ರಾಜ್ಯ ಸರ್ಕಾರದ ನೌಕರರಿಗೆ ನಾಲ್ಕನೇ ಶನಿವಾರ ಸಾರ್ವತ್ರಿಕ ರಜೆ ಎಂದು ಘೋಷಣೆ ಮಾಡಲಾಗಿದೆ. ಸರಕಾರಿ ನೌಕರರ ಬಹುದಿನಗಳ ಈ ಬೇಡಿಕೆಯನ್ನು ಈಡೇರಿಸಿ ಕರ್ನಾಟಕ ಸರ್ಕಾರ ಮಹತ್ವದ ಅದೇಶ ಹೊರಡಿಸಿದೆ. ರಾಜ್ಯ ಸರ್ಕಾರಿ ನೌಕರರಿಗೆ ಪ್ರತಿ ತಿಂಗಳ ನಾಲ್ಕನೇ ಶನಿವಾರ ರಜೆ ನೀಡಲಾಗಿದೆಯಾದರೂ 8 ರಜೆಗಳಿಗೆ ಕತ್ತರಿ ಹಾಕಿದೆ. 3 ಸಾಂದರ್ಭಿಕ ರಜೆ ಹಾಗೂ 5 ವಿವಿಧ ಜಯಂತಿ ಆಚರಣೆಯ ರಜೆಗಳನ್ನು ರದ್ದು ಮಾಡಿದೆ.
ಆರನೇ ವೇತನ ಆಯೋಗ ನೀಡಿದ್ದ 2ನೇ ವರದಿಯಲ್ಲಿ ರಜೆಗಳಿಗೆ ಸಂಬಂಧಿಸಿದಂತೆ ಕೆಲವು ಶಿಫಾರಸು ಮಾಡಿತ್ತು. ಸಾಂದರ್ಭಿಕ ರಜೆ ಕಡಿತ, ಜಯಂತಿಗಳಿಗೆ ಇರುವ ರಜೆ ರದ್ದು ಸೇರಿ ಕೆಲ ಸಲಹೆಗಳನ್ನು ಆಯೋಗ ನೀಡಿತ್ತು. 6ನೇ ವೇತನ ಆಯೋಗದ ವರದಿಗೆ ಸಂಬಂಧಪಟ್ಟಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣ ಬೈರೇಗೌಡ ನೇತೃತ್ವದ ಉಪಸಮಿತಿ ವಿವಿಧ ಸಮುದಾಯ, ಸರ್ಕಾರಿ ನೌಕರರ ಸಂಘಟನೆ, ಸರ್ಕಾರಿ ಆಡಳಿತ ಕ್ಷೇತ್ರದ ತಜ್ಞರ ಜೊತೆ ಸಮಾಲೋಚಿಸಿ ಕೆಲವನ್ನು ಶಿಫಾರಸು ಮಾಡಿತ್ತು ಎನ್ನಲಾಗಿದೆ.
ಸಾಂದರ್ಭಿಕ ರಜೆಗಳು ಕಡಿತ:
ಸರ್ಕಾರಿ ನೌಕರರಿಗೆ 15 ಸಾಂದರ್ಭಿಕ ರಜೆ ಇದೆ. ಈ ಪೈಕಿ ಮೂರು ಕಡಿಮೆ ಮಾಡಲು ಶಿಫಾರಸು ಬಂದಿದೆ. ಹೀಗಾಗಿ, ತಿಂಗಳಿಗೆ ಒಂದರಂತೆ ವರ್ಷಕ್ಕೆ 12 ಸಿಎಲ್‍ಗಳು ಮಾತ್ರ ಪ್ರಾಪ್ತವಾಗಲಿವೆ..
ಯಾವ ಯಾವ ಜಯಂತಿಗೆ ರಜೆ ರದ್ದು?
ಕನಕ ಜಯಂತಿ, ಬಸವ ಜಯಂತಿ, ವಾಲ್ಮೀಕಿ ಜಯಂತಿ, ಮಹಾವೀರ ಜಯಂತಿ, ಮಹಾಲಯ ಅಮಾವಾಸ್ಯೆ, ಈದ್ ಮಿಲಾದ್, ಗುಡ್ ಫ್ರೈಡೇ, ಕಾರ್ಮಿಕ ದಿನಾಚರಣೆ ರದ್ದುಪಡಿಸಿ ಅವುಗಳನ್ನು ಕೆಲಸದ ದಿನಗಳನ್ನಾಗಿ ಪರಿವರ್ತಿಸುವುದು. ದೀಪಾವಳಿ ಹಬ್ಬದ ನಿಮಿತ್ತ ನೀಡುವ ರಜೆಗಳಲ್ಲಿ 1ನೇ ಮತ್ತು 3ನೇ ದಿನ ನೀಡುವ ಬದಲು 1ನೇ ಮತ್ತು 2ನೇ ದಿನ ನೀಡಲು ನಿರ್ಧರಿಸಲಾಗಿದೆ.