ಹೊನ್ನಾವರ:ಇಂದು ಕರ್ನಾಟಕ ಅರಣ್ಯ ಇಲಾಖೆ, ಹೊನ್ನಾವರ ಅರಣ್ಯ ವಿಭಾಗ, ಭಟ್ಕಳ ಉಪವಿಭಾಗ, ಭಟ್ಕಳ ವಲಯ ಇವರ ವತಿಯಿಂದ ವಿಶ್ವ ಪರಿಸರ ದಿನಾಚರಣೆ 2019 ರ ಅಂಗವಾಗಿ ಕಾಡು ಬೆಳೆಸಿ ನಾಡು ಉಳಿಸಿ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಕಾರ್ಯಕ್ರಮವನ್ನು ಶಾಸಕ ಸುನೀಲ್ ನಾಯ್ಕ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಪರಿಸರ ನಾಶದಿಂದ ಆಗುವಂತಹ ದುಷ್ಪರಿಣಾಮವನ್ನು ಈಗಾಗಲೆ ನಮ್ಮ ಜಿಲ್ಲೆ ಅನುಭವಿಸುತ್ತಿದೆ. ಪರಿಸರ ನಾಶದಿಂದಾಗಿ ಎಲ್ಲೆಡೆ ಬರಗಾಲ ಆವರಿಸಿ ಕುಡಿಯುವ ನೀರಿಗಾಗಿ ಹುಡುಕಾಟ ನಡೆಸುವ ಪರಿಸ್ಥಿತಿ ಬಂದೊದಗಿದೆ.
ನಮ್ಮ ಜಿಲ್ಲೆಗೆ ಕರ್ನಾಟಕದ ಕಾಶ್ಮೀರ ಎಂಬ ಹೆಗ್ಗಳಿಕೆ ಇದೆ.
ಆದರೆ ಪರಿಸರ ನಾಶದಿಂದ ಇಂದು ಇದೇ ಜಿಲ್ಲೆಯಲ್ಲಿ ನೀರಿಗಾಗಿ ಹಾಹಾಕಾರ ಉಂಟಾಗಿದೆ. ಇದಕ್ಕೆಲ್ಲಾ ಕಾರಣ ನಾವೇ. ಕೇವಲ ಪರಿಸರ ದಿನಾಚರಣೆಯ ದಿನದಂದು ಎರಡು ಗಿಡಗಳನ್ನು ನೆಟ್ಟು ಮಿಕ್ಕ ದಿನಗಳಲ್ಲಿ ಮನೆ, ಅಂಗಡಿ ಮುಂಗಟ್ಟುಗಳನ್ನು ಕಟ್ಟುವ ಸಲುವಾಗಿ ಮರಗಳನ್ನು ಕಡಿಯುತ್ತಾ ಬಂದಿದ್ದೇವೆ.
ಇನ್ನು ಮುಂದಿನ ದಿನಗಳಲ್ಲಿ ಇದು ಸಲ್ಲದು. ಪರಿಸರ ನಾಶ ಹೀಗೆ ಮುಂದುವರಿದರೆ ಅದರ ಭೀಕರತೆಯನ್ನು ನಾವು ಮತ್ತು ನಮ್ಮ ಮುಂದಿನ ಪೀಳಿಗೆಗಳು ಅನುಭವಿಸಬೇಕಾಗುತ್ತದೆ. ಈ ಭೂಮಿ ಕೇವಲ ಮನುಷ್ಯನಿಗೆ ಮಾತ್ರ ಸೀಮಿತವಲ್ಲ, ಇಲ್ಲಿ ಪ್ರಾಣಿ ಪಕ್ಷಿಗಳಿಗೂ ಇಲ್ಲಿ ಬದುಕುವ ಹಕ್ಕಿದೆ. ಪರಿಸರ ನಾಶದಿಂದ ಪ್ರಾಣಿ ಪಕ್ಷಿಗಳು ಸಾವಿಗೀಡಾಗುತ್ತಿವೆ.
ಇನ್ನಾದರೂ ಎಚ್ಚೆತ್ತುಕೊಂಡು ಪರಿಸರವನ್ನು ಕಾಪಾಡಿಕೊಳ್ಳೋಣ. ಪ್ರಾಣಿ ಪಕ್ಷಿಗಳೊಂದಿಗೆ ನಮ್ಮ ಮುಂದಿನ ಪೀಳಿಗೆಗಾಗಿ ಪರಿಸರವನ್ನು ಉಳಿಸಿಕೊಳ್ಳೋಣ. ಪರಿಸರ ಸಂರಕ್ಷಣೆ ಕೆವಲ ಪರಿಸರ ದಿನಾಚರಣೆಯ ದಿನಕ್ಕೆ ಸೀಮಿತವಾಗಬಾರದು. ನಮ್ಮ ಸುತ್ತ ಮುತ್ತಲಿನ ಪ್ರದೇಶದಲ್ಲಿ ಪ್ರತಿಯೊಬ್ಬರೂ ಒಂದೂಂದು ಸಸಿಗಳನ್ನು ನೆಟ್ಟು ಅದನ್ನು ಪೋಷಿಸುವ ಮೂಲಕ ನೀರು, ಗಾಳಿ ಉತ್ತಮ ವಾತಾವರಣವನ್ನು ಸೃಷ್ಟಿಸೋಣ ಎಂದವರು ಕರೆ ನೀಡಿದರು.