ಭಟ್ಕಳ : ಉತ್ತರ ಕನ್ನಡ ಜಿಲ್ಲೆಗೆ ಸುಸಜ್ಜಿತ ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆ ಅವಶ್ಯಕತೆಯ ಕೂಗು ಹಲವು ವರ್ಷಗಳಿಂದ ಕೇಳಿಬರುತ್ತಿದೆ ಮತ್ತು ಉತ್ತರ ಕನ್ನಡ ಜಿಲ್ಲೆಗೆ ಅದರ ಅವಶ್ಯಕತೆ ಬಹಳ ಇದೆ ಎಂದು ಭಟ್ಕಳ ಶಾಸಕ ಸುನೀಲ್ ನಾಯ್ಕ ಪತ್ರದ ಮೂಲಕ ಉಲ್ಲೇಖಿಸಿ ಗಮನಸೆಳೆದಿದ್ದಾರೆ.
ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಆಸ್ಪತ್ರೆ ನಿರ್ಮಾಣಕ್ಕಾಗಿ ಅಭಿಯಾನ ಆರಂಭವಾಗಿರುವುದನ್ನು ಗಮನಿಸಿರುತ್ತೇನೆ, ಇದೊಂದು ಉತ್ತಮ ನಡೆ ಕೂಡ. ಪಕ್ಷ ಭೇದವನ್ನು ಮರೆತು ಉತ್ತರ ಕನ್ನಡದ ಪ್ರಜ್ಞಾವಂತ ನಾಗರಿಕರು ಸಾಮಾಜಿಕ ಜಾಲತಾಣವನ್ನು ಇಂತಹ ಒಂದು ಶ್ರೇಷ್ಠ ಕೆಲಸಕ್ಕಾಗಿ ಬಳಸಿಕೊಳ್ಳುತ್ತಿರುವುದು ಶ್ಲಾಘನೀಯ .
ಈ ಎಲ್ಲಾ ಕಾರಣಗಳಿಂದಾಗಿ ಉತ್ತರಕನ್ನಡ ಜಿಲ್ಲೆಯ ಕುಮಟಾ ಅಥವಾ ಹೊನ್ನಾವರ ತಾಲ್ಲೂಕಿನಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣಕ್ಕಾಗಿ ಉತ್ತರಕನ್ನಡ ಜಿಲ್ಲೆಯ ಜನಪ್ರತಿನಿಧಿ ಮತ್ತು ಭಟ್ಕಳ ವಿಧಾನಸಭಾ ಕ್ಷೇತ್ರದ ಶಾಸಕನಾಗಿ ಈಗಾಗಲೆ ಸನ್ಮಾನ್ಯ ಮುಖ್ಯಮಂತ್ರಿಗಳಿಗೆ, ಉತ್ತರಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮತ್ತು ವೈದ್ಯಕೀಯ ಶಿಕ್ಷಣ ಸಚಿವರಾದ ಶ್ರೀ ಇ. ತುಕಾರಾಮ್ ಅವರಿಗೆ ಕೋರಿದ್ದು, ಇದು ಕೆವಲ ಮನವಿಯಾಗಿರದೆ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಮುಂಬರುವ ಮಳೆಗಾಲದ ಅಧಿವೇಶನದಲ್ಲಿ ಈ ಬಗ್ಗೆ ಸದನದಲ್ಲಿ ಪ್ರಶ್ನೆ ಮಾಡುವ ಮೂಲಕ ಸರ್ಕಾರದ ಗಮನಕ್ಕೆ ತರುತ್ತೇನೆ ಮತ್ತು ಜಿಲ್ಲೆಯ ಜನತೆ ಒಕ್ಕರಲಿನ ಈ ಹೋರಾಟಕ್ಕೆ ಸಂಪೂರ್ಣ ಬೆಂಬಲವನ್ನು ಸೂಚಿಸುತ್ತಿದ್ದೇನೆ.
ಆಸ್ಪತ್ರೆ ನಿರ್ಮಾಣದ ಬಗ್ಗೆ ಜಿಲ್ಲೆಯ ಸಂಸದರಾದ ಸನ್ಮಾನ್ಯ ಶ್ರೀ ಅನಂತಕುಮಾರಹೆಗಡೆ ಅವರೊಂದಿಗೆ ಈಗಾಗಲೆ ಚರ್ಚಿಸಿದ್ದು ಅವರೂ ಕೂಡ ಬೇಡಿಕೆಗೆ ಧನಾತ್ಮಕವಾಗಿ ಸ್ಪಂದಿಸಿದ್ದಾರೆ. ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಹಕಾರದೊಂದಿಗೆ ಆದಷ್ಟು ಶೀಘ್ರದಲ್ಲಿ ಉತ್ತರ ಕನ್ನಡ ಜಿಲ್ಲೆಗೆ ಸುಸಜ್ಜಿತ ಆಸ್ಪತ್ರೆಯನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗೋಣವೆಂದು ಶುಭ ಹಾರೈಸುತ್ತೇನೆ.