ಕುಮಟಾ : ಜಿಲ್ಲೆಯಲ್ಲಿ ಕಿರುಚಿತ್ರವೊಂದನ್ನು ಅದ್ಧೂರಿಯಾಗಿ ಬಿಡುಗಡೆಗೊಳಿಸುತ್ತಿರುವುದು ಇದೇ ಮೊದಲಾಗಿದ್ದು ವಿನಾಯಕ ಬ್ರಹ್ಮೂರು ಅವರದು ಒಂದು ದೊಡ್ಡ ಸಾಹಸ, ತಾಲೂಕಿಗೂ ಕೂಡ ಹೆಮ್ಮೆ ತರುವಂತದ್ದು ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.
ಭಾನುವಾರ ಗಿಬ್ ಹೈಸ್ಕೂಲ್ ಮೈದಾನದಲ್ಲಿ ನಡೆದ ವಿನಾಯಕ ಬ್ರಹ್ಮೂರು ಅವರ ಆಚೆ ಕಿರುಚಿತ್ರ ಬಿಡುಗಡೆ ಮಾಡಿ ಅವರು ಮಾತನಾಡಿದರು. ಹಿಂದೆ ಮೂಕಿ ಸಿನಿಮಾ, ನಂತರ ಸಿನಿಮಾ ಸ್ಕೋಪ್ ಚಿತ್ರಗಳ ನಂತರ ಈಗ ಕಿರು ಚಿತ್ರಗಳತ್ತ ಜನರು ಹೆಚ್ಚೆಚ್ಚು ಆಕರ್ಷಿತರಾಗುತ್ತಿದ್ದಾರೆ. ಇದಕ್ಕೆ ಕಾರಣ ಜನರಿಗೆ ಸಮಯ ಇಲ್ಲದಿರುವುದೇ ಆಗಿದೆ ಎಂದು ಅವರು ಹೇಳಿದರು.
ನಾವೆಲ್ಲ ಹಿಂದೆ ರಾಜಕುಮಾರ ಚಿತ್ರಗಳನ್ನು ನೋಡಿ ಆನಂದಿಸಿದವರು. ಚಿತ್ರಗಳನ್ನು ನೋಡಿ ಆನಂದಿಸುವಾಗ ಅದರ ನಿರ್ಮಾಣದ ಹಿಂದಿನ ಶ್ರಮ ಪ್ರೇಕ್ಷಕರಿಗೆ ಗೊತ್ತಾಗುವುದಿಲ್ಲ. ಆರು ಕಿರು ಚಿತ್ರಗಳನ್ನು ತಯಾರಿಸಿದ ವಿನಾಯಕ ಬ್ರಹ್ಮೂರು ಅನೇಕ ಪ್ರತಿಭೆಗಳನ್ನು ಹೊರತಂದಿರುವುದು ವಿಶೇಷ ಎಂದರು.
ಜಿ.ಪಂ. ಸದಸ್ಯ ಹಾಗೂ ಕೆಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಶಿವಾನಂದ ಹೆಗಡೆ ಕಡತೋಕಾ ಮಾತನಾಡಿ ಜಿಲ್ಲೆಯ ಪ್ರತಿಭೆಗಳಿಗೆ ಉತ್ತಮ ಅವಕಾಶ ನೀಡುತ್ತಿರುವ ವಿನಾಯಕ ಬ್ರಹ್ಮೂರು ಅವರ ಕಾರ್ಯ ಶ್ಲಾಘನೀಯ. ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ನಿರ್ದೇಶಕರಾಗಿ ಹೊರಹೊಮ್ಮಿರುವುದು ಸಂತಸದ ಸಂಗತಿ ಎಂದರು.
ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಭಾಸ್ಕರ ಪಟಗಾರ ಮಾತನಾಡಿ, ಪ್ರಾದೇಶಿಕ ಸೊಗಡಿನ ಚಿತ್ರಗಳು ಹೆಚ್ಚೆಚ್ಚು ಬರಬೇಕು. ಹಿಂದೆ ಯಾಣ ಪರಿಸರದಲ್ಲಿ ನಿರ್ಮಿಸಿದ ನಮ್ಮೂರು ಮಂದಾರ ಹೂವೆ ಚಿತ್ರ ಜಿಲ್ಲೆಯ ಪ್ರವಾಸೋದ್ಯಮ ಬೆಳೆಯುವಂತೆ ಮಾಡಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಚಿತ್ರ ನಿರ್ಮಾಪಕ ಹಾಗೂ ಉದ್ಯಮಿ ಸುಬ್ರಾಯ ವಾಳ್ಕೆ ಮಾತನಾಡಿ, ವಿನಾಯಕ ಬ್ರಹ್ಮೂರು ಕಿರು ಚಿತ್ರದಿಂದ ಬೆಳ್ಳೆತೆರೆಗೆ ಹೋಗಿ ಸಾಧನೆ ಮಾಡಲು ಪ್ರಯತ್ನಿಸಬೇಕು. ಬರವಣಿಗೆಯಲ್ಲಿ ಚುರುಕಾಗಿದ್ದವರನ್ನು ಸಿನಿಮಾ ರಂಗ ಸೆಳೆಯುತ್ತದೆ. ಆದರೆ ಅಲ್ಲಿ ಬೆಳೆಯಲು ಪ್ರಯತ್ನ, ಅದೃಷ್ಟ ಎಲ್ಲವೂ ಬೇಕು ಎಂದರು.
ಉತ್ತರ ಕನ್ನಡ ಶಾರ್ಟ್ ಮೂವಿ ಕ್ಲಬ್‍ಗೆ ಚಾಲನೆ
ಆಚೆ ಚಿತ್ರದ ಬಿಡುಗಡೆ ಸಮಾರಂಭದಲ್ಲಿ ಶಾಸಕ ದಿನಕರ ಶೆಟ್ಟಿ ಅವರು ಉತ್ತರಕನ್ನಡ ಶಾರ್ಟ್ ಮೂವಿ ಕ್ಲಬ್‍ಗೆ ಚಾಲನೆ ನೀಡಿದರು. ಇದರ ಸಂಸ್ಥಾಪಕ ವಿನಾಯಕ ಬ್ರಹ್ಮೂರು ಸೇರಿದಂತೆ ವಿವಿಧ ಕಿರುಚಿತ್ರ ತಂಡಗಳ ಉಪಸ್ಥಿತಿಯಲ್ಲಿ ವಿದ್ಯುಕ್ತ ಚಾಲನೆ ದೊರೆಯಿತು. ಜಿಲ್ಲೆಯಲ್ಲಿ ಕಿರುಚಿತ್ರದ ಆಸಕ್ತರಿಗೆ ಒಂದು ಉತ್ತಮ ವೇದಿಕೆಯಾಗಿ ಪ್ರತಿಭಾನ್ವೇಷಣೆಯ ಜೊತೆ ಸಮಾಜಮುಖಿ ಕಾರ್ಯಗಳಲ್ಲಿ ಪಾಲ್ಗೊಳ್ಳುವುದು ಇದರ ಮುಖ್ಯ ಉದ್ದೇಶವಾಗಿದೆ ಎಂದು ವಿನಾಯಕ ಬ್ರಹ್ಮೂರು ಹೇಳಿದರು.
ಗಮನ ಸೆಳೆದ “ಟ್ಯಾಲೆಂಟ್ ಹಂಟ್ ಅವಾರ್ಡ್”
ಆಚೆ ಚಿತ್ರತಂಡ ಆಯೋಜಿಸಿದ್ದ ಟ್ಯಾಲೆಂಟ್ ಹಂಟ್ ಅವಾರ್ಡ್ ಕಾರ್ಯಕ್ರಮವು ಅದ್ಭುತ ಯಶಸ್ಸನ್ನು ಪಡೆಯಿತಲ್ಲದೇ ಭಾನುವಾರ ನಡೆದ ಸಮಾರಂಭದಲ್ಲಿ ಫಲಿತಾಂಶವನ್ನು ಘೋಷಿಸಲಾಯಿತು. ವಿವಿಧ ಸ್ಪರ್ಧೆಗಳ ವಿಜೇತರು ಟ್ರೋಪಿ ಎತ್ತಿ ಹಿಡಿದು ಸಂಭ್ರಮಿಸಿದರು. ಬೆಂಗಳೂರು, ಶಿವಮೊಗ್ಗಾ, ಮಂಗಳೂರು ಸೇರಿದಂತೆ ಈ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ವಿವಿಧ ಜಿಲ್ಲೆಯ ಜನರು ಕೂಡ ಸಮಾರಂಭಕ್ಕೆ ಆಗಮಿಸಿದ್ದರು.
‘ಜಾದೂ’ ಮಾಡಿದ ‘ಡ್ಯಾನ್ಸ್ ಧಾಮಾಕಾ’
ಸೂಪರ್‍ಸ್ಟಾರ್ ಡ್ಯಾನ್ಸ್ ಅಕಾಡೆಮಿ ಭಟ್ಕಳ ಅವರ ಡ್ಯಾನ್ಸ್ ಧಮಾಕಾ ಪ್ರೇಕ್ಷಕರನ್ನು ರಂಜಿಸಿತು. ಮುರಳಿ ಮಾಸ್ಟರ್ ಅವರ ಫೈರ್‍ಡ್ಯಾನ್ಸ್ ಮೋಡಿ ಮಾಡಿತು. ಲಕ್ಷ್ಮಣ ಪಟಗಾರ ಅವರ ಜಾದೂ ಪ್ರದರ್ಶನಕ್ಕೆ ಶಿಳ್ಳೆ, ಚಪ್ಪಾಳೆಗಳು ಕೇಳಿ ಬಂದವು. ಸುಮಾ ಶೆಟ್ಟಿ ಶಿರಸಿ ಹಾಗೂ ಎಜೆ ಅರವಿಂದ ಅವರ ಗಾಯನ ಗಮನ ಸೆಳೆಯಿತು.
ಅತಿಥಿಗಳಾಗಿ ಆಗಮಿಸಿದ ಪತ್ರಕರ್ತ ಅಮರನಾಥ ಭಟ್ಟ ಮಾತನಾಡಿದರು. ಜಯದೇವ ಬಳಗಂಡಿ ಸ್ವಾಗತಿಸಿದರು. ನಿರ್ದೇಶಕ ವಿನಾಯಕ ಬ್ರಹ್ಮೂರು ಪ್ರಾಸ್ತಾವಿಕ ಮಾತನಾಡಿದರು. ಜಯದೇವ ಬಳಗಂಡಿ ಸ್ವಾಗತಿಸಿದರು. ವಿವಿಧ ಸ್ಪಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.