ಕುಮಟಾ: ಈಗ ಎಲ್ಲೆಡೆ ನೀರಿಲ್ಲದೇ ಜನತೆ ಪರಿತಪಿಸುತ್ತಿದ್ದಾರೆ. ಬಾವಿ ಕೆರೆಗಳು ಬತ್ತುತ್ತಿದ್ದು ಜನತೆ ಜೀವ ಜಲಕ್ಕಾಗಿ ಹಾಹಾಕಾರ ಪ್ರಾರಂಭಿಸಿದ್ದಾರೆ. ಆದರೆ ಇಲ್ಲೊಂದು ಕುಟುಂಬ ಸಾರ್ವಜನಿಕರಿಗೆ ಉಪಯುಕ್ತ ಕೆಲಸ ಮಾಡಿ ಜನ ಮೆಚ್ಚುಗೆ ಗಳಿಸಿದ್ದಾರೆ. ಅದೇನು ಅಂತೀರಾ ಈ ವರದಿ ನೋಡಿ.
ಕುಮಟಾ ತಾಲೂಕಿನ ಹೊಲನಗದ್ದೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಳಕಾರ ಗ್ರಾಮದಲ್ಲಿ ಒಂದು ಕುಟುಂಬದ ಸದಸ್ಯರೆಲ್ಲರು ಸೇರಿ ಸ್ವ ಪ್ರೇರಣೆಯಿಂದ ಸಾರ್ವಜನಿಕ ಕುಡಿಯುವ ನೀರಿನ ಬಾವಿಯನ್ನು ಶುದ್ಧಗೊಳಿಸಿ ಎಲ್ಲರಿಗೆ ಮಾದರಿಯಾಗಿದ್ದಾರೆ.
ರಾಮ ಮುಕ್ರಿ ಕುಟುಂಬದ ಸದಸ್ಯರೆಲ್ಲರೂ ಸೇರಿ ಗ್ರಾಮದಲ್ಲಿ ಎಲ್ಲರಿಗೂ ನೀರು ಕೊಡುವ ಬಾವಿಯಲ್ಲಿ ತುಂಬಿದ್ದ ಹೂಳನ್ನು ಮೇಲೆತ್ತಿದ್ದಾರೆ. ಹೂಳು ತುಂಬಿದ ಬಾವಿಯಲ್ಲಿ ನೀರು ಮಲಿನವಾಗುತ್ತದೆ ಮತ್ತು ಬತ್ತುತ್ತದೆ. ಹೀಗಾಗಿ ಈ ಕುಟುಂಬ ಯಾರ ನೆರವನ್ನೂ ಪಡೆಯದೆ ಆಳವಾದ ಬಾವಿಯಲ್ಲಿ ಹೂಳನ್ನು ಮೇಲೆತ್ತಿ ಭೇಷ್ ಎನಿಸಿಕೊಂಡಿದೆ.
ಕುಟುಂಬದ ಕಾರ್ಯದಿಂದಾಗಿ ಆ ಗ್ರಾಮದ ಎಲ್ಲರಿಗೂ ಶುದ್ಧ ಕುಡಿಯುವ ನೀರು ಸಿಗುವಂತಾಗಿದೆ.ಸಾವಿರಾರು ಜನರ ಜೀವ ಜಲದ ಬವಣೆ ತಪ್ಪಿಸಿದ ಈ ಕುಟುಂಬದ ಕಾರ್ಯ ನಿಜಕ್ಕೂ ಶ್ಲಾಘನೀಯ ಅಲ್ಲವೇ?
ಈ ಕುಟುಂಬ ಸರ್ಕಾರಕ್ಕೆ ಕಾಯದೆ ಸ್ವ-ಇಚ್ಛೆಯಿಂದ ಸಾಮಾಜಿಕ ಕಾರ್ಯ ಮಾಡಿ ಎಲ್ಲರಿಗೂ ಪ್ರೇರಣೆಯಾಗಿದ್ದಾರೆ ಮತ್ತು ಮಾದರಿಯಾಗಿದ್ದಾರೆ. ಅನೇಕರು ಕೇವಲ ಸರ್ಕಾರವನ್ನು ನಿಂದನೆ ಮಾಡುತ್ತಾ ಕಾಲ ಹರಣ ಮಾಡುತ್ತಿರುತ್ತಾರೆ. ಆದರೆ ಎಲ್ಲರೂ ಒಟ್ಟಾಗಿ ಸೇರಿ ಕೆಲಸ ಮಾಡಿದರೆ ಸಮಸ್ಯೆ ಬೇಗ ಬಗೆ ಹರಿಯುತ್ತದೆ. ಈ ರೀತಿ ಬೇರೆಯವರನ್ನು ಕಾಯದೆ ತಮ್ಮ ಊರಿಗೆ ಅನುಕೂಲವಾಗಲಿ ಎಂದು ಈ ಕುಟುಂಬ ಜನೋಪಯೋಗಿ ಕಾರ್ಯವನ್ನು ಮಾಡಿದೆ. ಈ ಕುಟುಂಬ ಸದಸ್ಯರೆಲ್ಲರಿಗೂ ಅಭಿನಂದನೆಯನ್ನು ಸಲ್ಲಿಸಲೇಬೇಕು.