯ ಜನ ನಮ್ಮ ಜೊತೆ ಅಧಿಕಾರ ಇದ್ದಾಗಲೂ ಅಧಿಕಾರ ಇಲ್ಲದಾಗಲೂ ಅಭಿಮಾನ ತೋರಿದ್ದಾರೆ…ಅವರ ಆಕಾಂಕ್ಷೆಗಳಿಗೆ ಖಂಡಿತ ಸ್ಪಂದಿಸುತ್ತೇನೆ. ವಿದ್ಯಾರ್ಥಿಗಳ ಸಾಧನೆ ಮೆಚ್ಚುವಂತಹುದು… ಅದರಲ್ಲೂ ನನ್ನ ಕ್ಷೇತ್ರ ಇವತ್ತು ವಿದ್ಯಾರ್ಥಿಗಳಿಂದ ನಾಡು ಗುರುತಿಸುವಂತಾಗಿದೆ ಎಂದು ಹೆಮ್ಮೆಯ ನುಡಿಗಳನ್ನಾಡಿದರು. ಸಂಘಟಕರಾದ ಎಚ್ ಆರ್ ಗಣೇಶ ಎಲ್ಲರನ್ನೂ ಹೃತ್ಪೂರ್ವಕವಾಗಿ ಸ್ವಾಗತಿಸುವುದರ ಜೊತೆಗೆ ಶಾಸಕರಲ್ಲಿ ಸಲ್ಲಿಸಿದ್ದ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಶಾಸಕರು ಸಂತೇಗುಳಿಯ ಕ್ರೀಡಾಂಗಣವನ್ನು ಉನ್ನತ ದರ್ಜೆಗೇರಿಸುವಲ್ಲಿ ಸರ್ವಪ್ರಯತ್ನ ಮಾಡುವುದಾಗಿ ಭರವಸೆಯಿತ್ತರು.
ದಿವ್ಯ ಉಪಸ್ಥತಿ ವಹಿಸಿದ್ದ ಶ್ರೀ ಸುಬ್ರಹ್ಮಣ್ಯ ಭಟ್ಟ ಅರ್ಚಕರು ಕರಿಕಾನಮ್ಮ ದೇವಾಲಯ, ಇವರು ಮಾತನಾಡಿ ವಿದ್ಯಾರ್ಥಿಗಳ ಸಾಧನೆ ಇಲ್ಲಿಗೆ ನಿಲ್ಲದೇ ನಾವು ನಿಮ್ಮನ್ನು ಪದೇ ಪದೇ ಸನ್ಮಾನಿಸುವಂತಹ ಸಾಧನೆ ತೋರಿ ಸಮಾಜಕ್ಕೆ ಹೆಸರು ತರಬೇಕೆಂದರು. ಶ್ರೀಮತಿ ಶ್ರೀಕಲಾ ಶಾಸ್ತ್ರಿ ಮಾತನಾಡುತ್ತಾ ಸಂಸ್ಕಾರವಿಲ್ಲದ ಶಿಕ್ಷಣ ವ್ಯರ್ಥ ವಿದ್ಯಾರ್ಥಿಗಳು ವಿದ್ಯೆಯ ಜೊತೆ ವಿನಯವಂತರಾಗಿ ದೇಶಸೇವೆಗೆ ಮುಂದಾಗಬೇಕೆಂದು ಕರೆಯಿತ್ತರು. ಪ್ರಕೃತಿಯೇ ನಮ್ಮ ಮೊದಲ ಗುರು…ನಮ್ಮ ವಿದ್ಯಾರ್ಥಿಗಳಿಗೆ ಅಂಕಗಳಿಕೆಯೊಂದೇ ಮುಖ್ಯವಲ್ಲ ಬದುಕಿನಲ್ಲೂ ಗೆಲ್ಲಬೇಕೆಂದು ಡಾ|| ಸಂಧ್ಯಾ ಹೆಗಡೆ ಅಭಿಪ್ರಾಯಪಟ್ಟರು. ಶ್ರೀಮತಿ ಕರುಣಾತಾಯಿಯವರು ಮಾತನಾಡುತ್ತಾ ನಾವು ದೂರದ ಕಾರವಾರದಿಂದ ಬಂದವರಾದರೂ ಹೊಸಾಕುಳಿಯ ಜನರ ಪ್ರೀತಿಯ ಜೊತೆ ಸೇರಿ ಇಲ್ಲಿನವರೇ ಆಗಿ ಹೋಗಿದ್ದೇವೆಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಯುವ ಉತ್ಸಾಹಿ ಸತ್ವಾಧಾರ ಫೌಂಡೇಶನ್ ಸಂಸ್ಥಾಪಕ ಶ್ರೀಯುತ ಗಣೇಶ ಜೋಷಿ ಕನಸು ಕಟ್ಟುವವರು ಹಾಗೂ ಕನಸು ಬಿತ್ತುವವರು ಎಲ್ಲರೂ ಹೊಸಾಕುಳಿಯಲ್ಲಿದ್ದಾರೆ. ನಿಸ್ವಾರ್ಥ ಪ್ರೀತಿ ಎಲ್ಲಕ್ಕಿಂತ ಹೆಚ್ಚೆಂದು ಮನೋಜ್ಞವಾಗಿ ಮಾತಮಾಡಿದರು. ಸನ್ಮಾನಿತರಾದ ಸಾಧಕ ವಿದ್ಯಾರ್ಥಿನಿಯರು ನಾವು ನಿಮ್ಮ ಈ ಪ್ರೋತ್ಸಾಹವನ್ನು ಜೀವನ ಪರ್ಯಂತ ಮರೆಯಲಾರೆವೆಂದು ಸಂತಸ ವ್ಯಕ್ತಪಡಿಸಿದರು. ಅಭಿನಂದಿಸಿ ಮಾತನಾಡಿದ ಯುವ ಸಾಹಿತಿ, ಸಂಘಟಕ ಸಂದೀಪ ಭಟ್ಟ….ಹೊಸಾಕುಳಿಯಲ್ಲಿ ಸಾಂಸ್ಕೃತಿಕ ಬೌದ್ಧಿಕ ಪರಂಪರೆ ಇಂದು ನಿನ್ನೆಯದಲ್ಲ…ಇಲ್ಲಿನ ಜನ ಆರ್ಥಿಕತೆಯ ಸಂಕಷ್ಟ ಪರಿಸ್ಥಿತಿಯನ್ನೂ ಮೀರಿ ತಮ್ಮ ಶೃದ್ಧೆಯಿಂದ ಮೇಲೇರಿ ಬಂದವರು. ಬರೀ ಇತಿಹಾಸವನ್ನಷ್ಟೇ ಸಂಭ್ರಮಿಸುವವರಾಗದೇ ಭವಿಷ್ಯದಲ್ಲಿ ನಮ್ಮ ಊರಿನ ಮಕ್ಕಳು ಆರಕ್ಷಕರಾಗಿ, ವೈದ್ಯರಾಗಿ, ಅಭಿಯಂತರರಾಗಿ, ಕೃಷಿಕರಾಗಿ, ವಿಜ್ಞಾನಿಗಳಾಗಿ, ಡೆಂಟಿಸ್ಟರಾಗಿ, ಸಮಾಜಕ್ಕೆ ನೆರವಾಗಬೇಕೆಂದರು. ಅದ್ಭುತ ಸಾಧನೆ ಮಾಡಿದ ಮಕ್ಕಳನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.
ಹೊಸಾಕುಳಿ ವಿ.ಎಸ್.ಎಸ್. ಅಧ್ಯಕ್ಷರಾದ ಶ್ರೀಯುತ ಪ್ರಕಾಶ ಹೆಗಡೆಯವರು ಒಳ್ಳೆಯ ಕೆಲಸಗಳಿಗೆ ಸದಾ ಊರು ಒಂದಾಗಿರುತ್ತದೆ…ಎಂದು ಶುಭ ಹಾರೈಸಿದರು. ಹೆಸರಾಂತ ಶಿಲ್ಪಿ ಅರುಣ ಆಚಾರಿ ಕವಲಕ್ಕಿಯವರು ಕಾರ್ಯಕ್ರಮದ ವೇದಿಕೆಗೊಂದು ಕಳೆ ತಂದರು.
ಸಭಾಧ್ಯಕ್ಷತೆ ವಹಿಸಿದ್ದ ಶ್ರೀಯುತ ಶ್ರೀಪಾದ ಶೆಟ್ಟರು ಮಾತನಾಡುತ್ತಾ ನಮ್ಮದು ಹೊಸಾಕುಳಿ ಪಂಚಗ್ರಾಮ ಇಲ್ಲಿನ ಜನರಲ್ಲಿ ವೈಚಾರಿಕತೆಯ ಪ್ರವಾಹವಿದೆ. ಸತ್ವವಿದೆ. ಕಷ್ಟದಲ್ಲೂ ಆತ್ಮೀಯತೆ ಬಿಟ್ಟು ನಡೆಯದ ಸಂಸ್ಕಾರ ನಮ್ಮವರದ್ದು…..ವಿದ್ಯಾರ್ಥಿನಿಯರು ಇನ್ನೂ ಕೀರ್ತಿವಂತರಾಗಿ ಬೆಳೆಯಲಿ. ಇದೊಂದು ಸದಭಿರುಚಿಯ ಸದ್ಭಾವದ ಕಾರ್ಯಕ್ರಮ ಎಂದು ಸಂತಸ ವ್ಯಕ್ತಪಡಿಸಿದರು.
ಶ್ರೀಯುತ ಪ್ರಶಾಂತ ಮೂಡಲಮನೆ ಕಾರ್ಯಕ್ರಮವನ್ನು ಸುಂದರವಾಗಿ ನಿರೂಪಿಸಿ ವಂದಿಸಿದರು. ವಿವಿಧ ಭಾಗಗಳಿಂದ ಆಗಮಿಸಿದ್ದ ಗಣ್ಯರು, ಶಿಕ್ಷಕರು, ಊರ ಮಹನೀಯರು, ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲು ಕಾರಣರಾದರು.