ಹೊನ್ನಾವರ: ಹೊಸಾಕುಳಿ ವ್ಯವಸಾಯ ಸಹಕಾರಿ ಸಂಘದಲ್ಲಿ ಕಳೆದ ನಲವತ್ತು ವರ್ಷಗಳಿಂದ ಪ್ರಾಮಾಣಿಕ ಸೇವೆ ಸಲ್ಲಿಸಿ ಇತ್ತೀಚಿಗೆ ನಿವೃತ್ತರಾದ ಶ್ರೀಯುತ ಎಸ್.ಎಂ.ಹೆಗಡೆ ಗುಡ್ಡೇಬಾಳ ಇವರ ಬೀಳ್ಕೊಡುಗೆ ಹಾಗೂ ಸನ್ಮಾನ ಕಾರ್ಯಕ್ರಮ ಲಕ್ಷ್ಮೀನಾರಾಯಣ ಸಭಾಭವನ ಹೊಸಾಕುಳಿಯಲ್ಲಿ ಸುಸಂಪನ್ನಗೊಂಡಿತು.


ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಪಂಚಾಯತ ಸದಸ್ಯೆ ಶ್ರೀಮತಿ ಶ್ರೀಕಲಾ ಶಾಸ್ತ್ರಿ ಸೊಸೈಟಿಯಲ್ಲಿ ಯಾವುದೇ ಭ್ರಷ್ಟಾಚಾರ ಅವ್ಯವಹಾರಗಳಿಗೆ ಆಸ್ಪದ ಕೊಡದಂತೆ ಸತತ ನಲವತ್ತು ವರ್ಷಗಳಿಂದ ವಿಶ್ವಾಸಾರ್ಹ ಪ್ರಗತಿ ಸಾಧಿಸುವುದಕ್ಕೆ ಕಾರಣೀಕರ್ತರಾದ ಎಸ್.ಎಂ.ಹೆಗಡೆಯವರನ್ನು ಶ್ಲಾಘಿಸುತ್ತಾ ಬಡತನದ ಮಧ್ಯೆಯೂ ನಿಷ್ಠೆ ನಂಬಿಕೆಯನ್ನು ಉಳಿಸಿಕೊಂಡು ಇವರು ಮಾದರಿಯಾಗಿದ್ದಾರೆಂಬ ಅಭಿಪ್ರಾಯ ವ್ಯಕ್ತಪಡಿಸಿದರು.


ನೂರಾರು ಗಣ್ಯರು ಸಾರ್ವಜನಿಕರ ಸಮ್ಮುಖದಲ್ಲಿ ಬಂಗಾರದಂತಹ ವ್ಯಕ್ತಿತ್ವದ ಸೊಸೈಟಿ ಸುಬ್ಬಣ್ಣನವರಿಗೆ ಬಂಗಾರದ ಸರವನ್ನೇ ನೀಡಿ ಸಂಸ್ಥೆಯು ಗೌರವಿಸಿತು.

ಸಂಘದ ಅಧ್ಯಕ್ಷರಾದ ಶ್ರೀಯುತ ಪ್ರಕಾಶ ಹೆಗಡೆ ಮುಡಾರೆಯವರು ಎಲ್ಲರನ್ನೂ ಸ್ವಾಗತಿಸುತ್ತಾ ಸಂಸ್ಥೆಯು ಪ್ರತಿಯೊಬ್ಬ ನೌಕರರ ಸೇವೆಯನ್ನೂ ಕೃತಜ್ಞತಾ ಪೂರ್ವಕವಾಗಿ ಸ್ಮರಿಸುತ್ತಾ ಅವರನ್ನು ಸನ್ಮಾನಿಸುವ ಸತ್ಸಂಪ್ರದಾಯ ಹೊಂದಿದೆ. ಇಂತಹ ಪ್ರಾಮಾಣಿಕ ಸೇವೆ ಮುಂದಿನವರಿಗೂ ಮಾದರಿಯಾಗಬೇಕೆಂದು ಪ್ರಾಸ್ತಾವಿಕ ನುಡಿಗಳನ್ನಾಡಿದರು.


‌‌ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ವಿದ್ವತ್ಪೂರ್ಣ ನುಡಿಗಳನ್ನಾಡಿದ ಸತ್ವಾಧಾರ ಫೌಂಡೆಶನ್ ನ ಶ್ರೀ ಗಣೇಶ ಜೋಶಿಯವರು ಹೊಸಾ- ಕುಳಿ(ಹೊಂಡ) ತೋಡಿದಾಗೆಲ್ಲ ಇಲ್ಲಿ ಹೊಸ ಮಣ್ಣಿನ ಸುವಾಸನೆ ಬರುತ್ತದೆ. ಹೊಂಡದಲ್ಲಿದ್ದವರನ್ನೂ ಎತ್ತಬಲ್ಲವರು ಹೊಸಾಕುಳಿಯ ಜನ. ಇಲ್ಲಿನ ಪ್ರೀತಿ ಸಜ್ಜನಿಕೆ ಎಲ್ಲರಿಗೂ ಮಾದರಿ….ಸೊಸೈಟಿಯ ಎಸ್.ಎಂ.ಹೆಗಡೆಯವರ ಬಹುಮುಖ ವ್ಯಕ್ತಿತ್ವ ಕಿರಿಯರಿಗೊಂದು ಆದರ್ಶ ಎಂದು ಹಲವಾರು ನಿದರ್ಶನಗಳನ್ನು ನೀಡುವುದರ ಮೂಲಕ ಪ್ರಶಂಸಿಸಿದರು.

RELATED ARTICLES  ಹೊಸಾಕುಳಿಯ ಹಳ್ಳಿಗೊಂದು ಘನತೆ ತಂದ ಹುಡುಗಿಯರು, ಸಾಧಕಿಯರಿಗೆ ಸನ್ಮಾನ ಕಾರ್ಯಕ್ರಮ ಸುಸಂಪನ್ನ.


ಗ್ರಾಮಪಂಚಾಯತ ಅಧ್ಯಕ್ಷರಾದ ಶ್ರೀ ಸುರೇಶ ಶೆಟ್ಟಿಯವರು ಸಲಹಾ ಮಂಡಳಿಯವರು ಸೇವಾ ಸಹಕಾರಿ ಸಂಘ ವ್ಯವಸ್ಥಿತ ರೀತಿಯಲ್ಲಿ ನಡೆಯಲೆಂದು ಒಮ್ಮೊಮ್ಮೆ ಗಂಭೀರವಾಗಿ ವ್ಯವಹರಿಸುವುದಿರುತ್ತದೆ. ಅದು ಅನ್ಯಥಾ ಭಾವನೆಯಿಂದಲ್ಲ. ನಮ್ಮ ಸಹಕಾರಿ ಸಂಘದ ಸಿಬ್ಬಂದಿಗಳು ಸದಾ ಕ್ರಿಯಾಶೀಲ ಹಾಗೂ ಪಾರದರ್ಶಕವಾಗಿ ವ್ಯವಹರಿಸುತ್ತಾರೆ. ಹೀಗಾಗಿಯೇ ಇದಿಂದು ಪ್ರಗತಿದಾಯಕ ಹೆಜ್ಜೆಯಿಡುತ್ತಿದೆ ಎಂದರು.


ಪ್ರಸಿದ್ಧ ತಾಳಮದ್ದಲೆ ಅರ್ಥಧಾರಿಗಳಾದ ಶ್ರೀ ಎಸ್. ಎಂ ಹೆಗಡೆ ಮುಡಾರೆಯವರು ಸೊಸೈಟಿ ಸುಬ್ಬಹೆಗಡೆಯವರ ಬಹುಮುಖ ವ್ಯಕ್ತಿತ್ವದ ಪರಿಚಯ ಮಾಡಿ ಅವರೊಳಗಿನ ಒಬ್ಬ ಹಾಸ್ಯಕಲಾವಿದನ ನೆನಪು ಮಾಡಿಕೊಟ್ಟರು. ಒಬ್ಬ ಕ್ರೀಡಾಪಟುವಾಗಿ, ನಾಟಕ ಪಾತ್ರಧಾರಿಯಾಗಿ, ಮುಖ್ಯ ಕಾರ್ಯನಿರ್ವಾಹಕನಾಗಿ ಎಲ್ಲ ಜವಾಬ್ದಾರಿಯನ್ನೂ ಸಮರ್ಥವಾಗಿ ನಿಭಾಯಿಸಿದವರು ಎಸ್.ಎಂ. ಹೆಗಡೆ ಗುಡ್ಡೇಬಾಳು ಎಂದು ಅಭಿನಂದಿಸಿದರು.


ಊರವರ ಪರವಾಗಿ ಶ್ರೀಯುತ ಸತ್ಯನಾರಾಯಣ ಹೆಗಡೆ ಹಿರೇಮಕ್ಕಿ, ಶ್ರೀಯುತ ಮುರಳೀಧರ ಹೆಗಡೆ ಹಿರೇಮಕ್ಕಿ, ಶ್ರೀ ಎಚ್ ಆರ್ ಗಣೇಶ ಹೆಬ್ಬಾರ್ತಕೇರಿ ಅಭಿನಂದಿಸಿದರು.


‌ಸಂಘದ ಸದಸ್ಯರ ಪರವಾಗಿ ಶ್ರೀಯುತ ಎನ್ ಎಲ್ ಹೆಗಡೆ ಗೊಟ್ಣಕೋಡ್ಲು ಮಾತನಾಡಿ ತನ್ನ ಶಿಷ್ಯನಾಗಿದ್ದು ನಂತರ ಪ್ರಾಮಾಣಿಕ ಸೇವೆ ಸಲ್ಲಿಸಿ ವ್ಯವಸಾಯ ಸಹಕಾರಿ ಸಂಘಕ್ಕೊಂದು ಹೆಸರು ತಂದರೆಂದು ಶ್ಲಾಘಿಸಿದರು.

RELATED ARTICLES  ಪ ಪೂ ಶ್ರೀ ಶ್ರೀ ಜಯದೇವ ಮಹಾಸ್ವಾಮಿಗಳಿಗೆ ಗೋಕರ್ಣ ಗೌರವ


ನಿವೃತ್ತಿ ಹೊಂದಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಎಸ್.ಎಂ.ಹೆಗಡೆ ಗುಡ್ಡೇಬಾಳು ನನಗೆ ನನ್ನ ದೇಹದ ಒಂದು ಭಾಗವನ್ನೇ ಕತ್ತರಿಸಿದಷ್ಟು ನೋವಾಗುತ್ತಿದೆ. ಸಂಘ ನನ್ನ ಜೀವನದ ಅವಿಭಾಜ್ಯ ಅಂಗ ಎಂದು ಭಾವುಕರಾಗಿ ಮಾತನಾಡಿ ತನಗೆ ಸಹಕರಿಸಿದ ಪ್ರತಿಯೊಬ್ಬರಿಗೂ ಕೃತಜ್ಞತೆ ಅರ್ಪಿಸಿದರು.


ಸಭಾಧ್ಯಕ್ಷತೆ ವಹಿಸಿದ್ದ ಜಿಲ್ಲಾಪಂಜಾಯತ ಸದಸ್ಯರೂ ಕೆ.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕರೂ ಆದ ಶ್ರೀಯುತ ಶಿವಾನಂದ ಹೆಗಡೆ ಕಡತೋಕಾ ಅವರು ಹೊನ್ನಾವರದ ಅನೇಕ ಸಂಘಗಳು ಇಂದು ಉತ್ತಮ ವ್ಯವಹಾರ ನಡೆಸುತ್ತಿವೆ..ಅದರಲ್ಲಿ ಹೊಸಾಕುಳಿ ವ್ಯವಸಾಯ ಸಹಕಾರಿ ಸಂಘವೂ ಕಪ್ಪುಚುಕ್ಕೆಯಿಲ್ಲದೇ ಗ್ರಾಹಕರಿಗೆ ನಿಜವಾದ ಸೇವೆ ಒದಗಿಸುತ್ತಿದೆ ಎಂದರು. ತನ್ನ ನೌಕರರಿಗೆ ಭದ್ರತೆ ಒದಗಿಸಿದಾಗ ಮಾತ್ರ ಅವರೂ ಸಂತೋಷದಿಂದ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ. ಸಂಘವೂ ಮುನ್ನಡೆ ಹೊಂದಲು ಸಾಧ್ಯ ಎಂದರು.


ನೀಹಾರಿಕಾ, ರಮಾಶ್ರೀ ಮತ್ತು ಸಂಗಡಿಗರು ಪ್ರಾರ್ಥಿಸಿದರೆ ಮುಖ್ಯ ಕಾರ್ಯದರ್ಶಿಗಳಾದ ವಿ.ಜಿ ಹೆಗಡೆಯವರು ವರದಿ ವಾಚಿಸಿ ವಂದಿಸಿದರು. ಸಂದೀಪ ಭಟ್ಟ ಸುಂದರವಾಗಿ ಕಾರ್ಯಕ್ರಮ ನಿರೂಪಿಸಿದರು. ಆಡಳಿತ ಮಂಡಳಿಯ ಎಲ್ಲಾ ಸದಸ್ಯರು, ಊರಿನ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಸೊಸೈಟಿ ಸುಬ್ಬಣ್ಣನವರನ್ನು ಆತ್ಮೀಯವಾಗಿ ಬೀಳ್ಕೊಟ್ಟರು.