ಬೆಂಗಳೂರು: ಕೇರಳಕ್ಕೆ ಗೋಕಾಕ ಮಾರ್ಗವಾಗಿ ಗೋವುಗಳನ್ನು ಸಾಗಿಸುತ್ತಿದ್ದಾಗ ಅವುಗಳ ರಕ್ಷಣೆಗೆ ಮುಂದಾದ ಗೋಕಾಕ ಯುವಕ ಶಿವು ಉಪ್ಪಾರರವರನ್ನು ಬೆಳಗಾವಿ ಬಾಗೇವಾಡಿ ಬಸ್ ನಿಲ್ದಾಣದಲ್ಲಿ ಹತ್ಯೆ ಮಾಡಲಾಗಿದೆ ಎಂದು ಪ್ರಾಥಮಿಕ ಮಾಹಿತಿಗಳಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ರಾಮಚಂದ್ರಾಪುರ ಮಠ ಆಗ್ರಹಿಸಿದೆ.
ನಾಡಿನಲ್ಲಿ ನಿರಂತರವಾಗಿ ಗೋಸಂರಕ್ಷಕರ ಹತ್ಯೆ ನಡೆಯುತ್ತಿರುವುದು ಆತಂಕಕಾರಿಯಾಗಿದೆ, ಪ್ರಾಣಾರ್ಪಣೆಗೈದ ಶಿವು ಉಪ್ಪಾರ ಪ್ರಕರಣಕ್ಕೆ ಸಂಬಂಧಿಸಿ ಸಮಗ್ರ ವಿಚಾರಣೆ ನಡೆಸಿ ಹಂತಕರಿಗೆ ಸೂಕ್ತ ಶಿಕ್ಷೆಯಾಗುವಂತೆ ಮಾಡಬೇಕು ಹಾಗೂ ಗೋಕಳ್ಳ ಸಾಗಣೆ ಮಾಡುತ್ತಿರುವವರಿಗೆ ದಿಟ್ಟ ಸಂದೇಶವನ್ನು ರವಾನಿಸಬೇಕು ಎಂದು ಈಗಾಗಲೇ ಗೋಸಂರಕ್ಷಣೆ ಕಾರ್ಯದಲ್ಲಿ ತೊಡಗಿರುವ ರಾಮಚಂದ್ರಾಪುರ ಮಠ ಆಗ್ರಹಿಸಿದೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಮಠ ಪುಣ್ಯ ಕೋಟಿ ನಾಡಿನಲ್ಲಿ ಇತ್ತೀಚಿಗೆ ನಿರಂತರವಾಗಿ ಗೋಕಳ್ಳ ಸಾಗಣೆ ನಡೆಯುತ್ತಿರುವುದು ಹಾಗೂ ಗೋಸಂರಕ್ಷಕರ ಮೇಲೆ ಸಾಲುಸಾಲು ದಾಳಿಯಾಗುತ್ತಿರುವುದು ಖೇದಕರ ಮತ್ತು ಆತಂಕಕಾರಿಯಾಗಿದ್ದು, ಇವುಗಳಿಗೆ ಸರ್ಕಾರ ಸೂಕ್ಷ್ಮವಾಗಿ ಸ್ಪಂದಿಸಬೇಕಿದೆ. ಗೋರಕ್ಷಣೆ ಜೊತೆಗೆ ಗೋಸಂರಕ್ಷಣೆಯಲ್ಲಿರುವವರ ರಕ್ಷಣೆಯೂ ಆಗಬೇಕು ಎಂದು ಶ್ರೀಮಠದ ಆಗ್ರಹವಾಗಿದ್ದು, ಸರ್ಕಾರ ಗೋಸಂರಕ್ಷಣೆಗೆ ಬದ್ದವಾಗಿರಬೇಕು, ಗೋಸಂರಕ್ಷಕರ ರಕ್ಷಣೆ, ಸಂವರ್ಧನೆಗಳಿಗೆ ಪೂರಕ ವಾತವರಣ ನಿರ್ಮಿಸಬೇಕು ಇದು ಸರ್ಕಾರದ ಕರ್ತವ್ಯ ಎಂಬುದನ್ನು ಮರೆಯಬಾರದು, ಪ್ರಸ್ತುತ ಗೋಸಂರಕ್ಷಕ ಶಿವು ಉಪ್ಪಾರ ಹತ್ಯೆಯ ವಿಚಾರದಲ್ಲಿ ಸಮಗ್ರ ತನಿಖೆಗೆ ಸರ್ಕಾರ ತಕ್ಷಣ ಕಾರ್ಯಪ್ರವೃತ್ತವಾಗಬೇಕು ಎಂದು ಆಗ್ರಹಿಸಿದೆ.