Tried and trusted ಎಂಬಂತೆ ಚಿತ್ರಕತೆಯನ್ನ ನೇರ ಕಥಾನಕದ ಸನ್ನಿವೇಶಗಳ ಮಿಶ್ರಣದೊಂದಿಗೆ ಹೇಳುವ ವಿನಾಯಕ ಬ್ರಹ್ಮೂರ್ ಆಚೆ ಕಿರುಚಿತ್ರದಲ್ಲಿ ತಮ್ಮದೇ ಕಥನಾಶೈಲಿಯನ್ನು ಇನ್ನಷ್ಟು ಪಕ್ವಗೊಳಿಸಿಕೊಂಡಿದ್ದಾರೆಂದೇ ಹೇಳಬಹುದು.
ಕೆಲ ಚಿತ್ರಗಳು ಕ್ಲೈಮ್ಯಾಕ್ಸ್ ನಂತರ ಪ್ರಶ್ನೆ ಹುಟ್ಟಿಸಿದರೆ, ಆಚೆ ತನ್ನ ಪ್ರಾರಂಭದಲ್ಲೇ ಪ್ರಶ್ನಾರ್ಥಕವಾಗುತ್ತದೆ. ಸಾವಿನ ನಂತರದ ಬದುಕು ಅನುಭವಕ್ಕೆ ಬರಬಹುದೆ? ಅಂಥದ್ದೊಂದು ಸಾಧ್ಯತೆ ಸತ್ಯವಾದರೆ ಮನುಷ್ಯನ ಪ್ರತಿಕ್ರಿಯೆ ಏನಿರಬಹುದು? ಆರಂಭದ ಪ್ರಶ್ನೆಗಳಿಗೆ ಚಿತ್ರ ಉತ್ತರ ಹುಡುಕುವ ಯತ್ನ ಮಾಡುವುದಷ್ಟೇ ಅಲ್ಲ, ಪ್ರತಿಯೊಬ್ಬನ ಫ್ಯಾಂಟಸಿಯನ್ನು ತಿದ್ದಿಕೊಡುವ ಸೂಕ್ಷ್ಮವೊಂದನ್ನು ಆಚೆ ಚಿತ್ರ ನಿರೂಪಿಸುತ್ತದೆ.
ತನ್ನ ಬದುಕಿನ ಬಹುದೊಡ್ಡ ಕನಸಾದ ಚಿತ್ರನಟನಾಗುವ ಬಯಕೆ ಮತ್ತು ಹೊಸದಾಗಿ ಮೂಡುವ ಸಂಬಂಧಗಳ ಮಧ್ಯೆ ಸುಶಿ ತೊಳಲಾಟಕ್ಕೆ ಬೀಳುತ್ತಾನೆ. ಒಮ್ಮೆ ಸತ್ತು, ಬದುಕಿನ ಆಚೆ ನೋಡಬಹುದಾದ ಅವಕಾಶ ಸಿಕ್ಕಾಗ ಅವನ ಬದುಕಿನ ಕನಸಿಗಿಂತ ಹೊಸ ಸಂಬಂಧವೇ ಮೇಲುಗೈ ಸಾಧಿಸಿ ಬದುಕಿನಾಚೆಗೂ ಸಂಬಂಧದ ಅನಿರ್ದಿಷ್ಟತೆಯೇ ಕಾಡುತ್ತದೆ ಎನ್ನುವ ಹೊಸ ಆಯಾಮವೊಂದು ಚಿತ್ರದಲ್ಲಿ ಕಾಣಸಿಗುತ್ತದೆ. ಸುಶಿ ಸತ್ತ ನಂತರ ತನ್ನ ಚಿತ್ರರಂಗದ, ಬದುಕಿನ ಕುರಿತಾದ ಘಟನಾವಳಿಗಳು ಕಂಡುಬರದೇ ತನ್ನ ಗೆಳೆಯ ಹಾಗೂ ಪ್ರೇಯಸಿಯ ಕುರಿತಾದ ಘಟನಾವಳಿಗಳು ಕಾಣಿಸುವುದು ಮಾನವ ಭಾವಜೀವಿ, ಗುರಿಗಳಿಗಿಂತ ಸಂಬಂಧವೇ ಮುಖ್ಯ ಎಂಬ ಸೂಕ್ಷ್ಮ ಸಂದೇಶವನ್ನು ನೀಡುತ್ತದೆ.

RELATED ARTICLES  ಕುಮಟಾ ರೋಟರಿ ನೂತನ ವರ್ಷದ ಪದಾಧಿಕಾರಿಗಳ ಆಯ್ಕೆ: ಅಧ್ಯಕ್ಷರಾಗಿ ಸುರೇಶ ಭಟ್.


ಅಷ್ಟಕ್ಕೂ ಸಾಯದೇ, ಸಾವಿನ ನಂತರದ ಬದುಕನ್ನು ಕಾಣಲು ಸಾಧ್ಯವೇ? ರಾಬರ್ಟ್ ಎಂಬ ವಿಜ್ಞಾನಿಯ ಪಾತ್ರ ಅಂಥದ್ದೊಂದು ಕಲ್ಪನೆಯನ್ನು ಬೆಳೆಸುತ್ತದೆ. ಸುಶೀ ಸಾಯದಿದ್ದರೂ ರಾಬರ್ಟ್ ನೀಡುವ ಯಾವುದೋ ರಾಸಾಯನಿಕ ಸಂಯುಕ್ತ ಸುಶೀಯ ಸುಪ್ತ ಮನಸ್ಸಿನ ಗೊಂದಲಗಳನ್ನು, ಅವಾಸ್ತವ ಕಲ್ಪನೆಗಳನ್ನು ಜಾಗೃತಗೊಳಿಸುತ್ತವೆ. ಅದನ್ನೇ ನಂಬುವ ಸುಶೀಗೆ ತನ್ನ ಬದುಕನ್ನು ತಿದ್ದುಕೊಳ್ಳುವ ಅವಕಾಶವನ್ನೂ ರಾಬರ್ಟ್ ನೀಡುತ್ತಾನೆ. ಆದರೆ ತನ್ನ ಕಲ್ಪನೆ ಹಾಗೂ ವಾಸ್ತವಗಳ ತಾಕಲಾಟದಲ್ಲಿ ಮನುಷ್ಯನ ಆಯ್ಕೆ ಮತ್ತೂ ಗೊಂದಲಕಾರಿಯಾದದ್ದು ಎಂಬುದನ್ನು ನಿರ್ದೇಶಕರು ಸೂಕ್ಷ್ಮವಾಗಿ ಬಿಂಬಿಸಿದ್ದಾರೆ.


ಆಚೆ ಅನ್ನುವ ಶೀರ್ಷಿಕೆಯೇ ಕುತೂಹಲಭರಿತವಾದದ್ದು. ಪಾತ್ರಗಳ ಕಂಫರ್ಟ್ ಝೋನೆಂಬ ಕಿಟಕಿಯ ಆಚೆ ಪಾತ್ರಧಾರಿಗಳು ಬಂದಿದ್ದಂತೂ ಸ್ಪಷ್ಟವಾಗಿ ಗೋಚರವಾಗುತ್ತದೆ. ನಾಟಕದಲ್ಲಿ ಅಭಿನಯಿಸುವವರಿಗೆ ಕ್ಯಾಮರಾ ಎದುರಿಗಿನ ಅಭಿನಯ ಕಷ್ಟವಾಗುತ್ತದೆ. ಅದರಲ್ಲೂ ಬಯಲುಸೀಮೆ ಸೊಗಡಿನ ಮಾತುಗಾರಿಕೆಗೆ ಪ್ರಸಿದ್ಧವಾಗಿರುವ ದಯಾನಂದ ಬಿಳಗಿ ಮತ್ತು ಹರೀಶ್ ಹಿರಿಯೂರು ಅವರ ಸಿನಿಮೀಯ ಸಂಭಾಷಣೆ ಕಲೆಯ ಕುರಿತು ಈರ್ವರಿಗಿರುವ ಆಸಕ್ತಿ ಹಾಗೂ ಪ್ರಬುದ್ಧತೆಯನ್ನು ಪ್ರದರ್ಶಿಸುತ್ತದೆ. ನಾಟಕದ ಆಚೆಗಿನ ಆಚೆಗೆ ಜೀವ ತುಂಬಿದ್ದು ಈ ದೋಸ್ತರ ಅಭಿನಯ ಎನ್ನುವಲ್ಲಿ ಎರಡು ಮಾತಿಲ್ಲ.


ಮೂರು ವಿಭಿನ್ನ ಆಯಾಮಗಳನ್ನು ಸಮಾನಾಮತರವಾಗಿ ನಿರೂಪಿಸುವುದು ಕಷ್ಟ. ವಾಸ್ತವ, ಭವಿಷ್ಯ ಹಾಗೂ ಭೂತಕಾಲಗಳ ಕಥಾನಕವನ್ನು ವೀಕ್ಷಕರಿಗೆ ಗೊಂದಲವಾಗದಂತೆ ಹೇಳುವಲ್ಲಿ ಚಿತ್ರತಂಡ ಬಹುತೇಕ ಯಶಸ್ವಿಯಾಗಿದೆ. ಸುಶೀ ಪಾತ್ರದ ಸಾವಿನ ನಂತರದ ಘಟನಾವಳಿಗಳನ್ನು ಹಳದಿ ಶೇಡ್‌ನಲ್ಲಿ ತೋರಿಸಿದಂತೆಯೇ ವಾಸ್ತವ ಅಥವಾ ಭೂತಕಾಲದ ಘಟನೆಗಳನ್ನು ಕಪ್ಪು-ಬಿಳುಪಿನಲ್ಲಿ ತೋರಿಸಿದ್ದರೆ ಕಾಲದ ಗೊಂದಲವನ್ನು ನಿರ್ಲಕ್ಷಿಸಲು ಮತ್ತಷ್ಟು ಸಹಕಾರಿಯಾಗುತ್ತಿತ್ತು ಎನ್ನುವುದು ನನ್ನ ಅಭಿಪ್ರಾಯ.
ಆಗಲೇ ಹೇಳಿದಂತೆ tried and trusted ಚಿತ್ರಕತೆಗೆ ವಿನಾಯಕರು ಪಕ್ವಗೊಂಡಿದ್ದಾರೆ. ಚಿತ್ರಕತೆಯ ನಿರೂಪಣೆ ಅವರ ಹಿಂದಿನ ಚಿತ್ರಗಳಿಗಿಂತ ಹೆಚ್ಚು ಸ್ಪಷ್ಟವಾಗಿದೆ. ಸಂಭಾಷಣೆಯಲ್ಲಿ ಕೆಲವೊಂದೆಡೆ ತೀರಾ ಅಸಾಂಪ್ರದಾಯಿಕ ಶೈಲಿ ಅನುಸರಿಸಿರುವುದು ಸನ್ನಿವೇಶಗಳನ್ನು ಗೊಂದಲಗೊಳಿಸುವ ಸಾಧ್ಯತೆಯಿದ್ದರೂ ಮನೋರಂಜನಾತ್ಮಕವಾಗಿ ಸಂಭಾಷಣೆಗಳು ಮುದ ನೀಡುತ್ತವೆ.
ಕುಮಟಾದ ಕಡ್ಲೆ ಬೀಚ್, ಮುರೂರು ಗುಡ್ಡ ಮೊದಲಾದ ತಾಣಗಳನ್ನು ಮನಸೆಳೆಯುವಂತೆ ಚಿತ್ರೀಕರಿಸಿರುವ ಸುನೀಲ್ ಹೆಗಡೆ ತಟ್ಟೀಸರ ಅವರ ಛಾಯಾಗ್ರಹಣ ಚಿತ್ರಕ್ಕೆ ಮೆರಗು ನೀಡುತ್ತದೆ. ಅಪಘಾತದ ಸನ್ನಿವೇಶ, ಅಘನಾಶಿನಿ ರೇಲ್ವೆ ಬ್ರಿಜ್ ಸನ್ನಿವೇಶ ಹಾಗೂ ನಾಯಕಿ ಹಾಗೂ ಉಪನಾಯಕನ ನಡುವಿನ ಕಡಲತೀರದ ಸಂಭಾಷಣೆಯ ದೃಶ್ಯಗಳು ಸೇರಿದಂತೆ ಹಲವು ಸನ್ನಿವೇಶಗಳು ಜಿಲ್ಲೆಯಲ್ಲಿ ಉತ್ತಮ ಛಾಯಾಗ್ರಾಹಕರಿಗೆ ಕೊರತೆಯಿಲ್ಲ ಎಂದು ನಿರೂಪಿಸುತ್ತವೆ.
ಮೇಲ್ನೋಟಕ್ಕೆ ಸಾವಿನಾಚೆಯ ಬದುಕಿನ ಫ್ಯಾಂಟಸಿಯಂತೆ ಕಾಣುವ ಆಚೆ; ಸಂಬಂಧಗಳ ಸೂಕ್ಷ್ಮ, ವಾಸ್ತವ ಮತ್ತು ಕಲ್ಪನೆಗಳ ಅಂತರ ಮತ್ತು ಸಂಬಂಧಗಳ ಆಧಾರ ನಂಬಿಕೆಯೇ ಎನ್ನುವ ತತ್ವವನ್ನು ವೀಕ್ಷನ ಮನಸ್ಸಲ್ಲಿ ಬಿತ್ತುವ ಕೆಲಸ ಮಾಡುತ್ತದೆ.

RELATED ARTICLES  ಅತ್ಯಾಚಾರ ಆರೋಪಿ ಬಂಧನ