ಹೊನ್ನಾವರ: ಜನಪ್ರಿಯ ಶಿಕ್ಷಕರಾಗಿ, ಉತ್ತಮ ನಾಟಕಕಾರರಾಗಿ, ಹವ್ಯಾಸಿ ಯಕ್ಷಗಾನ ಕಲಾವಿದರಾಗಿ, ಅನುದಾನಿತ ಮಾಧ್ಯಮಿಕ ಶಾಲಾ ನೌಕರರ ಸಂಘ ಹೊನ್ನಾವರ ಘಟಕದ ಅಧ್ಯಕ್ಷರಾಗಿ, ಹೊನ್ನಾವರದ ನೌಕರರ ಪತ್ತಿನ ಸಹಕಾರಿ ಸಂಘದ ನಿರ್ದೇಶಕರಾಗಿ, ಕಟ್ಟಡ ಸಮಿತಿಯ ಸದಸ್ಯರಾಗಿ, ಶರಾವತಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಯಾಗಿ ಕಳೆದ ಸುಮಾರು 39 ವರ್ಷಗಳ ಕಾಲ ತಮ್ಮ ಅನುಪಮ ಸೇವೆ ಸಲ್ಲಿಸಿ ಜನಮಾನಸದಲ್ಲಿ ನೆಲೆ ನಿಂತಿರುವ ಶ್ರೀ ಕೆ.ಆರ್. ಭಟ್ ಶಿಕ್ಷಕರು ದಿನಾಂಕ 31 /05/ 2019 ರಂದು ಶರಾವತಿ ಪ್ರೌಢಶಾಲೆಯಲ್ಲಿ ಸೇವಾ ನಿವೃತ್ತರಾದರು. ಬಹುಮುಖ ಪ್ರತಿಭೆಯ ಈ ಶಿಕ್ಷಕರನ್ನು ಶಾಲಾ ಮುಖ್ಯಾಧ್ಯಾಪಕರು, ಶಿಕ್ಷಕ ಸಿಬ್ಬಂದಿ ವರ್ಗ, ಶಾಲಾ ಮಕ್ಕಳೆಲ್ಲಾ ಸೇರಿ ಆತ್ಮೀಯತೆಯಿಂದ ಬೀಳ್ಕೊಟ್ಟರು.
1980ರಲ್ಲಿ ಚಿತ್ರಕಲಾ ಶಿಕ್ಷಕರಾಗಿ ಸೇವೆ ಪ್ರಾರಂಭಿಸಿದ ಶ್ರೀ ಕೆ.ಆರ್. ಭಟ್ಟರು ಚಿತ್ರಕಲೆಯ ಜೊತೆಗೆ ಕನ್ನಡ, ಹಿಂದಿ, ಸಮಾಜ ವಿಜ್ಞಾನ, ರೇಖಾಗಣಿತ, ದೈಹಿಕ ಶಿಕ್ಷಣ ಮುಂತಾದ ವಿಷಯಗಳನ್ನು ಬೋಧನೆ ಮಾಡುತ್ತಾ ವಿದ್ಯಾರ್ಥಿಗಳ, ಪಾಲಕರ ಪ್ರೀತಿಗೆ ಪಾತ್ರರಾಗಿದ್ದಾರೆ. ಉತ್ತಮ ಸ್ಕೌಟ್ ಶಿಕ್ಷಕರಾಗಿದ್ದ ಇವರು ಹಲವಾರು ರಾಜ್ಯ ರಾಷ್ಟ್ರಮಟ್ಟದ ಶಿಬಿರಗಳಲ್ಲಿ ಪಾಲ್ಗೊಂಡವರಾಗಿದ್ದರು. ಶಾಲೆಯ ವಾರ್ಷಿಕೋತ್ಸವ, ಶೈಕ್ಷಣಿಕ ಪ್ರವಾಸ, ಪ್ರತಿಭಾ ಕಾರಂಜಿ, ಕ್ರೀಡಾಕೂಟ ಮುಂತಾದ ಕಾರ್ಯಕ್ರಮಗಳಲ್ಲಿ ತಮ್ಮನ್ನು ಸಕ್ರೀಯವಾಗಿ ತೊಡಗಿಸಿಕೊಳ್ಳುತ್ತಿದ್ದರು.
ಶರಾವತಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಯಾಗಿಯೂ ಶ್ರೀಯುತರು ಅನುಪಮ ಸೇವೆಯನ್ನು ನೀಡಿದವರಾಗಿದ್ದಾರೆ.
ಅನುದಾನಿತ ಮಾಧ್ಯಮಿಕ ಶಾಲಾ ನೌಕರರ ಸಂಘ ಹೊನ್ನಾವರ ಘಟಕದ ಅಧ್ಯಕ್ಷರಾಗಿ, ಪತ್ತಿನ ಸಹಕಾರಿ ಸಂಘದ ನಿರ್ದೇಶಕರಾಗಿಯೂ, ಕಟ್ಟಡ ಸಮಿತಿಯ ಸದಸ್ಯರಾಗಿಯೂ ದಕ್ಷ ಸೇವೆಯನ್ನು ನೀಡಿ ಶಿಕ್ಷಕ ಸಿಬ್ಬಂದಿಗಳ ಪ್ರೀತಿಗೆ ಪಾತ್ರರಾಗಿದ್ದಾರೆ.
ಶ್ರೀಯುತರು ಉತ್ತಮ ನಾಟಕ ಹಾಗೂ ಯಕ್ಷಗಾನ ಕಲಾವಿದರು. ರಂಗಭೂಮಿ ಹಾಗೂ ಚಲನಚಿತ್ರ ಕಲಾವಿದರಾದತಂಹ ಮುಖ್ಯಮಂತ್ರಿ ಚಂದ್ರು ರವರಿಂದ ರಂಗ ತರಬೇತಿ ಹೊಂದಿದವರಾಗಿದ್ದು 500ಕ್ಕಿಂತಲೂ ಹೆಚ್ಚಿನ ವಿಭಿನ್ನ ನಾಟಕಗಳಲ್ಲಿ ಬೇರೆ ಬೇರೆ ಪಾತ್ರಗಳಲ್ಲಿ ಮಿಂಚಿ ಅಭಿಮಾನಿ ಬಳಗವನ್ನು ಹೊಂದಿದವರಾಗಿದ್ದಾರೆ. ದಿ|| ಪಂ| ಜಿ ಆರ್ ಭಟ್ಟ ಬಾಳೆಗದ್ದೆ ಇವರ ಸಂಯೋಜನೆಯ ಭೂಕೈಲಾಸ ಮತ್ತು ಭಕ್ತ ಸುಧಾಮ ಗೀತ ರೂಪಕಗಳಲ್ಲಿಯೂ ಅಭಿನಯಿಸಿರುತ್ತಾರೆ. ಸುತ್ತಲಿನ ಅನೇಕ ಊರುಗಳಲ್ಲಿ ನಾಟಕ ತಂಡವನ್ನು ಕಟ್ಟಿ ಹಲವಾರು ನಾಟಕ ಪ್ರಯೋಗಗಳನ್ನು ಮಾಡಿದವರಾಗಿದ್ದಾರೆ. ಉತ್ತರ ಕನ್ನಡ ಜಿಲ್ಲಾ ಸಾಕ್ಷರತಾ ಆಂದೋಲನದಲ್ಲಿ ಈ ಹಿಂದೆ ಪಾಲ್ಗೊಂಡು ಹಳ್ಳಿ-ಹಳ್ಳಿಗಳಲ್ಲಿ ಅನೇಕ ನಾಟಕಗಳನ್ನು ಪ್ರಯೋಗಿಸಿ ಜನಪ್ರಿಯತೆಯನ್ನು ಗಳಿಸಿದವರಾಗಿದ್ದಾರೆ. ಹಲವಾರು ಮೇರು ನಟರ ಒಡನಾಡಿಗಳು ಇವರು. ಇವರ ಯಕ್ಷಗಾನ ವೇಷ ನೋಡುಗರಿಗೆ ಹಬ್ಬ. ತಮ್ಮದೇ ಗತ್ತಿನಲ್ಲಿ ವೇಷದ ನಿರ್ವಹಣೆ ಮಾಡುವ ಶಕ್ತಿ ಇವರಿಗಿದೆ. ಭೀಮ, ಕೌಂಸ, ರಾವಣ, ಘಟೋತ್ಕಚ ಮುಂತಾದ ಪಾತ್ರಗಳಲ್ಲಿ ಶ್ರೀಯುತರು ಮಿಂಚಿದ್ದಾರೆ. ಯಾವುದೇ ಪ್ರಶಸ್ತಿಗಳಿಗೆ ಆಸೆಪಡದೆ ಶಾಲೆಯ ಸೇವೆಗೆ ದುಡಿದ ಇವರ ಸೇವೆ ನಿಜವಾಗಿಯೂ ಸಾರ್ಥಕವಾದದ್ದು.
ಸನ್ಮಾನ ಸ್ವೀಕರಿಸಿದ ಶ್ರೀಯುತರು ಶಾಲೆಯ ಎಲ್ಲರಿಗೂ ಶುಭ ಹಾರೈಸಿ ಉತ್ತಮ ಸಂಸ್ಕಾರವನ್ನು ಬೆಳೆಸಿಕೊಳ್ಳಲು ಮಕ್ಕಳಿಗೆ ಕಿವಿ ಮಾತು ಹೇಳಿದರು. ನನ್ನ ಬಾಳಿಗೆ ಬೆಳಕಾದ ಶಾಲೆಯ ಸ್ಮರಣೆ ಮಾಡುತ್ತಾ ಶಾಲೆಗೆ ವಸ್ತುವಿನ ರೂಪದಲ್ಲಿ 50 ಸಾವಿರ ರೂ ದೇಣಿಗೆ ಘೋಷಣೆ ಮಾಡಿದರು.
ಶಾಲೆಯ ಮುಖ್ಯಾಧ್ಯಾಪಕರಾದ ಶ್ರೀ ಜಿ.ಎನ್. ಗಣಪತಿಯವರು ಪ್ರಾಸ್ತಾವಿಕ ಮಾತನಾಡಿ ಎಲ್ಲರನ್ನೂ ಸ್ವಾಗತಿಸಿದರು. ಶಿಕ್ಷಕರಾದ ಶ್ರೀ ಸುಬ್ರಹ್ಮಣ್ಯ ಹೆಗಡೆ, ಶ್ರೀಮತಿ ಸುವರ್ಣ ನಾಯ್ಕ ಹಾಗೂ ಶಾಲಾ ಮಕ್ಕಳು ಶ್ರೀ ಕೆ.ಆರ್. ಬಟ್ಟರ ಕುರಿತು ಮಾತನಾಡಿದರು. ಶ್ರೀ ಬಸವರಾಜರವರು ಕಾರ್ಯಕ್ರಮದ ನಿರ್ವಹಣೆ ಮಾಡಿ ಸರ್ವರಿಗೂ ಶುಭ ಕೋರಿದರು. ಅತಿಥಿಗಳಾಗಿ ಡಾ|| ಕುಮಾರ್ ಭಟ್ ಮತ್ತು ಶ್ರೀಮತಿ ಮೈತ್ರಿ ಭಟ್ ಉಪಸ್ಥಿತರಿದ್ದರು.