ಕುಮಟಾ:ಹಿಂದೂ ವಿಧಿಜ್ಞ ಪರಿಷತ್‍ನ ಮುಖ್ಯ ವಕೀಲ ಸಂಜೀವ ಪುನಾಲೆಕರ ಹಾಗೂ ಇವರ ನಿಕಟವರ್ತಿ ವಿಕ್ರಮ್ ಭಾವೆ ಅವರನ್ನು ಸಿಬಿಐ ಬಂಧಿಸಿರುವುದನ್ನು ಖಂಡಿಸಿ ಪಟ್ಟಣದ ಗಿಬ್ ವೃತ್ತದ ಬಳಿ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ
ಪ್ರತಿಭಟನೆ ನಡೆಸಲಾಯಿತು.
ಸನಾತನಸಂಸ್ಥೆಯ ಜಿಲ್ಲಾ ಸಮನ್ವಯಕ ಶರತಕುಮಾರ ಮಾತನಾಡಿ, ಹಿಂದೂ ಭಯೋತ್ಪಾದಕತೆಯ ಹೆಸರಲ್ಲಿ ಹಿಂದೂ ಪರ ಹೋರಾಟಗಾರರನ್ನು ಬಂಧಿಸಿ ದಮನಿಸುವ ಕಾರ್ಯ ನಡೆಯುತ್ತಿದೆ. ಮಾಲೆಗಾಂವ್ ಸೋಟ ಪ್ರಕರಣದಲ್ಲಿ ಸಾಧ್ವಿ ಪ್ರಜ್ಞಾ ಸಿಂಗ್ ಸೇರಿದಂತೆ ಹಲವರನ್ನು ಯಾವುದೇ ಸಾಕ್ಷ್ಯಾಧಾರವಿಲ್ಲದೆಯೂ 6-7 ವರ್ಷಗಳ ಕಾಲ ಜೈಲಿನಲ್ಲಿ ಹಾಕಿದರು. ಇಂಥ ಸಂದರ್ಭಗಳಲ್ಲಿ ಸ್ವಯಂಪ್ರೇರಿತವಾಗಿ ಹಿಂದೂಪರ ಹೋರಾಟಗಾರರಿಗೆ ಕಾನೂನು ನೆರವು ನೀಡುತ್ತಿರುವ ಹಿಂದೂ ವಿಧಿಜ್ಞ ಪರಿಷತ್‍ನ ಮುಖ್ಯ ವಕೀಲ ಸಂಜೀವ ಪುನಾಲೆಕರ ಹಾಗೂ ಅವರ ನಿಕಟವರ್ತಿ ವಿಕ್ರಮ್ ಭಾವೆ ಇವರನ್ನು ಪುಣೆಯ ನರೇಂದ್ರ ದಾಬೋಲ್ಕರ್ ಕೊಲೆ ಪ್ರಕರಣದಲ್ಲಿ ಬಂಧಿಸಿರುವುದು ಖಂಡನೀಯ ಎಂದರು.
ಕೂಡಲೇ ಸಂಜೀವ ಪುನಾಲೆಕರ ಹಾಗೂ ವಿಕ್ರಮ್ ಭಾವೆಯವರನ್ನು ಬಿಡುಗಡೆಗೊಳಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಸತೀಶ ಶೇಟ, ಸುಜಾತಾ ಶಾನಭಾಗ, ಸಂದೀಪ ಭಂಡಾರಿ ಸೇರಿದಂತೆ ಇನ್ನಿತರ ಪ್ರಮುಖರು ಇದ್ದರು.