‘ಜೈ ಶ್ರೀ ರಾಮ್’ ವಾಕ್ಯ ಬರೆದಿರುವ 10 ಲಕ್ಷ ಕಾರ್ಡ್ಗಳನ್ನು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮನೆಗೆ ಕಳುಹಿಸಲು ಬಿಜೆಪಿ ನಿರ್ಧರಿಸಿದೆ.
ಲೋಕಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ 18 ಸ್ಥಾನಗಳನ್ನು ಗೆದ್ದಿತ್ತು. ಇದು ಮಮತಾ ಬ್ಯಾನರ್ಜಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಈ ಗೆಲುವಿನಿಂದ ಟಿಎಂಸಿಗೆ ಉಂಟಾದ ಗಾಯಕ್ಕೆ ಉಪ್ಪು ಸುರಿಯಲು ಕಮಲ ನಾಯಕರು ಈ ನಿರ್ಧಾರ ತೆಗೆದುಕೊಂಡಿದ್ದಾರೆ.
ಈ ಬಗ್ಗೆ ಮಾತನಾಡಿರುವ ನೂತನ ಸಂಸದ ಅರ್ಜುನ್ ಸಿಂಗ್, “ನಾವು ‘ಜೈ ಶ್ರೀರಾಮ್’ ಎಂದು ಬರೆದಿರುವ ಕಾರ್ಡ್ಗಳನ್ನು ಮಮತಾ ಬ್ಯಾನರ್ಜಿ ಮನೆಗೆ ಕಳುಹಿಸಿಕೊಡುತ್ತಿದ್ದೇವೆ. ಬರೋಬ್ಬರಿ 10 ಲಕ್ಷ ಕಾರ್ಡ್ಗಳು ಇರಲಿವೆ,” ಎಂದು ಹೇಳಿದ್ದಾರೆ.
ಟಿಎಂಸಿ ನಾಯಕರು ಸಭೆ ನಡೆಸುತ್ತಿರುವ ವೇಳೆ ಬಿಜೆಪಿ ನಾಯಕರು ಹೊರ ನಿಂತು ಜೈ ಶ್ರೀ ರಾಮ್ ಎನ್ನುವ ಘೋಷಣೆ ಕೂಗುತ್ತಿದ್ದರು. ಈ ವೇಳೆ ಪೊಲೀಸರು ಲಾಟಿ ಚಾರ್ಜ್ ನಡೆಸಿದ್ದರು. ಈ ಬೆಳವಣಿಗೆ ನಂತರ ಬಿಜೆಪಿ ಈ ನಿರ್ಧಾರ ಕೈಗೊಂಡಿದೆ. ಅರ್ಜುನ್ ಸಿಂಗ್ ಈ ಮೊದಲು ಟಿಎಂಸಿ ಶಾಸಕರಾಗಿದ್ದರು. ನಂತರ ಪಕ್ಷ ತೊರೆದು ಬಿಜೆಪಿ ಸೇರಿದ್ದರು.