ಯುವಾ ಬ್ರಿಗೇಡ್ ಶಿರಸಿ ತಾಲೂಕಾ ಘಟಕದ ವತಿಯಿಂದ ನಗರದ ಅರ್ಬನ್ ಬ್ಯಾಂಕ್ ಸಮೀಪ ಇರುವ ನಾಗದೇವರ ಕಟ್ಟೆಯ ಸುತ್ತಮುತ್ತಲು ಹಾಗೂ ರಸ್ತೆ ಬದಿಯಲ್ಲಿ ಬಿದ್ದಿದ್ದ ನೂರಕ್ಕೂ ಅಧಿಕ ದೇವರ ಫೋಟೊಗಳನ್ನು ಸಂಗ್ರಹಿಸಿ ಅವುಗಳನ್ನು ವಿಲೇವಾರಿ ಮಾಡಿ ‘ಕಣಕಣದಲ್ಲೂ ಶಿವ’ ಆಚರಿಸಲಾಯಿತು.

ಹಳೆಯ ದೇವರ ಫೋಟೋಗಳನ್ನು ಬಳಕೆಯ ನಂತರ ಎಲ್ಲೆಂದರಲ್ಲಿ ಎಸೆಯುವ ಮೂಲಕ ಅವುಗಳು ಶೋಚನೀಯ ಸ್ಥಿತಿಯಲ್ಲಿ ಬೀದಿಪಾಲಾಗಿರುತ್ತದೆ. ಚೆಲ್ಲಾಪಿಲ್ಲಿಯಾದ ದೇವರ ಫೋಟೊಗಳು ಕಸದ ಜೊತೆಯಲ್ಲಿ ಬಿದ್ದಿರುವುದನ್ನು ನೋಡಲು ಸಾಧ್ಯವಿಲ್ಲ.
ಅದು ದೈವೀ ಭಾವನೆಗೆ ಧಕ್ಕೆ ಉಂಟುಮಾಡುತ್ತದೆ. ಅಷ್ಟೇ ಅಲ್ಲದೇ ಫೋಟೊಗಳ ಫ್ರೇಮ್, ಗಾಜು, ಮೊಳೆ ಇತರ ಕಚ್ಚಾವಸ್ತಗಳು ಪರಿಸರಕ್ಕೆ ಹಾನಿ ಉಂಟುಮಾಡುವ ಸಾಧ್ಯತೆಗಳಿವೆ.

RELATED ARTICLES  ಲಾಡ್ಜಗೆ ಬಾ ಎಂದು ಕಾಟ ಕೊಡುತ್ತಿದ್ದ ವ್ಯಕ್ತಿಗೆ ಸಾರ್ವಜನಿಕರಿಂದ‌ ಧರ್ಮದೇಟು.

ಆ ದೃಷ್ಟಿಯಿಂದ ಈ ರೀತಿಯ ‌ಫೋಟೊಗಳಿಗೆ ಮುಕ್ತಿ ಕೊಡುವ ಕಾಯಕಲ್ಪಕ್ಕೆ ಶಿರಸಿ ಯುವಾ ಬ್ರಿಗೇಡ್ ಕಾರ್ಯಕರ್ತರು ಮುಂದಾಗಿದ್ದಾರೆ. ಅನಾಥವಾದ ದೇವರ ಫೋಟೊಗಳನ್ನು ಸಂಗ್ರಹಿಸಿ, ಅವುಗಳಿಂದ ದೇವರ ಚಿತ್ರ(ಕಾಗದ), ಫ್ರೇಮು(ಕಟ್ಟಿಗೆ), ಗಾಜು, ಮೊಳೆ ಮುಂತಾದ ಕಚ್ಚಾವಸ್ತುಗಳನ್ನು ವ್ಯವಸ್ಥಿತವಾಗಿ ಬೇರ್ಪಡಿಸಿ ಅವುಗಳಿಗೆ ಅಂತಿಮರೂಪ ಕೊಡಲಾಗುತ್ತಿದೆ. ಕಾಗದದ ದೇವರ ಚಿತ್ರವನ್ನು ಮಣ್ಣಿನಲ್ಲಿ ಗುಂಡಿಯನ್ನು ತೋಡಿ ಅದರಲ್ಲಿ ಕಾಗದವನ್ನು ಇಟ್ಟು ಪಕ್ಕದಲ್ಲಿ ಗಿಡವೊಂದನ್ನು ನೆಡುವುದು. ಫ್ರೇಮುಗಳು ಹಾಗೂ ಇತರ ಕಚ್ಚಾ ವಸ್ತುಗಳನ್ನು ಸುಡಬಹುದು. ಗಾಜುಗಳನ್ನು ಯಾವುದೇ ರೀತಿಯಲ್ಲಿ ಪುನರ್ಬಳಕೆ ಮಾಡಬಹುದು. ತನ್ಮೂಲಕ ದೇವರ ಹೆಸರಿನಲ್ಲಿ ಒಂದು ಗಿಡ ಬೆಳೆಸಿದಂತಾಯಿತು. ದೇವರ ಫೋಟೊಕ್ಕೂ ಮುಕ್ತಿ ಕಲ್ಪಿಸಿದಂತಾಯಿತು ಜೊತೆಗೆ ಪರಿಸರ ಶುಚಿತ್ವದೆಡೆಗೆ ಒಂದು ಹೆಜ್ಜೆ ಇಟ್ಟಂತಾಗುತ್ತದೆ.

ನಗರದ ಜನತೆ ತಮ್ಮಲ್ಲಿನ ದೇವರ ಫೋಟೊಗಳನ್ನು‌ ಎಸೆಯುವ ಬದಲು ಅಥವಾ ಯಾವುದೋ ದೇವರ ಕಟ್ಟೆಯ ಬಳಿ ಇಡುವ ಬದಲು ತಮ್ಮ ತಮ್ಮ ಮನೆಯಲ್ಲಿ ಇದೇ ರೀತಿಯಲ್ಲಿ ದೇವರ ಫೋಟೊಗಳಿಗೆ ಕಾಯಕಲ್ಪ ಕೊಡಬೇಕು ಎಂಬುದು ಶಿರಸಿ ಯುವಾಬ್ರಿಗೇಡ್ ಅಪೇಕ್ಷೆ. ಈ ಸಂದರ್ಭದಲ್ಲಿ ಯುವಾಬ್ರಿಗೇಡ್ ರಾಜ್ಯ ಸಂಚಾಲಕರಾದ ಶ್ರೀ ಚಂದ್ರಶೇಖರ್ ಅವರು ಉಪಸ್ಥಿತರಿದ್ದು ಕೈಜೋಡಿಸಿದರು.

RELATED ARTICLES  ಆರ್.ಇ.ಎಸ್. ಪದವಿಪೂರ್ವ ಮಹಾವಿದ್ಯಾಲಯದ ನಿವೃತ್ತ ಪ್ರಾಚಾರ್ಯೆ ಶಕುಂತಲಾ ಎಸ್. ನಾಯಕ ನಿಧನ

ಮುಂದಿನ ಭಾನುವಾರ ಇದೇ ‘ಕಣಕಣದಲ್ಲೂ ಶಿವ’ ಕಾರ್ಯಕ್ರಮವನ್ನು ಶಿರಸಿ ಹೊಸ ಬಸ್ ನಿಲ್ದಾಣದ ಬಳಿಯಿರುವ ಪೋಲಿಸ್ ವಸತಿಗೃಹದ‌ ಎದುರಿಗಿರುವ ನಾಗರಕಟ್ಟೆಯಲ್ಲಿ ಮಾಡಲಾಗುವುದು. ಆಸಕ್ತರು ಕೈಜೋಡಿಸಬೇಕಾಗಿ ಕೋರಿಕೆ, ಹೆಚ್ಚಿನ ಮಾಹಿತಿಗಾಗಿ 9482557153/9483484074 ಸಂಪರ್ಕಿಸಬಹುದು.