ಕುಮಟಾ : ಉತ್ತರ ಕನ್ನಡ ಜಿಲ್ಲೆಗೆ ಸುಸಜ್ಜಿತ ಆಸ್ಪತ್ರೆ ಬೇಕೇ ಬೇಕು”ಎಂಬ ಶೀರ್ಷಿಕೆಯಡಿಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಆರಂಭವಾದ ಅಭಿಯಾನಕ್ಕೆ ಜಿಲ್ಲೆಯಾದ್ಯಂತ ವ್ಯಾಪಕ ಸ್ಪಂದನೆ ವ್ಯಕ್ತವಾಗುತ್ತಿದೆ. ಈ ಬಗ್ಗೆ #WeNeedEmergencyHospitalInUttarakannada ದ ಹ್ಯಾಶ್ ಟ್ಯಾಗ್ ನೊಂದಿಗೆ ರೆಕ್ಕೆ ಬಿಚ್ಚಿದ ಟ್ವಿಟ್ಟರ್ ಹಕ್ಕಿ ಇದೀಗ ಸದ್ದುಮಾಡುತ್ತಿದೆ.
ರಾಜಕೀಯ ವ್ಯಕ್ತಿಗಳ ಇಚ್ಛಾಶಕ್ತಿಯ ಕೊರತೆಯಿಂದಾಗಿಯೋ ಅಥವಾ ಜಿಲ್ಲೆಯ ಜನ ಸಂಘಟನಾತ್ಮಕವಾಗಿ ಹೋರಾಟ ಮಾಡುವಲ್ಲಿ ಎಡವಿದ್ದರಿಂದಲೋ ಏನೋ ಇವತ್ತಿನವರೆಗೂ ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆ ಎಂಬುದು ಮರೀಚಿಕೆಯಾಗಿದೆ.ಜಿಲ್ಲೆಯ ಜನರು ಇವತ್ತಿಗೂ ಇದಕ್ಕಾಗಿ ಹೋರಾಟ ಮಾಡಬೇಕಾಗಿರುವುದು ದುರ್ದೈವದ ಸಂಗತಿಯಾಗಿದೆ. ಇಂದಿಗೂ ಸಹ ಜಿಲ್ಲೆಯ ಯಾವುದೇ ಮೂಲೆಯಲ್ಲಿ ಅಪಘಾತವಾದರೆ ಅಥವಾ ಜೀವಕ್ಕೆ ಹಾನಿಯಾಗುವ ಆತಂಕವಿದ್ದರೆ ಮಣಿಪಾಲ, ಮಂಗಳೂರಿಗೋ,ಗೋವಾ ಕಡೆಗೋ ಅಥವಾ ಹುಬ್ಬಳ್ಳಿ ಕಡೆ ಕೊಂಡೊಯ್ಯಬೇಕಾದ ಅನಿವಾರ್ಯತೆ ಇದೆ.ಸ್ಥಳೀಯ ಆಸ್ಪತ್ರೆಗಳಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದುಕೊಂಡು ದೂರದ ಆಸ್ಪತ್ರೆಗಳಿಗೆ ಹೆಚ್ಚಿನ ಚಿಕಿತ್ಸೆಗಾಗಿ ಕರೆದುಕೊಂಡು ಹೋಗುವ ಅನಿವಾರ್ಯತೆ ಇದೆ.ಹೀಗೆ ಕರೆದುಕೊಂಡು ಹೋಗುವಾಗ ದಾರಿಮಧ್ಯದಲ್ಲೇ ಅದೆಷ್ಟೋ ಜನ ಗಾಯಾಳುಗಳು ತಮ್ಮ ಪ್ರಾಣವನ್ನು ಕಳೆದುಕೊಂಡ ಉದಾಹರಣೆ ಸಾಕಷ್ಟಿದೆ.ಜಿಲ್ಲೆಯಲ್ಲಿ ವೆಂಟಿಲೇಟೆಡ್ ಅಂಬುಲೈನ್ಯ ಸೌಲಭ್ಯವೂ ಕೇವಲ ಎರಡು, ಮೂರರಷ್ಟಿರುವುದು ಜೀವಹಾನಿ ಇನ್ನಷ್ಟು ಹೆಚ್ಚಾಗಲು ಕಾರಣವಾಗಿದೆ.
ಈ ಎಲ್ಲ ಕಾರಣಗಳಿಂದಾಗಿ ರೋಸಿ ಹೋಗಿರುವ ಯುವ ಜನತೆ ಸಾಮಾಜಿಕ ಜಾಲತಾಣಗಳಲ್ಲಿ ಯುಕೆ ಎಕ್ಸಪ್ರೆಸ್, ನಮ್ಮ ಯುಕೆ, ಉತ್ತರ ಕನ್ನಡ ಟ್ರೋಲರ್‍ಸ, ನಮ್ಮ ಉತ್ತರ ಕನ್ನಡ ಮೀಮ್ಸ, ಬಾಡನ್ಯೂಸ್ ಸೇರಿದಂತೆ ಕೆಲ ಸಾಮಾಜಿಕ ಜಾಲತಾಣ ಗುಂಪುಗಳು,ಟ್ರೋಲ್‌ಪೇಜ್‌ಗಳು ಆರಂಭಿಸಿರುವ ಈ ಅಭಿಯಾನಕ್ಕೆ ಅಭೂತಪೂರ್ವ ಬೆಂಬಲವನ್ನು ವ್ಯಕ್ತವಾಗಿದೆ.