ಭಟ್ಕಳ: ತಾಲೂಕಿನ ರೋಟರಿ ಕ್ಲಬ್ ನ ನೂತನ ಅಧ್ಯಕ್ಷರಾಗಿ ಈಶ್ವರ ನಾಯ್ಕ ಹಾಗೂ ಕಾರ್ಯದರ್ಶಿಯಾಗಿ ಶ್ರೀನಿವಾಸ ಪಡಿಯಾರ ಆಯ್ಕೆಯಾಗಿದ್ದು ಅವರು ಅಧಿಕಾರ ಸ್ವೀಕಾರ ಮಾಡಿದರು.
ಇಲ್ಲಿನ ರಬಿತಾ ಸಭಾಭವನದಲ್ಲಿ ನಡೆದ ಪದಗ್ರಹಣ ಕಾರ್ಯಕ್ರಮವನ್ನು ನೆರವೇರಿಸಿ ಮಾತನಾಡಿದ ರೋಟರಿ ಗವರ್ನರ್ ಡಾ.ಮಾಸೂರ್‍ಕರ್, ತನಗಾಗಿ ಹಾಗೂ ತನ್ನ ಕುಟುಂಬಕ್ಕೆ ಸೀಮಿತರಾಗದೇ ಪರರಿಗಾಗಿ ಬದುಕುವವರು ಜನರ ಮನಸ್ಸಿನಲ್ಲಿ ಹೆಚ್ಚು ಕಾಲ ನೆಲೆಸಿರುತ್ತಾರೆ. ದೇಶದಲ್ಲಿ ಜನಸಂಖ್ಯೆ ಹೆಚ್ಚುತ್ತಾ ಹೋಗುತ್ತಿದ್ದರೂ ಸಂಪನ್ಮೂಲಗಳ ಗಾತ್ರ ಬದಲಾಗಿಲ್ಲ. ಭಾರತ ವಿಶ್ವ ಗುರುವಾಗಲು ದೇಶದ ಜನರ ಮನೋಭಾವನೆ ಬದಲಾಗಬೇಕಿದೆ. ಯುವ ಜನರು ಈ ಬಗ್ಗೆ ಹೆಚ್ಚು ಚಿಂತನೆ ನಡೆಸಬೇಕಾಗಿದೆ ಎಂದರು.
ಕರ್ನಾಟಕ ವಿದ್ಯಚ್ಛಕ್ತಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಪೊನ್ನುರಾಜ್ ಭಟ್ಕಳ ರೋಟರಿ ಕ್ಲಬ್ ಇನ್ನಷ್ಟು ಎತ್ತರಕ್ಕೆ ಏರಲಿ ಎಂದು ಆಶಯ ವ್ಯಕ್ತಪಡಿಸಿದರು.
ನೂತನ ಅಧ್ಯಕ್ಷ ಈಶ್ವರ ನಾಯ್ಕ ಮಾತನಾಡಿ, ಭಟ್ಕಳದಲ್ಲಿ ರೋಟರಿ ಕ್ಲಬ್ ಬಹಳಷ್ಟು ಸಾಮಾಜಿಕ ಕಾರ್ಯಗಳನ್ನು ಕೈಗೊಂಡಿದೆ. ಡಯಾಲಿಸಿಸ್ ಸೆಂಟರ್, ಶಾಲೆ ಅಂಗನವಾಡಿಗಳಿಗೆ ಪೀಟೋಪಕರಣಗಳ ಪೂರೈಕೆ ಇದರಲ್ಲಿ ಪ್ರಮುಖವಾಗಿವೆ. ಎಲ್ಲರ ಸಹಕಾರದೊಂದಿಗೆ ಇನ್ನೂ ಹೆಚ್ಚಿನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.
ರೋಟರಿ ಉಪ ಗವರ್ನರ್ ಜಿ.ಎಸ್.ಹೆಗಡೆ, ಜೂನ್ ತಿಂಗಳ ರೋಟರಿ ಸಂಚಿಕೆಯನ್ನು ಬಿಡುಗಡೆಗೊಳಿಸಿದರು.