ಕುಮಟಾ: ರಕ್ತದಾನ ಮಹಾದಾನ ಅಂತಾರೆ, ರಕ್ತದಾನ ಅದೆಷ್ಟೋ ಜೀವ ಉಳಿಸುವ ಕಾಯಕ ಕೂಡಾ ಆಗಿದೆ. ಅಂತಹ ಮಹತ್ತರ ಕಾರ್ಯ ಮಾಡುತ್ತಿರುವ ಕುಮಟಾದ ಯುವ ಜನತೆ ಎಲ್ಲರಿಗೂ ಮಾದರಿ.
ಅದೆಷ್ಟೋ ವರ್ಷಗಳಿಂದ ರಕ್ತದಾನದ ಬಗ್ಗೆ ಅರಿವು ಮೂಡಿಸುತ್ತಾ, ಅಗತ್ಯ ಇರುವವರಿಗೆ ರಕ್ತದಾನ ಮಾಡುತ್ತಾ ಬಂದಿರುವ ವಾಟ್ಸಪ್ ಗೆಳೆಯರ ತಂಡವೊಂದಿದೆ ಅದುವೇ “ರಕ್ತನೀಡಿ ಒಂದು ಜೀವ ಉಳಿಸಿ ವಾಟ್ಸಾಪ್ ಗ್ರೂಪ್” ಶ್ರೀಧರ ಕುಮಟಾಕರ್ ಹಾಗೂ ಅವರ ಗೆಳೆಯರ ಬಳಗ ಅತ್ಯಂತ ಪ್ರೀತಿಯಿಂದ ಮಾಡುತ್ತಿರುವ ಕಾಯಕ ಅಂದರೆ ಅದು ರಕ್ತದಾನ. ಇಷ್ಟೆಲ್ಲ ಜನರ ಮಧ್ಯೆ ಜೀವ ಉಳಿಸೋ ಈ ತಂಡ ವಿಶೇಷವಾಗಿದೆ.
ರಕ್ತನೀಡಿ ಒಂದು ಜೀವವನ್ನು ಉಳಿಸಿ ಎಂಬ ಶೀರ್ಷಿಕೆಯಡಿ ನಿರ್ಮಾಣಗೊಂಡ ಈ ಗ್ರೂಪ್, ಕಳೆದ 7 ವರ್ಷಗಳಿಂದ ಸತತವಾಗಿ ರಾತ್ರಿ ಹಗಲೆನ್ನದೇ ಅಪಘಾತವಾದಾಗ, ಹೆರಿಗೆ ಸಂದರ್ಭದಲ್ಲಿ ಹಾಗೂ ಇನ್ನಿತರ ತುರ್ತು ಚಿಕಿತ್ಸೆಗಾಗಿ ರಕ್ತದ ಅವಶ್ಯಕತೆಯಿರುವವರಿಗೆ ಈ ತಂಡದ ದಾನಿಗಳು ರಕ್ತವನ್ನು ಒದಗಿಸುತ್ತ ಬಂದಿದ್ದಾರೆ.
ಇಂದು ವಿಶ್ವ ರಕ್ತದಾನಿಗಳ ದಿನಾಚರಣೆಯ ಅಂಗವಾಗಿ ತಾಲೂಕಿನ ಬ್ಲಡ್ ಬ್ಯಾಂಕ್‍ನಲ್ಲಿ ರಕ್ತನೀಡಿ ಒಂದು ಜೀವ ಉಳಿಸಿ ವಾಟ್ಸಾಪ್ ಗ್ರೂಪ್ ಹಾಗೂ ಕೆಲ ಕಾಲೇಜು ವಿದ್ಯಾರ್ಥಿಗಳು ಸ್ವ ಪ್ರೇರಣೆಯಿಂದ ರಕ್ತನೀಡಿ ವಿಶೇಷವಾದ ದಿನವಾಗಿ ಆಚರಿಸಿದ್ದು ಕೂಡಾ ಕಂಡುಬಂತು.
ಕೇಕ್ ಕತ್ತರಿಸಿ ಸಿಹಿಹಂಚುವ ಮೂಲಕ ರಕ್ತದಾನಿಗಳ ದಿನಾಚರಣೆಯನ್ನು ಕುಮಟಾದಲ್ಲಿ ವಿಶೇಷವಾಗಿ ಆಚರಿಸಿದರು.ಬ್ಲಡ್ ಬ್ಯಾಂಕಿನ ಹಿರಿಯ ಕಾರ್ಯದರ್ಶಿ ಡಾ. ಮೂಡ್ಲಗಿರಿಯವರು ಕಾರ್ಯಕ್ರಮದಲ್ಲಿ ಹಾಜರಿದ್ದು ಶುಭ ಹಾರೈಸಿದರು.