ಬೆಂಗಳೂರು: ನಾಡಿನ ಹಿರಿಯ ಪತ್ರಕರ್ತರು ಹಾಗೂ ವಿಶ್ವವಾಣಿ ಪತ್ರಿಕೆಯ ಪ್ರಧಾನ ಸಂಪಾದಕರಾದ ಶ್ರೀ ವಿಶ್ವೇಶ್ವರ ಭಟ್ ಅವರ ಮೇಲೆ ಪತ್ರಿಕಾ ವರದಿಯೊಂದರ ಕಾರಣಕ್ಕಾಗಿ ದೂರು ದಾಖಲಿಸಿರುವುದು ಖಂಡನೀಯವಾಗಿದ್ದು, ಪತ್ರಿಕಾರಂಗದ ಮೇಲಿನ ಈ ದಮನಕಾರಿ ನೀತಿಯನ್ನು ಶ್ರೀ ಅಖಿಲ ಹವ್ಯಕ ಮಹಾಸಭೆ ಖಂಡಿಸುತ್ತದೆ.
ಉಪಲಬ್ಧವಾದ ಮಾಹಿತಿಯನ್ನಾಧರಿಸಿ ವರದಿಗಳನ್ನು ಪ್ರಕಟಿಸುವುದು ಮಾಧ್ಯಮಗಳಲ್ಲಿ ಸರ್ವೇಸಾಮಾನ್ಯ. ಸುದ್ದಿ ಮೂಲವನ್ನಾಧರಿಸಿದ ಪತ್ರಿಕಾ ವರದಿ ಪ್ರಕಟಿಸಿದ ಮಾತ್ರಕ್ಕೆ ವಿವಿಧ ಸೆಕ್ಷನ್’ಗಳಡಿಯಲ್ಲಿ ದೂರು ದಾಖಲಿಸಿ ; ಪತ್ರಿಕೆಯನ್ನು ಯಾ ಪತ್ರಕರ್ತರನ್ನು ಪ್ರತಿಬಂಧಿಸಲು ಉದ್ಯುಕ್ತವಾಗಿರುವುದು ಆಡಳಿತ ಪಕ್ಷಕ್ಕೆ ಶೋಭೆತರುವಂತದ್ದಲ್ಲ. ಸಂವಿಧಾನದ ನಾಲ್ಕನೇ ಅಂಗವಾದ ಮಾಧ್ಯಮ ರಂಗವನ್ನು ಈ ರೀತಿಯಾಗಿ ನಿರ್ಬಂಧಿಸಲು ಹವಣಿಸುತ್ತಿರುವುದು ನಿಜಕ್ಕೂ ಆತಂಕಕಾರಿ.
ಸಂವಿಧಾನ ಪ್ರದತ್ತವಾದ ಅವಕಾಶಗಳನ್ನು ಸಂವಿಧಾನ ಪ್ರದತ್ತವಾದ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲು ಬಳಸುತ್ತಿರುವುದು ಖಂಡನೀಯ. ಸರ್ಕಾರ ತನ್ನ ಇತಿಮಿತಿಗಳನ್ನು ಅರ್ಥಮಾಡಿಕೊಂಡು ಈ ತಕ್ಷಣ ದೂರನ್ನು ಹಿಂಪಡೆಯಬೇಕು ಹಾಗೂ ಮಾಧ್ಯಮ ರಂಗದ ಸ್ವಾತಂತ್ರ್ಯವನ್ನು ಕಸಿಯಬಾರದು ಎಂದು ಹವ್ಯಕ ಸಮಾಜದ ಪ್ರಾತಿನಿಧಿಕ ಸಂಸ್ಥೆಯಾದ ಶ್ರೀ ಅಖಿಲ ಹವ್ಯಕ ಮಹಾಸಭೆ ಆಗ್ರಹಿಸುತ್ತದೆ ಎಂದು ಡಾ. ಗಿರಿಧರ ಕಜೆ
ಅಧ್ಯಕ್ಷರು, ಶ್ರೀ ಅಖಿಲ ಹವ್ಯಕ ಮಹಾಸಭಾ(ರಿ) ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.