ಕುಮಟಾ: ಚಿತ್ರಿಗಿ ಮಹಾತ್ಮಾ ಗಾಂಧಿ ಪ್ರೌಢಶಾಲೆಯಲ್ಲಿ ಅಗಲಿದ ಜ್ಞಾನಪೀಠ ಪ್ರಶಸ್ತಿ ವಿಜೇತ ಗಿರೀಶ ಕಾರ್ನಾಡರಿಗೆ ಶಿಕ್ಷಕರು ಮತ್ತು ಮಕ್ಕಳೆಲ್ಲಾ ಸೇರಿ ನುಡಿಗೌರವ ಸಲ್ಲಿಸಿದರು. ಶಾಲೆಯ ಡಾ.ಬಿ.ಎ. ಸನದಿ ಸಾಹಿತ್ಯ ಸಂಘದಡಿ ಆಯೋಜಿಸಿದ ಈ ಶ್ರದ್ಧಾಂಜಲಿ ಸಭೆಯಲ್ಲಿ ಸಂಘದ ಸಂಚಾಲಕ ಶಿಕ್ಷಕ ಸುರೇಶ ಪೈ ಕಾರ್ನಾಡರ ಜೀವನ ಚರಿತ್ರೆಯನ್ನು ಅರುಹಿದರು. ಅವರ ಸಾಹಿತ್ಯ, ನಾಟಕಗಳು ಮತ್ತು ಅವರಿಗೆ ಸಂದ ಪ್ರಶಸ್ತಿಗಳ ಪಟ್ಟಿಯನ್ನು ವಾಚಿಸಿದರು.
ಅಪರಾಹ್ನ 12.51 ಕ್ಕೆ ಇಲಾಖೆಯಿಂದ ರಜೆ ಘೋಷಣೆ ಆದೇಶ ವ್ಯಾಟ್ಸ್‍ಎಪ್ ಮೂಲಕ ದೊರೆಯಿತಾದರೂ ಕಾರ್ನಾಡರ ಬಗ್ಗೆ ಮಕ್ಕಳಿಗೆ ತಿಳಿಯಪಡಿಸಲೋಸುಗ ಬಿಸಿಯೂಟ ಸೇವಿಸಿದ ತರುವಾಯ ಮಕ್ಕಳನ್ನು ಪ್ರಾರ್ಥನಾ ಮಂದಿರದಲ್ಲಿ ಸೇರಿಸಿ, ಕಾರ್ನಾಡರಿಂದ ಸಾಹಿತ್ಯ, ರಂಗಭೂಮಿ ಹೇಗೆ ಸಮೃದ್ಧಗೊಂಡಿಂತೆಬುದನ್ನು ಮುಖ್ಯಾಧ್ಯಾಪಕ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ತಾಲೂಕಾಧ್ಯಕ್ಷ ಎನ್.ಆರ್.ಗಜು ವಿವರಿಸಿದರು.
ಬದುಕೇ ದಿಟ್ಟ ಸವಾಲು ಹಾಕಿದಾಗ ಅದನ್ನು ಸಮಾಜಕ್ಕಂಜದೇ ಎದುರಿಸಿ ಗೆಲ್ಲುವ ಆದರ್ಶ ಹಾಗೂ ಪ್ರಗತಿಪರತೆ ಇಂದಿನ ಮಕ್ಕಳಿಗೆ ಅನುಕರಣೀಯವಾಗಿದೆ ಎಂದರು. ಕಾರ್ನಾಡರ ಸಾಹಿತ್ಯ, ನಾಟಕ ಹಾಗೂ ಅವರ ಆತ್ಮಕತೆ ಅಧ್ಯಯನಯೋಗ್ಯವಾಗಿದೆ. ಅಲ್ಲದೇ, ಸನದಿ ಬುಕ್ ಕಾರ್ನರ್‍ನಲ್ಲಿ ಕೆಲವನ್ನು ಸಂಗ್ರಹಿಸಿಡಲಾಗಿದ್ದು ಅವುಗಳನ್ನು ಬಿಡುವಿನಲ್ಲಿ ಓದಬೇಕೆಂಬ ಸಲಹೆ ನೀಡಿದರು. ಶಿಕ್ಷಕರಾದ ವಿಷ್ಣು ಭಟ್ಟ, ಶಿವಾನಂದ ಪೈ, ಕಿರಣ ಪ್ರಭು, ಪ್ರದೀಪ ನಾಯ್ಕ, ಚಂದ್ರಕಲಾ ಆಚಾರ್ಯ, ನಾಗರತ್ನಾ ಭಂಡಾರಿ, ಬಿ.ಪವಿತ್ರಾ ಮೊದಲಾದವರು ರಂಗಕರ್ಮಿ, ನಟ, ನಿರ್ದೇಶಕ ಬಹುಮುಖ ವ್ಯಕ್ತಿತ್ವದ ಕಾರ್ನಾಡರ ಕುರಿತು ನುಡಿನಮನ ಸಲ್ಲಿಸಿದರು. ಕೊನೆಯಲ್ಲಿ ಕಾರ್ನಾಡರ ಸಾಕ್ಷ್ಯಚಿತ್ರ ಪ್ರದರ್ಶಿಸಲಾಯಿತು.