ಕುಮಟಾ : ವರುಣನ ಅವಕೃಪೆಯಿಂದಾಗಿ ಎಲ್ಲಿ ನೋಡಿದರೂ ನೀರಿಗೆ ತತ್ವಾರ. ಅದರಲ್ಲಿಯೂ ಕುಮಟಾದ ಹೆಗಡೆ ಭಾಗದಲ್ಲಿ ಜೀವ ಜಲಕ್ಕಾಗಿ ಜನತೆ ಪರಿತಪಿಸುವಂತೆ ಆಗಿದೆ. ತಾಲೂಕಿನ ಹೆಗಡೆಯ ಗಾಂಧೀನಗರದ ಶುದ್ಧ ಕುಡಿಯುವ ನೀರಿನ ಘಟಕ ಇದ್ದರೂ ಅದು ಸಾರ್ವಜನಿಕರ ಉಪಯೋಗಕ್ಕೆ ಬರುತ್ತಿಲ್ಲ. ಅದನ್ನು ಸಾರ್ವಜನಿಕ ಬಳಕೆಗೆ ಅನುಕೂಲ ಮಾಡಿಕೊಡುವಂತೆ ಅಲ್ಲಿಯ ಗ್ರಾಮಸ್ಥರು ಹೆಗಡೆ ಗ್ರಾ ಪಂ ಗೆ ಮುತ್ತಿಗೆ ಹಾಕಿ ಪಟ್ಟು ಹಿಡಿದ ಘಟನೆ ವರದಿಯಾಗಿದೆ.
ಒಂದು ವರ್ಷದ ಹಿಂದೆ ಹೆಗಡೆಯ ಗಾಂಧಿನಗರದ ಸಾರ್ವಜನಿಕ ಬಾವಿಯ ಪಕ್ಕ ಕೆಆರ್‌ಐಡಿ ಯ ಯೋಜನೆ ಅಡಿಯಲ್ಲಿ ನಾಣ್ಯವನ್ನು ಹಾಕಿ ಶುದ್ಧ ಕುಡಿಯುವ ನೀರಿನ್ನು ಪಡೆಯುವ ಘಟಕ ಸ್ಥಾಪನೆ ಆಗಿ ಉದ್ಘಾಟನೆ ಕೂಡ ಕಂಡಿದೆ ಆದರೆ ಜನರಿಗೆ ನೀರು ಮಾತ್ರ ಇನ್ನೂ ಸಿಕ್ಕಿಲ್ಲ.
ಈ ವರ್ಷದಲ್ಲಿ ನೀರಿನ ಅಭಾವ ತುಂಬಾ ಆಗಿದ್ದು ಜನರು ಹನಿ ನೀರಿಗಾಗಿ ಪರದಾಡುವ ಪರಿಸ್ಥಿತಿ ಬಂದಿರುವಾಗ ಗಾಂಧಿನಗರ ಭಾಗದ ಜನ ಗ್ರಾ ಪಂ ಗೆ ಮುತ್ತಿಗೆ ಹಾಕಿ ನಮಗೆ ಆ ಘಟಕ ಪ್ರಾರಂಭಿಸಿಕೊಡುವಂತೆ ಪಂಚಾಯತ ಅಭಿವೃದ್ಧಿ ಅಧಿಕಾರಿಯವರ ಹತ್ತಿರ ಪಟ್ಟು ಹಿಡಿದರು.
ಸ್ಥಳಕ್ಕೆ ಕೂಡಲೇ ಆಗಮಿಸಿದ ಹೆಗಡೆ ಪಂಚಾಯತ ಅಧ್ಯಕ್ಷ ಮಂಜುನಾಥ ಪಟಗಾರ ಜನರನ್ನು ಸಮಾಧಾನ ಪಡಿಸಿದರು.
ಈ ಸಂದರ್ಭದಲ್ಲಿ ಯುವಕರಾದ ರವಿ ಮುಕ್ರಿ , ಮಹೇಶ, ಚಂದನ ನಾಯ್ಕ ,ಗಾಂಧಿನಗರ ಪಂಚಾಯತ ಸದಸ್ಯೆ ನಾಗವೇಣಿ ಮುಕ್ರಿ, ಕವಿತಾ ಶೆಟ್ಟಿ, ದೇವಿ ಮುಕ್ರಿ ಹಾಗೂ ಇನ್ನಿತರ ಸಾರ್ವಜನಿಕರು ಉಪಸ್ಥಿತರಿದ್ದರು.