ಕುಮಟಾ : ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಮತ ಎಣಿಕೆ ಪ್ರಕ್ರಿಯೆ ಮೇ 23ರಂದು ಜಿಲ್ಲೆಯ ಕುಮಾಟಾ ಪಟ್ಟಣದಲ್ಲಿರುವ ಡಾ.ಎ.ವಿ.ಬಾಳಿಗಾ ಕಾಲೇಜಿನಲ್ಲಿ ನಡೆಯಲಿದ್ದು ,ಮತ ಎಣಿಕೆಗೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ.
16ನೇ ಲೋಕಸಭೆ ಅವಧಿ ಪೂರ್ಣಗೊಂಡು 17ನೇ ಲೋಕಸಭೆ ರಚನೆಗೆ ಮಾರ್ಚ್10ರಂದು ಭಾರತ ಚುನಾವಣಾ ಆಯೋಗ ಚುನಾವಣೆ ಘೋಷಿಸಿ ದೇಶದಲ್ಲಿ 7 ಹಂತದಲ್ಲಿ ಚುನಾವಣೆ ನಡೆಸಿದೆ. ಈ ಪೈಕಿ ಕರ್ನಾಟಕ ರಾಜ್ಯದಲ್ಲಿ 2019 ಏಪ್ರಿಲ್ 18 ಮತ್ತು 23ಕ್ಕೆ ಎರಡು ಹಂತದಲ್ಲಿ ಚುನಾವಣೆಗೆ ಮಾರ್ಚ್ 28ರಂದು ಅಧಿಸೂಚನೆ ಹೊರಡಿಸಲಾಗಿತ್ತು. ಅದರಂತೆ. ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಮತದಾನ ಏಪ್ರಿಲ್ 23ರಂದು ನಡೆದು ಮೇ 23ರಂದು ಮತ ಎಣಿಕೆ ನಡೆಯುತ್ತಿದೆ.
ರಾಷ್ಟ್ರೀಯ ಮತ್ತು ರಾಜ್ಯ ಪಕ್ಷಗಳಾದ ಬಿಜೆಪಿಯ ಅನಂತಕುಮಾರ್ ಹೆಗಡೆ, ಜೆಡಿಎಸ್‍ನ ಆನಂದ್ ಆಸ್ನೋಟಿಕರ್, ಬಹುಜನ ಸಮಾಜ ಪಕ್ಷದ ಸುಧಾಕರ ಕೀರ ಜೋಗಳೇಕರ್, ನೋಂದಾಯಿತ ರಾಜಕೀಯ ಪಕ್ಷಗಳಾದ ರಾಷ್ಟ್ರೀಯ ಸಮಾಜ ಪಕ್ಷದ ನಾಗರಾಜ ನಾಯ್ಕ್, ರಾಷ್ಟ್ರೀಯ ಜನಸಂಭಾವನ ಪಕ್ಷದ ನಾಗರಾಜ್ ಶೇಠ್, ಭಾರತ ಭೂಮಿ ಪಕ್ಷದ ಮಂಜುನಾಥ ಸದಾಶಿವ, ಉತ್ತಮ ಪ್ರಜಾಕೀಯ ಪಕ್ಷದ ಸುನೀಲ್ ಪವಾರ್, ಪಕ್ಷೇತರ ಅಭ್ಯರ್ಥಿಗಳಾದ ಅನಿತಾ ಶೇಠ್, ಕುಂದಬಾಯಿ ಗಣಪತಿ ಪುರಲೇಕರ್, ಚಿದಾನಂದ ಹರಿಜನ, ನಾಗರಾಜ್ ಅನಂತ್ ಶಿರಾಲಿ, ಬಾಲಕೃಷ್ಣ ಪಾಟೀಲ್, ಮೊಹಮದ್ ಝಬರೂದ್ ಖತೀಬ್ ಒಟ್ಟು 13 ಮಂದಿ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿ ಚುನಾವಣೆ ಎದುರಿಸಿ ಫಲಿತಾಂಶಕ್ಕೆ ಕಾಯುತ್ತಿದ್ದಾರೆ.
ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಮತ ಎಣಿಕೆ ಕುಮಟಾದ ಡಾ.ಎ.ವಿ.ಬಾಳಿಗ ಕಾಲೇಜಿನಲ್ಲಿ ಮೇ 23ರಂದು ನಡೆಯಲಿದ್ದು ಯಾವುದೇ ಗೊಂದಲಗಳಿಗೆ ಆಸ್ಪದವಾಗದಂತೆ ನಡೆಯಲು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಡಾ.ಹರೀಶ್‍ಕುಮಾರ್ ಕೆ. ಇವರ ನೇತೃತ್ವದಲ್ಲಿ ಸಕಲ ಸಿದ್ಧತೆ ನಡೆದಿದೆ.
ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು ಎಂಟು ವಿಧಾನಸಭಾ ಕ್ಷೇತ್ರಗಳಿದ್ದು ಜಿಲ್ಲೆಯ ಹಳಿಯಾಳ (ಶೇ.73.43), ಕಾರವಾರ (ಶೇ.72.28), ಕುಮಟಾ (ಶೇ.77.12), ಭಟ್ಕಳ(71.79), ಶಿರಸಿ(ಶೇ.78.38), ಯಲ್ಲಾಪುರ (ಶೇ.77.75) ಹಾಗೂ ಬೆಳಗಾವಿ ಜಿಲ್ಲೆಯ ಖಾನಾಪುರ (ಶೇ.70.68) ಹಾಗೂ ಕಿತ್ತೂರು (ಶೇ.72.33) ಕ್ಷೇತ್ರಗಳು ಈ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಸೇರಿವೆ. ಒಟ್ಟು 15,52,134 ಮತದಾರರಿದ್ದು 11,49,609 ಮತದಾರರು ಮತ ಚಲಾಯಿಸಿ ಕ್ಷೇತ್ರದಲ್ಲಿ ಶೇ.74.07ರಷ್ಟು ಮತದಾನವಾಗಿತ್ತು.
ಮತ ಎಣಿಕೆಗಾಗಿ ನಿಯೋಜನೆಗೊಂಡಿರುವ 368 ಸಿಬ್ಬಂದಿ ಮತ್ತು ಇಟಿಪಿಬಿಎಸ್‍ನ 24 ಮಂದಿ ಸೇರಿ ಒಟ್ಟು 392 ಸಿಬ್ಬಂದಿಗೆ (ಡಿ ದರ್ಜೆ ನೌಕರರನ್ನು ಹೊರತುಪಡಿಸಿ) ಈಗಾಗಲೇ ಎರಡು ಹಂತದಲ್ಲಿ ತರಬೇತಿ ನೀಡಲಾಗಿದೆ.
ಮತ ಎಣಿಕೆ ನಡೆಯುತ್ತಿರುವ ಡಾ.ಎ.ವಿ.ಬಾಳಿಗ ಕಾಲೇಜಿನ ಸುತ್ತ 200 ಮೀಟರ್ ಪಾಸಲೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಅಲ್ಲದೆ ಮತ ಎಣಿಕೆ ಕೇಂದ್ರದಲ್ಲಿ ನಾಲ್ಕು ಹಂತದ ತೀವ್ರ ಭದ್ರತೆ ಇರಲಿದ್ದು ಮತ ಎಣಿಕೆ ಕೇಂದ್ರಕ್ಕೆ ಅಭ್ಯರ್ಥಿ ಮತ್ತು ರಾಜಕೀಯ ಪಕ್ಷಗಳ ಚುನಾವಣಾ ಏಜೆಂಟರು, ಮತ ಎಣಿಕೆ ಸಿಬ್ಬಂದಿಗೆ ಮಾತ್ರ ಪ್ರವೇಶ ಕಲ್ಪಿಸಲಾಗಿದೆ.
ಭದ್ರತೆಗೆ ಜಿಲ್ಲಾ ಪೊಲೀಸ್ ಅಧೀಕ್ಷಕರು, ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕರು, 3 ಡಿವೈಎಸ್‍ಪಿ, 10 ಸಿಪಿಐ, 19 ಪಿಎಸ್‍ಐ, 29 ಎಎಸ್‍ಐ, 680 ಪೊಲೀಸ್ ಸಿಬ್ಬಂದಿ, 2 ಕೆಎಸ್‍ಆರ್‍ಪಿ, 6 ಡಿಎಆರ್, 3 ಸಿಎಪಿಎಫ್ ನಿಯೋಜಿಸಲಾಗಿದೆ.