ಕುಮಟಾ: ಇಲ್ಲಿಯ ಚಿತ್ರಿಗಿ ಮಹಾತ್ಮಾ ಗಾಂಧಿ ಪ್ರೌಢಶಾಲೆಯ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಪ್ರತಿಭಾ ಪುರಸ್ಕಾರ, ಶಿಷ್ಯವೇತನ ವಿತರಣೆ, ಗುರುವಂದನೆ, ಪಾಲಕರೊಂದಿಗೆ ಸಂವಾದವೂ ಸೇರಿದಂತೆ ವೈವಿಧ್ಯಮಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ರಾಜ್ಯಮಟ್ಟದಲ್ಲಿ ರ್ಯಾಂಕ್ ಪಡೆದ ಕುಮಾರ ಪ್ರಣೀತ ರವಿರಾಜ ಕಡ್ಲೆ ಶಾಲೆಗೆ ದ್ವಿತೀಯ ಸ್ಥಾನ ಪಡೆದ ಕುಮಾರ ವಿಶ್ವಾಸ ವೆಂಕಟೇಶ ಪೈ ಹಾಗೂ ತೃತೀಯಳಿಗಳಾದ ಕುಮಾರಿ ಗೌತಮಿ ಪರಮಯ್ಯ ಪಟಗಾರ ಅವರನ್ನು ಅಭಿನಂದಿಸಿ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿದ ಶ್ರೇಯಾಂಕಿತ ವಿದ್ಯಾರ್ಥಿಗಳು ತಮ್ಮ ಕಿರಿಯ ಮಿತ್ರರಿಗೆ ವಿದ್ಯಾರ್ಜನೆಗೆ ಸೂಕ್ತ ಸಲಹೆ ನೀಡಿ ಗಮನ ಸೆಳೆದರು.


ಈ ಸಂದರ್ಭದಲ್ಲಿ ವಿದ್ಯಾರ್ಥಿ ಪಾಲಕ ಡಾ.ರವಿರಾಜ ಕಡ್ಲೆ ಮತ್ತು ಉಷಾ ರವಿರಾಜ ಕಡ್ಲೆ ದಂಪತಿಗಳು ಶಿಕ್ಷಕ ವೃಂದದವರನ್ನು ಪೋಷಕ ವರ್ಗದ ಪರವಾಗಿ ಸನ್ಮಾನಿಸಿ ಸಂತೋಷಿಸಿದರಲ್ಲದೇ ಸಂಪೂರ್ಣ ಕಾರ್ಯಕ್ರಮದ ಪ್ರಾಯೋಜಕತ್ವವನ್ನು ವಹಿಸಿ ನಿರ್ವಹಿಸಿದರು.


ಗುರುವೃಂದದವರನ್ನು ಸನ್ಮಾನಿಸಿ ಮಾತನಾಡಿದ ಡಾ. ರವಿರಾಜ ಕಡ್ಲೆ ‘ಆಯ್ಕೆಯ ಯಾವುದೇ ಹೊಯ್ದಾಟವಿಲ್ಲದೇ ಈ ಶಾಲೆಯನ್ನು ಆಯ್ಕೆಮಾಡಿಕೊಂಡು ತಮ್ಮ ಮಗನನ್ನು ಕಳುಹಿಸಿದ ನಿರೀಕ್ಷೆ ಹುಸಿಯಾಗದೇ ತಮಗೆ ತೃಪ್ತಿ ತಂದಿದೆ. ಗೋಕರ್ಣದ ಪರಮಪೂಜ್ಯ ಮಹರ್ಷಿ ದೇವರಾತ ಶರ್ಮಾರವರು ಹೆಸರಿಸಿದ ಶಾಲೆಯ ಶೈಕ್ಷಣಿಕ ಅಭಿವೃದ್ಧಿ ಅವ್ಯಾಹತವಾಗಿರುತ್ತದೆ. ಅದು ಈ ಭಾಗದ ಜನರ ಹೆಮ್ಮೆ ಎಂದು ಹಾರೈಸಿದರಲ್ಲದೇ ಇಲ್ಲಿನ ಶಿಕ್ಷಕ ಬಂಧುಗಳ ಕ್ರಿಯಾಶೀಲತೆ ಕೊಂಡಾಡಿದರು. ಶಾಲೆಗೆ ಐವತ್ತು ಸಾವಿರ ಮೌಲ್ಯದ ವಿಜ್ಞಾನ ಉಪಕರಣಗಳನ್ನು ಪೂರೈಸುವುದಾಗಿ ಪ್ರಕಟಿಸಿದರು.

RELATED ARTICLES  ಶ್ರೀ ಶಿವಬಸವ ಶಿವಾಚಾರ್ಯ ಮಹಾಸ್ವಾಮಿಗಳಿಗೆ ಗೌರವ


ತಾಲೂಕಿನಲ್ಲಿ ಇಂದು ಮಳೆಯಿಲ್ಲದೇ ನೀರಿದ ಬವಣೆ ಇದೆ. ಆದರೆ ಶೈಕ್ಷಣಿಕ ಕ್ಷೇತ್ರದಲ್ಲಿ ಭರಪೂರ ಮಳೆ ಬಂದಿದೆ. ಕುಮಟಾ ರ್ಯಾಂಕುಗಳ ಸುರಿಮಳೆ ತಂದಿದೆ. ಕನ್ನಡ ಮಾಧ್ಯಮದಲ್ಲಿ ಜಿಲ್ಲೆಯಲ್ಲಿಯೇ ಬೆರಗಾಗುವ ಸಾಧನೆಗೈಯುತ್ತಿರುವ ಈ ಶಾಲೆ ಸಂಸ್ಕಾರಯುತ ಶಿಕ್ಷಣ ನೀಡುತ್ತಿರುವುದು ತಮಗೆ ಸಂತಸ ನೀಡಿದೆ. ನೂರಾರು ಮಕ್ಕಳು ಪ್ರವೇಶಾತಿ ಪಡೆಯುತ್ತಿರುವುದೇ ಇದಕ್ಕೆ ಸಾಕ್ಷಿ ಎಂದು ಜಿಲ್ಲಾ ಶಿಕ್ಷಣ ಮತ್ತು ಸ್ಥಾಯಿ ಸಮಿತಿಯ ಅಧ್ಯಕ್ಷ ರತ್ನಾಕರ ನಾಯ್ಕ ಅಭಿಪ್ರಾಯಪಟ್ಟರು.


ಅತಿಥಿಗಳಾಗಿ ಆಗಮಿಸಿದ ಉದ್ಯಮಿ ಮೋಹನ ಶಾನಭಾಗ ತಮ್ಮ ಮಾತೃಶ್ರೀ ಅವರ ಹೆಸರಿನಲ್ಲಿ ಶಿಷ್ಯವೇತನ ನೀಡಿದರು. ಆಯ್ದ ವಿದ್ಯಾರ್ಥಿಗಳಿಗೆ ಪ್ರತಿವರ್ಷದಂತೆ ಕೊಡಮಾಡುವ ನೋಟ್‍ಬುಕ್‍ಳನ್ನು ವಿತರಿಸಿದರು. ಆಡಳಿತ ಮಂಡಳಿ ಅನುಮೋದಿಸಿದರೆ ಈ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಕೊಡಿಸುವಲ್ಲಿ ಶ್ರಮಿಸುವುದಾಗಿ ತಿಳಿಸಿದರು.

RELATED ARTICLES  ಸರಣಿ ಕಳ್ಳತನ : ಬೆಳಗಿನ ಜಾವದಲ್ಲಿ ಅಂಗಡಿ ಹಾಗೂ ಮನೆಗೆ ಕನ್ನ ಹಾಕಿದ ಖಧೀಮರು

ನಿವೃತ್ತ ಶಿಕ್ಷಕಿ ಚಂದ್ರಕಲಾ ಮಾಪಾರಿ ಬಡ ಮತ್ತು ಅರ್ಹ ವಿದ್ಯಾರ್ಥಿಗಳಿಗೆ ನೀಡುವಂತೆ ರೂ. ಹತ್ತು ಸಾವಿರ ಮೊತ್ತವನ್ನು ಮುಖ್ಯಾಧ್ಯಾಪಕರಿಗೆ ಹಸ್ತಾಂತರಿಸಿದರು. ಮುಂದಿನ ದಿನಗಳಲ್ಲಿ ಅವಶ್ಯ ದತ್ತಿನಿಧಿ ಸ್ಥಾಪಿಸುವುದಾಗಿ ಘೋಷಿಸಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಕೆನರಾ ಎಜ್ಯುಕೇಶನ ಸೊಸೈಟಿ ಸದಸ್ಯ ಕೃಷ್ಣದಾಸ ಪೈ ಶಾಲಾ ಪ್ರಗತಿಯನ್ನು ಸಾಧನೆಗೆ ಪ್ರೇರಕರಾದವರನ್ನು, ಸಾಧಕರನ್ನೂ ಶ್ಲಾಘಿಸಿದರು.
ಪ್ರಾರಂಭದಲ್ಲಿ ಕುಮಾರಿ ರಕ್ಷಾ ಪಟಗಾರ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಮುಖ್ಯಾಧ್ಯಾಪಕ ಎನ್.ಆರ್.ಗಜು ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಿಕ್ಷಕ ಸುರೇಶ ಪೈ ಫಲಿತಾಂಶ ವಿಶ್ಲೆಷಿಸಿದರು. ಶಿಕ್ಷಕ ಕಿರಣ ಪ್ರಭು ಶಾಲೆಯ ಇತಿಹಾಸವನ್ನು ಪ್ರಸ್ತುತ ಪಡಿಸಿದರು. ಶಿಕ್ಷಕ ವಿಷ್ಣು ಭಟ್ಟ ವಂದಿಸಿದರು.

(ಅತತಿಥಿಳಾದ ರತ್ನಾಕರ ನಾಯ್ಕ, ಡಾ.ರವಿರಾಜ ಕಡ್ಲೆ, ಮೋಹನ ಶಾನಭಾಗ, ಕೃಷ್ಣದಾಸ ಪೈ, ಉಷಾ ಕಡ್ಲೆ, ಚಂದ್ರಕಲಾ ಮಾಪಾರಿ, ಎನ್.ಆರ್.ಗಜು ಮತ್ತು ಶಿಕ್ಷಕರೊಂದಿಗೆ ಶ್ರೇಯಾಂಕಿತ ವಿದ್ಯಾರ್ಥಿಗಳಾದ ಪ್ರಣೀತ ಕಡ್ಲೆ, ವಿಶ್ವಾಸ್ ಪೈ ಹಾಗೂ ಗೌತಮಿ ಪಟಗಾರ)