ಕುಮಟಾ: ಇಲ್ಲಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಕೊಂಕಣ ಎಜ್ಯುಕೇಶನ್ ಟ್ರಸ್ಟಿನ ಸಿ.ವಿ.ಎಸ್.ಕೆ. ಪ್ರೌಢಶಾಲೆಯ ಎಸ್.ಎಸ್.ಎಲ್.ಸಿ. ಹಾಗೂ ಸರಸ್ವತಿ ಪಿ.ಯು. ಕಾಲೇಜಿನ ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಶಿಕ್ಷಕರ ಅಭಿನಂದನಾ ಕಾರ್ಯಕ್ರಮ ಸದ್ಗುರು ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ, ಶ್ರೀ ರಾಮಕ್ಷೇತ್ರ ಮಹಾಸಂಸ್ಥಾನ ನಿತ್ಯಾನಂದ ನಗರ ಧರ್ಮಸ್ಥಳ ಇವರ ದಿವ್ಯ ಸಾನಿಧ್ಯದಲ್ಲಿ ಏರ್ಪಡಿಸಲಾಗಿತ್ತು.
ಎಸ್.ಎಸ್.ಎಲ್.ಸಿಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ಕೀರ್ತಿ ಹೆಚ್ಚಿಸಿದ ಸಿ.ವಿ.ಎಸ್.ಕೆ ಪ್ರೌಢಶಾಲೆಯ ವಿದ್ಯಾರ್ಥಿನಿ ನಾಗಾಂಜಲಿ ನಾಯ್ಕ ಜೊತೆ ರಾಜ್ಯಕ್ಕೆ ಎಂಟು ರ್ಯಾಂಕ್‍ಗಳನ್ನು ಪಡೆದ ಎಂಟು ವಿದ್ಯಾರ್ಥಿಗಳನ್ನು ಹಾಗೂ ಪರೀಕ್ಷೆಯಲ್ಲಿ ಗಮನಾರ್ಹ ಸಾಧನೆಗೈದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳನ್ನು ಈ ಸಂದರ್ಭದಲ್ಲಿ ಪುರಸ್ಕರಿಸಲಾಯಿತು. ಪರೀಕ್ಷೆಯಲ್ಲಿ ಪೂರ್ಣಾಂಕ (625 ಕ್ಕೆ 625) ಗಳಿಸಿ ಅದ್ಭುತ ಸಾಧನೆಗೈದುದಕ್ಕಾಗಿ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ವತಿಯಿಂದ 25,000 ರೂ., ಟ್ರಸ್ಟಿಗಳಾದ ಭರತ ಭಂಡಾರಕರ್ ಇವರ ವೈಯಕ್ತಿಕ 25,000 ರೂ. ಮತ್ತು ಎಂ.ಡಿ.ನಾಯ್ಕ ಮೆಮೋರಿಯಲ್ ಟ್ರಸ್ಟ್ ವತಿಯಿಂದ 5,000 ರೂ. ನಗದನ್ನು ನಾಗಾಂಜಲಿಗೆ ಪುರಸ್ಕಾರವಾಗಿ ನೀಡಲಾಯಿತು. ಅದೇ ರೀತಿ, ಜಿಲ್ಲೆಯಲ್ಲಿ ರ್ಯಾಂಕ್ ಗಳಿಸಿದ ಕೊಂಕಣದ ಸರಸ್ವತಿ ಪಿ.ಯು. ಕಾಲೇಜಿನ ಮಾನಸಾ ಪಂಡಿತ, ಅಂಕಿತಾ ನಾಡಕರ್ಣಿ ಹಾಗೂ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದು ಸಾಧನೆಗೈದ ಇತರೆ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.
ವಿದ್ಯಾರ್ಥಿ ಅನಿಸಿಕೆಯಲ್ಲಿ, ರಾಜ್ಯಕ್ಕೆ ಮೊದಲಿಗಳಾದ ನಾಗಾಂಜಲಿ ಮಾತನಾಡಿ, ಶಾಲೆಯ ಆಡಳಿತ ಮಂಡಳಿ, ಶಿಸ್ತುಬದ್ಧ ಶಿಕ್ಷಕ ವರ್ಗ ಹಾಗೂ ತಂದೆ-ತಾಯಿಗಳ ಪ್ರೋತ್ಸಾಹ ನನ್ನ ಈ ಸಾಧನೆಗೆ ಪ್ರಮುಖ ಕಾರಣವೆಂದೂ, ಮುಂದೆಯೂ ಕಠಿಣ ಅಭ್ಯಾಸ ಹಾಗೂ ಪರಿಶ್ರಮದಿಂದ ಇದೇ ರೀತಿಯ ಸಾಧನೆಗೆ ಪ್ರಯತ್ನಿಸುವೆನೆಂದು ನುಡಿದಳು. ಅದೇ ರೀತಿ, ಸಾಧನೆ ಮಾಡಲು ಮಾರ್ಗದರ್ಶನ ಮಾಡಿದ ಅಂಗಸಂಸ್ಥೆಗಳ ಮುಖ್ಯಾಧ್ಯಾಪಕರುಗಳಿಗೆ ಹಾಗೂ ಶಿಕ್ಷಕರಿಗೆ ಈ ಸಂದರ್ಭದಲ್ಲಿ ಪೂಜ್ಯ ಗುರುವರ್ಯರಿಂದ ಪುರಸ್ಕರಿಸಲಾಯಿತು.
ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವಹಿಸಿ ಜ್ಯೋತಿ ಬೆಳಗಿಸಿ ಉದ್ಘಾಟಿಸಿದ ಶ್ರೀ ಶ್ರೀ ಶ್ರೀ ಸದ್ಗುರು ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ಆಶೀರ್ವಚನ ನೀಡುತ್ತ, ಜೀವನದಲ್ಲಿ ಸುಖ ಅನ್ನುವುದು ಕರ್ಮದಲ್ಲಿದೆ. ಇಂದ್ರಿಯಾತೀತವಾದ ಸುಖ ನಿಜವಾದ ಸುಖವಾಗಿದ್ದು ಶಿಕ್ಷಕರು ತಮ್ಮನ್ನು ತಮ್ಮ ಕಾರ್ಯಕ್ಕೆ ಸಮರ್ಪಿಸಿಕೊಂಡಾಗ ಅದ್ಭುತ ಸಾಧನೆ ಮಾಡಲು ಸಾಧ್ಯ. ಅಂತಹ ಸಾಧ್ಯತೆಯನ್ನು ಕೊಂಕಣ ಶಿಕ್ಷಕ ವರ್ಗ ಮಾಡಿ ರಾಜ್ಯದಲ್ಲಿ ಇಂದು ಪ್ರಥಮ ಸ್ಥಾನಗಳಿಸಿದೆ. ಇದು ನಿಜಕ್ಕೂ ತುಂಬಾ ಶ್ಲಾಘನೀಯ ಹಾಗೂ ಗಣನೀಯ ಸಾಧನೆ ಎಂದು ನುಡಿಯುತ್ತಾ ಆಡಳಿತ ಮಂಡಳಿಯವರ ಸಮರ್ಪಣಾ ಭಾವನೆಯನ್ನು ಮನಸಾರೆ ಕೊಂಡಾಡಿದರು.
ಶಿಕ್ಷಕರ ಪರವಾಗಿ ಚಿದಾನಂದ ಭಂಡಾರಿ ಮಾತನಾಡಿದರು. ಗೌರವ ಕಾರ್ಯದರ್ಶಿಗಳಾದ ಮುರಲೀಧರ ಪ್ರಭು ಪ್ರಾಸ್ಥಾವಿಕವಾಗಿ ಮಾತನಾಡಿದರು. ಟ್ರ್ರಸ್ಟಿಗಳಾದ ರಮೇಶ ಪ್ರಭು ಸ್ವಾಗತಿಸಿದರು. ಅಧ್ಯಕ್ಷರಾದ ವಿಠ್ಠಲ ನಾಯಕ, ಸಹಕಾರ್ಯದರ್ಶಿ ಶೇಷಗಿರಿ ಶಾನಭಾಗ, ಅಶೋಕ ಪ್ರಭು ವೇದಿಕೆಯಲ್ಲಿದ್ದರು.ಶಿಕ್ಷಕರುಗಳ ಪರವಾಗಿ ಚಿದಾನಂದ ಭಂಡಾರಿ ಮಾತನಾಡಿದರು. ಟ್ರಸ್ಟಿಗಳಾದ ಡಿ.ಡಿ.ಕಾಮತ ವಂದಿಸಿದರು. ವಿದ್ಯಾರ್ಥಿಗಳಾದ ಶಿಲ್ಪಾ ಭಟ್ಟ ಸಂಗಡಿಗರು ಪ್ರಾರ್ಥಿಸಿದರು. ಶಿಕ್ಷಕರುಗಳಾದ ಗಣೇಶ ಜೋಶಿ ಹಾಗೂ ಪ್ರಕಾಶ ಗಾವಡಿ ನಿರೂಪಿಸಿದರು.