ಹೆಚ್ಚು ಓದಬೇಕೆಂಬ ಬಯಕೆ. ಹೆಚ್ಚು ಕಾಲ ಏಕಾಗ್ರತೆಯಿಂದ ಓದುತ್ತಾ ಕೂರಲು ಸಾಧ್ಯವಾಗುತ್ತಿಲ್ಲ. ಹೇಗಾದರು ಮಾಡಿ ಓದುತ್ತೇನೆ; ನೆನಪಿರುವುದಿಲ್ಲ. ಓದಿದ್ದು ಆಗಷ್ಟೇ ನೆನಪಿದ್ದು, ಪರೀಕ್ಷೆಯಲ್ಲಿ ನೆನಪಿಗೇ ಬರುವುದಿಲ್ಲ… ಕೆಲಸ, ವ್ಯಾಯಾಮ, ಕಸರತ್ತುಗಳ ದೇಹ ದಂಡನೆಯಿಂದ ಶ್ರಮಗೊಂಡ ದೇಹ ನಿದ್ರೆಯಿಂದ ವಿಶ್ರಾಂತಿ ಪಡೆದರೆ, ಅವಿರತ ಕೆಲಸ ನಿರ್ವಹಿಸಿದ ಮೆದುಳು ಎಷ್ಟರ ಮಟ್ಟಿಗೆ ವಿಶ್ರಾಂತಿ ಪಡೆದಿದೆ? ಚಂಚಲ ಮನಸ್ಸಿನ ಸಾವಿರಾರು ಕಾರ್ಯಗಳಿಂದ ನೆಮ್ಮದಿ, ಶಾಂತಿ ಲಭಿಸುತ್ತಿದೆಯೇ?
ಮಾನಸಿಕ ಆಘಾತ ತರುವ ಸಂಗತಿಗಳನ್ನು ಎದುರಿಸುವ ಶಕ್ತಿ, ಸಾಮರ್ಥ್ಯ, ಸ್ಥಿರ ಚಿತ್ತ ನಮಗಿದೆಯೇ? ಎಂದು ಕೇಳಿದರೆ ಬಹುತೇಕರಿಂದ ಇಲ್ಲ ಎಂಬ ಉತ್ತರ. ಇನ್ನು ಕೆಲವರು ಅವುಗಳನ್ನು ಗಳಿಸುವುದೇಗೆ ಎಂದು ಪ್ರಶ್ನೆ ಎಸೆಯುತ್ತಾರೆ. ಇವುಗಳ ಗಳಿಕೆಗೆ ಯೋಗ ಮಾರ್ಗದ ಧ್ಯಾನವೇ ಸಾಧನ ಹಾಗೂ ಮನಸ್ಸಿನ ಸ್ಥಿರತೆಗೆ ಧ್ಯಾನ ತಾಯಿಬೇರು ಇದ್ದಂತೆ. ವ್ಯಕ್ತಿಗತವಾಗಿ ಶಾಂತಿ ಲಭಿಸಿದರೆ ವಿಶ್ವಶಾಂತಿ ಸಾಧ್ಯವಾಗುತ್ತದೆ.
ಧ್ಯಾನ ಎಂದರೇನು?
ಪತಂಜಲಿ ಮುನಿಯು ಅಷ್ಟಾಂಗ ಯೋಗದಲ್ಲಿ ಧ್ಯಾನ ಕುರಿತು ವಿವರಿಸಿದ್ದು, ಧ್ಯಾನ ಸಾಧನೆಯ ಏಳನೇ ಮೆಟ್ಟಿಲಾಗಿದೆ. ಆರನೇ ಮೆಟ್ಟಿಲು ಧಾರಣ. ಧಾರಣ ಎಂದರೆ ಒಂದೇ ವಿಷಯದ ಮೇಲಿನ ಏಕಾಗ್ರತೆ. ಮನಸ್ಸು ಚಂಚಲವಾಗದೆ ತಿಕ್ಕಾಟಕ್ಕೊಳಗಾಗದೆ ತನ್ನ ಕ್ರಿಯೆಯತ್ತಲೇ ಏಕಾಗ್ರವಾಗಿರುವ ಸ್ಥಿತಿ. ಆಂತರ್ಯದ ಜ್ಞಾನವು ಬುದ್ಧಿಯೊಡನೆ ಉದ್ವೇಗರಹಿತವಾಗಿ ಸಂಗಮಿಸುವಂತೆ ಪ್ರೇರಣೆ ನೀಡುತ್ತದೆ. ಇದೇ ಸ್ಥಿತಿ ಹೆಚ್ಚು ಸಮಯ ಮುಂದುವರಿದರೆ ಅದೇ ಧ್ಯಾನ.
*ತಮ್ಮ ಆಂತರ್ಯವನ್ನು ಕೂಲಂಕಷವಾಗಿ ಪರೀಕ್ಷಿಸಿಕೊಳ್ಳಲು ಇರುವ ಸಾಧನ ಧ್ಯಾನವಾಗಿದ್ದು, ಆತ್ಮವನ್ನು ಪೂರ್ಣವಾಗಿ ಅರಿತುಕೊಳ್ಳುವುದೇ ಧ್ಯಾನ.
*ಧ್ಯಾನಿಸುವವ – ಧ್ಯಾನ ಕ್ರಿಯೆ -ಧ್ಯೇಯ (ಗುರಿ) ಈ ಮೂರರ ಪರಸ್ಪರ ಸಂಯೋಜನೆಯೇ ಧ್ಯಾನ.
*ಧ್ಯಾನ ಎಂದರೆ ತಲ್ಲೀನತೆ.
ಧ್ಯಾನದಲ್ಲಿ ಎರಡು ಪ್ರಕಾರ
1) ಸಾಕಾರ ಅಥವಾ ಸಬೀಜ(ಸಗರ್ಭ) ಧ್ಯಾನ: ಧ್ಯಾನಕ್ಕೆ ಪೂರಕವಾಗಿ ವಸ್ತು, ದೇವ, ದೇವತೆ, ನೆಚ್ಚಿನ ಗುರು, ಸೂರ್ಯ, ಚಂದ್ರ, ನಕ್ಷತ್ರ, ಹೀಗೆ ಪ್ರಿಯವಾದುದರ ಮೇಲೆ ಮನಸ್ಸನ್ನು ಕೇಂದ್ರೀಕರಿಸಿ ಅದರ ರೂಪ, ಆಕಾರ, ಗುಣ, ಸಾಧನೆಗಳನ್ನು ಮನನ ಮಾಡಿಕೊಳ್ಳುತ್ತಾ ಅಥವಾ ಮಂತ್ರ(ಶ್ಲೋಕ ಪಠಣ) ಸಾಧನದ ಮೂಲಕ ಏಕಾಗ್ರತೆಯನ್ನು ಪಡೆಯುವುದೇ ಸಾಕಾರ ಧ್ಯಾನ.
2) ನಿರಾಕಾರ ಅಥವಾ ನಿರ್ಬೀಜ(ಅಗರ್ಭ) ಧ್ಯಾನ: ಧಾರಣಗೊಂಡ ದೇಹದ ಉಸಿರಾಟ ಪ್ರಕ್ರಿಯೆಯ ಮೇಲೆ ಮನಸ್ಸನ್ನು ಕೇಂದ್ರೀಕರಿಸಿ ಕ್ರಮೇಣ ನಿರಾಕಾರವಾದ ಅನಂತಾತೀತವಾದ ‘0’ ‘ಶೂನ್ಯ’ದತ್ತ ಮನಸ್ಸನ್ನು ಉನ್ನತ ಸ್ಥಿತಿಯತ್ತ ಕೊಂಡೊಯ್ಯುವುದೇ ನಿರಾಕಾರ ಧ್ಯಾನ.
ಧ್ಯಾನದಲ್ಲಿ ಕಮಲದ ಹೂವಿಗೆ ಪ್ರಮುಖ ಪಾತ್ರ. ಕಮಲ ಧ್ಯಾನದ, ಶುದ್ಧತೆಯ ಪ್ರತೀಕ. ಧರ್ಮ ಪರಂಪರೆಯಲ್ಲಿ ಅದರ ಸೌಂದರ್ಯಕ್ಕೆ ಅಗ್ರಸ್ಥಾನವಿದೆ. ಧ್ಯಾನಕ್ಕೆ ಕುಳಿತ ಸ್ಥಿತಿಯನ್ನು, ದಳಗಳಿಂದ ತನ್ನ ಆಂತರ್ಯದ ಸೌಂದರ್ಯವನ್ನು ಮುಚ್ಚಿಕೊಂಡಿರುವ; ಪೂರ್ಣವಾಗಿ ಅರಳಿ ತನ್ನ ಸುಗಂಧವನ್ನು ಹರಡಲು ಕಾದುನಿಂತ ಕಮಲಕ್ಕೆ ಹೋಲಿಸಬಹುದು. ದಳಗಳು ಬಿಚ್ಚಿದೊಡನೆ ಸೌಂದರ್ಯ, ಸುಗಂಧ ಸುತ್ತಲೂ ಹರಡುವಂತೆ ಸಿದ್ಧಿ ಪಡೆದ ಯೋಗಿಯು ಧ್ಯಾನದ ಮೂಲಕ ಪರಿವರ್ತನೆಗೊಂಡು ತನ್ನ ಅಂತಃ ಪ್ರಭೆಯನ್ನು ಹರಡುತ್ತಾನೆ.
ಧ್ಯಾನಕ್ಕೆ ಸಿದ್ಧತೆ
ಸ್ಥಳ ಆಯ್ಕೆ: ಶುದ್ಧ ಗಾಳಿ ಬೆಳಕಿನಿಂದ ಕೂಡಿದ, ಗಲಾಟೆ, ಗದ್ದಲ, ಕಿರಿಕಿರಿ ಸದ್ದುಗಳಿಲ್ಲದ ಪ್ರಶಾಂತ ಸ್ಥಳ ಧ್ಯಾನಕ್ಕೆ ಸೂಕ್ತ. ಸಮತಟ್ಟಾದ ನೆಲವಿರಲಿ.
ಕಾಲ: ಪ್ರಾತಃ ಕಾಲ, ಸಂಜೆ ಸೂರ್ಯಾಸ್ತದ ನಂತರ, ಮಲಗುವ ಮುನ್ನ ಅಭ್ಯಾಸ ಮಾಡಬಹುದು. ಪ್ರಸ್ತುತ ಒತ್ತಡದ ದಿನಗಳಲ್ಲಿ ಲಭ್ಯವಿರುವ ಬಿಡುವಿನ ವೇಳೆ ಲಘು ಧ್ಯಾನ ಮಾಡಿ ವಿಶ್ರಾಂತಿ ಪಡೆಯಬಹುದು.
ನೆಲ ಹಾಸು: ಧ್ಯಾನಕ್ಕೆ ಕೂರಲು ಹತ್ತಿಯ ಜಮಖಾನ, ರೇಷ್ಮೆ ವಸ್ತ್ರ, ಕಂಬಳಿ, ಸೆಣಬಿನ ನೆಲಹಾಸು ಉತ್ತಮ. ಉನ್ನತ ಸಾಧನೆಗಾಗಿ ಸಾಧಕರು ಜಿಂಕೆ ಹಾಗೂ ಹುಲಿಯ ಚರ್ಮಗಳನ್ನು(ಲಭ್ಯವಿದ್ದಲ್ಲಿ) ಬಳಸಬಹುದು ಎಂದು ಹೇಳಲಾಗಿದೆ.
ಕುಳಿತುಕೊಳ್ಳುವ ವಿಧಾನ: ಧ್ಯಾನಕ್ಕೆ ಪದ್ಮಾಸನದಲ್ಲಿ ಕೂರುವುದು ಒಳಿತು. ಇಲ್ಲವೇ ಯಾವುದೇ ಅನುಕೂಲಕರ ಸ್ಥಿತಿಯಲ್ಲಿ ಕೂರಬಹುದು. ಬೆನ್ನುಹುರಿ, ಕುತ್ತಿಗೆ, ತಲೆ ಒಂದೇ ನೇರಕ್ಕಿರಲಿ.
ಮುದ್ರೆ: ಧ್ಯಾನಕ್ಕೆ ಆತ್ಮಾಂಜಲಿ ಅಥವಾ ಹೃದಯಾಂಜಲಿ ಮುದ್ರೆ, ಜ್ಞಾನ ಮುದ್ರೆ, ಚಿನ್ ಮುದ್ರೆ, ಚಿನ್ಮಯ ಮುದ್ರೆ, ಶಿವ ಮುದ್ರೆ ಪ್ರಮುಖವಾದವು.
ಎಚ್ಚರಿಕೆ
* ಯೋಗಾಸನಗಳು, ಪ್ರಾಣಾಯಾಮ ಅಭ್ಯಾಸದ ತಕ್ಷಣ ಧ್ಯಾನ ಬೇಡ. ಪ್ರಾಣಾಯಾಮ, ಧ್ಯಾನಗಳೆರಡನ್ನೂ ಪೂರೈಸುವವರೆಗೆ ಕೂರುವ ಸಾಮರ್ಥ್ಯವಿದ್ದರೆ ಎರಡನ್ನು ಅಭ್ಯಸಿಸಬಹುದು.
* ಕಣ್ಣುಗಳ ದೃಷ್ಟಿ ಮೇಲಕ್ಕೆ ಹರಿಯದಂತೆ ಕಾಯ್ದುಕೊಳ್ಳಿ. ಕಣ್ಣುಚ್ಚಿ ಧ್ಯಾನಿಸುವ ವೇಳೆ ದೃಷ್ಟಿ ಮೇಲಕ್ಕೆ ಹರಿದರೆ ಉಸಿರಾಟಕ್ಕೆ ತಡೆಯೊಡ್ಡುತ್ತದೆ. ನರ, ಮಾಂಸಖಂಡ, ರಕ್ತನಾಳ, ಮೆದುಳಿನ ಮೇಲೆ ಒತ್ತಡ ಬೀಳುತ್ತದೆ.
* ಹಠದಿಂದ ಧ್ಯಾನ ಬೇಡ. ದೇಹ ಚಲನೆಗೆ ಒಳಗಾದಾಗ, ತಲೆ ಅತ್ತಿತ್ತ ತಿರುಗಿದರೆ ಧ್ಯಾನ ನಿಲ್ಲಿಸಿ, ವಿರಮಿಸಿ. ಧ್ಯಾನವನ್ನು ಗುರುಮುಖೇನ ಅಭ್ಯಾಸ ನಡೆಸಿ.
ಪ್ರಯೋಜನಗಳು
* ಧ್ಯಾನದಿಂದ ಮಗುವಿನಂತೆ ಮನಸ್ಸು ವಿಶ್ರಮಿಸುತ್ತದೆ.
* ದೇಹ, ಮನಸ್ಸಿನ ದ್ವಂದ್ವ ದೂರ.
* ಮನಸ್ಸನ್ನು ಎಚ್ಚರದಲ್ಲಿಟ್ಟು ಪರಮಸುಖ ನೀಡುವಂತಹದ್ದು.
* ಏಕಾಗ್ರತೆ ಲಭಿಸುತ್ತದೆ. ಮನಸ್ಸು ಪ್ರಶಾಂತವಾಗುವುದರಿಂದ ಓದಿಗೆ ಸಹಕಾರಿ. ನೆನಪಿನ ಶಕ್ತಿ ಹೆಚ್ಚಳ.
* ಆಂತರ್ಯದ ಸತ್ಯ ಅರಿವಾಗುತ್ತದೆ. ಪ್ರಜ್ಞೆಯ ವಿಸ್ತಾರಕ್ಕೆ ಧ್ಯಾನ ಕಾರಣ.
* ಧ್ಯಾನಾಭ್ಯಾಸದ ವೇಳೆ ದೇಹದ ನವ ದ್ವಾರಗಳು ನಿಯಂತ್ರಿಸಲ್ಪಡುವುದ ರಿಂದ ಪ್ರಚೋದನೆಗೆ ತಡೆಯೊಡ್ಡುತ್ತದೆ. ಮೆದುಳನ್ನು ಪ್ರಚೋದಿಸುವ ಕರುಳಿನ ಸಂಕೋಚ, ಉಸಿರಾಟ ಪ್ರಕಿಯೆ, ಹೃದಯದ ಬಡಿತ ಸೇರಿದಂತೆ ಹಲವು ಶಾರೀರಿಕ ಸ್ವಾಭಾವಿಕ ಕ್ರಿಯೆಗಳು ನಿಯಂತ್ರಣದಲ್ಲಿರುತ್ತವೆ.
* ಮನಸ್ಸು ಪ್ರಕೃತಿಯೊಂದಿಗೆ ಒಂದಾಗುತ್ತದೆ.
* ಭಾವೋದ್ವೇಗ, ವಿಕೃತ ಭಾವ ಶಮನವಾಗುತ್ತದೆ.
* ತೇಜಸ್ಸು, ಚಿಂತನೆ, ಜಾಗರೂಕತೆ ವೃದ್ಧಿಸಿ ಅನಂತ ಚೈತನ್ಯ ಲಭಿಸುತ್ತದೆ.
* ಮನಸ್ಸಿನ ಜಾಗೃತಾವಸ್ಥೆಯಿಂದಾಗಿ ಹರ್ಷ, ಶಾಂತಿ, ಸಮಾಧಾನ ತಮ್ಮದಾಗುತ್ತದೆ.
* ಪರಿಶುದ್ಧ ಭಾವನೆ ತಳೆದು ಭ್ರಮೆ ದೂರಾಗುತ್ತದೆ. ದೃಢತೆ ಲಭಿಸುತ್ತದೆ.
* ಅಹಂಕಾರ, ಬಲ, ದರ್ಪ, ಕಾಮ, ಕ್ರೊಧ, ಅಪರಿಗ್ರಹ ತ್ಯಜಿಸಿ ವ್ಯಕ್ತಿ ಶಾಂತನಾಗುತ್ತಾನೆ.
* ಬಂಧನದ ಸ್ಥಿತಿಯಲ್ಲಿ ವ್ಯಕ್ತಿ ಧ್ಯಾನ ಆರಂಭಿಸುತ್ತಾನೆ, ಧ್ಯಾನದ ತತ್ಪರಿಣಾಮವಾಗಿ ಬಂಧ ಮುಕ್ತನಾಗುತ್ತಾನೆ.
*ದೇಹವನ್ನು ಮಣಿಸಿ ದೇಹವನ್ನು ಜಯಿಸಿದ ನಂತರ ಉಸಿರನ್ನು ಜಯಿಸುತ್ತೇವೆ, ನಂತರ ಮನಸ್ಸನ್ನು ಗೆದ್ದು ವಿಚಾರ ಪಕ್ವತೆ ಗಳಿಸುತ್ತೇವೆ. ಮುಂದಿನ ಹೆಜ್ಜೆಯಾಗಿ ತತ್ಕರ್ಮಗಳಲ್ಲಿ ಮಗ್ನರಾಗಿ ‘ವಿಕಸಿತ ಜ್ಞಾನ’, ‘ಹೊಸ ಪ್ರಕಾಶ’(ಪ್ರಜ್ಞೆ) ವನ್ನು ಪಡೆಯುತ್ತೇವೆ. ಈ ಜ್ಞಾನದ ಅಧಿಕಾರಿಯಾದ ಮಾನವನು ತಮ್ಮ ಆತ್ಮವನ್ನು ಪರಮಾತ್ಮ(ತನ್ನ ಇಷ್ಟ, ಪ್ರೀತಿ ಪಾತ್ರವಾದ ಅಥವಾ ತಮ್ಮಿಚ್ಛೆಯ ಧರ್ಮ ನಂಬಿಕೆಯ ದೇವರು)ನಿಗೆ ಅರ್ಪಿಸಿ, ಆತನ ಆಜ್ಞೆ ಪಾಲಕನಾಗುತ್ತಾನೆ. ಇದೇ ಶರಣಾಗತಿ ಎಂದು ಅನುಭಾವಿಗಳು ಹೇಳಿದ್ದಾರೆ.