ಗೋಕರ್ಣ: ಜಗತ್ತಿನ ಏಕೈಕ ಎನಿಸಿದ ಆತ್ಮಲಿಂಗವನ್ನು ಸ್ವತಃ ಸ್ಪರ್ಶಿಸಿ ಪೂಜಿಸಲು ಭಕ್ತರಿಗೆ ಅವಕಾಶ ಇರುವಂತೆ, ಶ್ರೀ ಸನ್ನಿಧಿಯಲ್ಲಿ ಕಲಾವಿದರು ಅನುದಿನವೂ ನಾದ- ನಾಟ್ಯದ ಮೂಲಕ ಶ್ರೀಮಹಾಬಲೇಶ್ವರನನ್ನು ಆರಾಧಿಸಲು ನಿತ್ಯ ನಿರಂತರ ಕಲೋಪಾಸನೆಗೆ ಅವಕಾಶ ಕಲ್ಪಿಸುವ ಸಂಕಲ್ಪದಿಂದ ಶ್ರೀ ಕ್ಷೇತ್ರ ಗೋಕರ್ಣದ ಸಂಸ್ಥಾನ ಶ್ರೀ ಮಹಾಬಲೇಶ್ವರ ದೇವಸ್ಥಾನದಲ್ಲಿ ವೇದಿಕೆ ಸಜ್ಜಾಗಿದೆ.
ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ಶ್ರೀ ರಾಮಂಚಂದ್ರಾಪುರಮಠ ಇವರ ದಿವ್ಯ ಹಸ್ತಗಳಿಂದ ‘ಶಿವಪದ’ ವೇದಿಕೆ ಲೋಕಾರ್ಪಣೆಗೊಂಡಿತು .
ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಪರಮಪೂಜ್ಯ ಶ್ರೀಗಳವರು ಶಿವ ಶಿವೆಯರು ನಾಟ್ಯ ಪ್ರಿಯರು ಹಾಗಾಗಿಯೇ ಈ ಕ್ಷೇತ್ರದಲ್ಲಿ ನಾದೋಪಾಸನೆ ನಡೆಯಬೇಕೆಂದುದು ನಮ್ಮ ಆಶಯವಾಗಿತ್ತು. ಶಿವ ಶಿವೆಯರ ನರ್ತನ ಸೃಷ್ಟಿಯ ಆರಂಭ ಹಾಗೂ ಅಂತ್ಯವಾಗಿದೆ.
ಶಿವನು ಶೂನ್ಯದ ಭಿತ್ತಿಯಲ್ಲಿ, ಶೂನ್ಯದ ಕುಂಚದಿಂದ , ಶೂನ್ಯ ಚಿತ್ರಿಸಿದನು…ಅದೇ ಪೂರ್ಣ ಜಗತ್ತು…. ಶಿವನೆಂದರೆ ಕಲಾ ಮೂರ್ತಿ..ಹಾಗಾಗಿ ಶಿವ ಶಿರದಲ್ಲಿ ಕಲಾಸ್ವರೂಪವಾದ ಚಂದ್ರನನ್ನು ಧರಿಸಿದ್ದಾನೆ.. ಕಲೆಗೆ ಯಾವಾಗಲೂ ಉನ್ನತ ಸ್ಥಾನ ಎಂಬುದು ಇದರ ಪ್ರತೀಕ.. ಕಲೆಬದುಕಿನ ಕಿರೀಟ ಪ್ರಾಯವಾದುದು. ಪಂಡಿತ ವೆಂಕಟೇಶ್ ಕುಮಾರ್ ಅಂತವರಿಂದ ಈ ವೇದಿಕೆ ಉದ್ಘಾಟನೆಯಾಗುತ್ತಿರುವುದು ನಿಜಕ್ಕೂ ಸಂತಸದ ವಿಚಾರ ಎಂದು ತಿಳಿಸಿದರು . ಆಡಳಿತಾಧಿಕಾರಿ ಶ್ರೀ ಜಿ ಕೆ ಹೆಗಡೆ ಸ್ವಾಗತಿಸಿದರು . ವೇ ಮಹಾಬಲ ಉಪಾಧ್ಯ ಸಭಾಪೂಜೆ ನೆರವೇರಿಸಿದರು . ವೇ ಶಿತಿಕಂಠ ಹಿರೇಭಟ್ ಮತ್ತು ಸಮಿತಿಯ ಸದಸ್ಯರು ಫಲ ಸಮರ್ಪಿಸಿದರು . ಶ್ರೀ ಮಹೇಶ ಶೆಟ್ಟಿ ವಂದನಾರ್ಪಣೆ ಮಾಡಿದರು . ಶ್ರೀ ಗಣೇಶ ಜೋಶಿ ನಿರ್ವಹಿಸಿದರು . ಶ್ರೀ ರಮೇಶ ಪಂಡಿತ್ , ಶ್ರೀಮತಿ ಶೀಲಾ ಹೊಸ್ಮನೆ, ಶ್ರೀಮತಿ ಅನುರಾಧ ಪಾರ್ವತಿ , ಉಪಾಧಿವಂತ ಮಂಡಳಿ ಸದಸ್ಯರು , ಊರ ನಾಗರಿಕರು ಉಪಸ್ಥಿತರಿದ್ದರು