ಭಟ್ಕಳ: ಹೊಳೆಯ ಪಕ್ಕದಲ್ಲಿ ಗುಂಡಿ ತೋಡಿ ನೀರು ಸರಬರಾಜು ಮಾಡುತ್ತಿರುವ ಖಾಸಗಿ ವ್ಯಕ್ತಿ ವಿರುದ್ಧ ಗ್ರಾಮಸ್ಥರು ಪಂಚಾಯತ್ ಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ ಘಟನೆ ಭಟ್ಕಳ ತಾಲೂಕಿನ ಮುಟ್ಟಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ನಡೆದಿದೆ.
ಮುಟ್ಟಳ್ಳಿ ದಂಡಿ ಹೊಳೆಯಲ್ಲಿ ಅಷ್ಟು ಇಷ್ಟು ನೀರು ಹರಿಯುತ್ತಿದ್ದು, ಭಟ್ಕಳ ತಾಲೂಕಿನ ಎಲ್ಲಾ ಭಾಗದಲ್ಲಿಯೂ ನೀರಿಗಾಗಿ ಹಾಹಾಕಾರ ಎದ್ದಿರುವಾಗ ಇಲ್ಲಿನ ಜನತೆಗೆ ಬಾವಿಯಲ್ಲಿಯೂ ಅಲ್ಪಸ್ವಲ್ಪ ನೀರು ಇರಲು ದಂಡಿ ಹೊಳೆಯಲ್ಲಿನ ನೀರು ಕಾರಣವಾಗಿತ್ತು.
ಇದನ್ನೇ ಬಂಡವಾಳವಾಗಿಸಿಕೊಂಡ ವ್ಯಕ್ತಿಯೊಬ್ಬ ಖಾಸಗಿ ವ್ಯಕ್ತಿಯೊಬ್ಬರ ಜಾಗಾದಲ್ಲಿ ದಂಡಿ ಹೊಳೆ ಅಂಚಿನಲ್ಲಿ ಸುಮಾರು 6 ಅಡಿ ಹೊಂಡ ತೊಡಿ ಅದರಿಂದ ಸಾವಿರಾರು ಲೀಟರ್ ನೀರನ್ನು ರಾತ್ರೋರಾತ್ರಿ ಸಾಗಿಸುತ್ತಿರುವುದು ಊರಿನವರ ಕೆಂಗಣ್ಣಿಗೆ ಗುರಿಯಾಗಿತ್ತು.
ಅಲ್ಲದೇ ದಂಡಿ ಹೊಳೆಯಲ್ಲಿ ಹರಿಯುತ್ತಿದ್ದ ಅಲ್ಪಸ್ವಲ್ಪ ನೀರನ್ನು ಕೂಡಾ ತಮ್ಮ ಹೊಂಡಕ್ಕೆ ಬರುವಂತೆ ಜೆಸಿಬಿ ಮೂಲಕ ಹೊಂಡ ಮಾಡಿಕೊಂಡಿದ್ದು ಕೂಡಾ ಊರಿನವರ ಆಕ್ರೋಶ ವ್ಯಕ್ತಪಡಿಸಿದರು.
ಕಳೆದ 24ರಂದು ರಾತ್ರಿ ಖಾಸಗಿ ವ್ಯಕ್ತಿಯ ವಾಹನವನ್ನು ತಡೆದು ಹೊಳೆಯ ನೀರನ್ನು ಸರಬರಾಜು ಮಾಡದಂತೆ ತಾಕೀತು ಮಾಡಿದ್ದ ಮಹಿಳೆಯರೂ ಸೇರಿದಂತೆ ಊರಿನ ನೂರಾರು ಜನರು ಯಾವುದೇ ಕಾರಣಕ್ಕೂ ನೀರನ್ನು ತೆಗೆಯದಂತೆ ತಾಕೀತು ಮಾಡಿದ್ದರು ಎನ್ನಲಾಗಿದೆ. ಆದರೂ ನೀರು ತೆಗೆಯುವ ಪಂಪ್ ಹಾಗೂ ನೀರಿನ ಹೊಂಡವನ್ನು ಹಾಗೆಯೇ ಇಟ್ಟಿದ್ದರಿಂದ ಗ್ರಾಪಂಗೆ ಮುತ್ತಿಗೆ ಹಾಕಿ ತಮ್ಮ ಆಕ್ರೋಶ ಹೊರಹಾಕಿದರು.
ಸಂಬಂಧಪಟ್ಟ ಇಲಾಖೆಯವರು ನೀರು ಸರಬರಾಜು ಮಾಡುವವರು ಯಾವ ಮೂಲದಿಂದ ತರುತ್ತಾರೆ ಎನ್ನುವುದನ್ನು ಖಾತ್ರಿ ಪಡಿಸಿಕೊಳ್ಳಬೇಕು ಎನ್ನುವುದೂ ಕೂಡಾ ಗ್ರಾಮಸ್ಥರ ಆಗ್ರಹವಾಗಿದೆ. ಈ ಬಗ್ಗೆ ಇಲಾಖೆ ಅಧಿಕಾರಿಗಳು ಯಾವ ರೀತಿ ಸ್ಪಂದಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.