ಕುಮಟಾ : ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್, ವಾಟ್ಸಾಪ್ ಮುಂತಾದವುಗಳಲ್ಲಿ ನಮ್ಮ ಜಿಲ್ಲೆಯಾದ್ಯಂತ ಸುದ್ದಿಯಾಗುತ್ತಿರುವ #WE_NEED_EMERGENCY_HOSPITAL_IN_UK ಒಂದು ಉತ್ತಮವಾದ ಅಭಿಯಾನ ಎಂದು ಮಾಜಿ ಶಾಸಕಿ ಶಾರದಾ ಶೆಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅವರು ಪತ್ತದಲ್ಲಿ ಉಲ್ಲೇಖಿಸಿ ಸಾಮಾಜಿಕ ಕಳಕಳಿಯಿಂದ ಕೂಡಿರುವಂತದ್ದಾಗಿರುತ್ತದೆ. ಜಿಲ್ಲೆಯ ಎಲ್ಲಿಯಾದರೂ ಭೀಕರ ಅಪಘಾತ ಸಂಭವಿಸಿದಾಗ ಅಥವಾ ಮಾರಕ ಖಾಯಿಲೆಗಳು ಉಲ್ಬಣಿಸಿದಾಗ ಅವರನ್ನು ತುರ್ತು ಪರಿಸ್ಥಿತಿಯಲ್ಲಿ ಪಕ್ಕದ ಗೋವಾ, ಹುಬ್ಬಳ್ಳಿ ಅಥವಾ ಮಂಗಳೂರಿಗೆ ಕರೆದುಕೊಂಡು ಹೋಗುವ ಪರಿಸ್ಥಿತಿ ಇದೆ. ಹೀಗೆ ಕರೆದುಕೊಂಡು ಹೋಗುವ ಸಂದರ್ಭದಲ್ಲಿ ಎಷ್ಟೋ ಜನರು ಮಾರ್ಗ ಮಧ್ಯದಲ್ಲಿಯೇ ಪ್ರಾಣಬಿಟ್ಟಂತಹ ಘಟನೆಗಳು ನಮ್ಮ ಕಣ್ಣ ಮುಂದೆಯೇ ಇದೆ.
ನಾನು ಶಾಸಕಿಯಾಗಿದ್ದಂತಹ ಸಂದರ್ಭದಲ್ಲಿ ಕ್ಷೇತ್ರದಲ್ಲಿದಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಮತ್ತು ಟ್ರಾಮಾ ಸೆಂಟರ್ ಸ್ಥಾಪಿಸಲು ಸರ್ಕಾರದ ಮಟ್ಟದಲ್ಲಿ ನಮ್ಮ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಆರ್. ವಿ.ದೇಶಪಾಂಡೆಯವರ ಸಹಕಾರದೊಂದಿಗೆ ಉನ್ನತ ಪ್ರಯತ್ನ ನಡೆಸಿದ್ದೆ, ಆದರೆ ಅದೇ ಸಂದರ್ಭದಲ್ಲಿ ಪ್ರಮುಖ ಯೋಜನೆಗಳಾದ ಕುಮಟಾ ಸಾರ್ವಜನಿಕ ಆಸ್ಪತ್ರೆಯನ್ನು 50ಬೆಡ್ ನಿಂದ 100 ಬೆಡ್ ಗೆ ಉನ್ನತೀಕರಿಸುವ, ಹೊನ್ನಾವರ ಸಾರ್ವಜನಿಕ ಆಸ್ಪತ್ರೆಯನ್ನು 50 ಬೆಡ್ ನಿಂದ 100 ಬೆಡ್ ಗೆ ಉನ್ನತೀಕರಿಸುವ, ಕುಮಟಾದ ಕಲ್ಲಬ್ಬೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಹೊನ್ನಾವರ ಕಡತೋಕಾದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪನೆಯ ಕಾಮಗಾರಿ ಮಂಜೂರು ಮಾಡಿಸಲು ಸಫಲವಾದ್ದರಿಂದ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಮತ್ತು ಟ್ರಾಮಾ ಸೆಂಟರ್ ಅನುದಾನ ಮಂಜೂರು ಮಾಡಿಸಲು ಸಾಧ್ಯವಾಗಲಿಲ್ಲ ಹಾಗೆಯೇ ಚುನಾವಣೆ ಘೋಷಣೆಯಾಗಿ ನನ್ನ ಪ್ರಯತ್ನಕ್ಕೆ ಹಿನ್ನಡೆಯಾಯಿತು.
ಜಿಲ್ಲೆಯಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಇಂತಹ ಆಸ್ಪತ್ರೆಯಿಂದ ತುರ್ತು ಪರಿಸ್ಥಿತಿಯಲ್ಲಿರುವವರು ಪ್ರಾಣಾಪಾಯದಿಂದ ಪಾರಾಗಬಹುದು. ಈ ಕ್ಷೇತ್ರದ ಮಾಜಿ ಶಾಸಕಿಯಾಗಿ ನಾನು ನಮ್ಮ ಜಿಲ್ಲಾ ಉಸ್ತುವಾರಿ ಸಚಿವರ ಸಹಕಾರದಿಂದ ಆರೋಗ್ಯ ಸಚಿವರ ಹಾಗೂ ಮಾನ್ಯ ಮುಖ್ಯಮಂತ್ರಿಗಳ ಮೇಲೆ ಒತ್ತಡ ತಂದು ಜಿಲ್ಲೆಯಲ್ಲಿ ಒಂದ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆಗೆ ಪ್ರಯತ್ನಿಸುತ್ತೇನೆ ಎಂದು ಅವರು ಹೇಳಿದ್ದಾರೆ.