ಕಾರವಾರ: ಬಹಳ ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿದ್ದ ಜಿಲ್ಲೆಯಲ್ಲಿ ಸುಸಜ್ಜಿತ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಕೂಗು ಇಂದು ಕಾರವಾರದಲ್ಲಿ ಪ್ರತಿಧ್ವನಿಸಿತು.
ಇಂದು ಕಾರವಾರದಲ್ಲಿ ಕೆಲ ಯುವಕರ ತಂಡವೊಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಅವರಿಗೆ ಮನವಿ ಸಲ್ಲಿಸಿದರೆ. ಶಾಸಕ ದಿನಕರ ಶೆಟ್ಟಿ ಹಾಗೂ ಇನ್ನಿತರ ಪ್ರಮುಖರು ಇದೇ ವಿಷಯವಾಗಿ ಸಚಿವ ಆರ್.ವಿ.ದೇಶಪಾಂಡೆ ಅವರಿಗೆ ಮನವಿ ಸಲ್ಲಿಸಿ ಗಮನ ಸೆಳೆದರು.
ಜಿಲ್ಲೆಯಲ್ಲಿ ಎಲ್ಲೂ ಸುಸಜ್ಜಿತ ಆಸ್ಪತ್ರೆ ಇಲ್ಲ. ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಇದ್ದೂ ಇಲ್ಲದಂತಾಗಿದೆ. ಅಪಘಾತಗಳು ಸಂಭವಿಸಿದಾಗ ಅಥವಾ ತುರ್ತ ಸಂದರ್ಭದಲ್ಲಿ ಜಿಲ್ಲೆಯ ಜನರು ನೂರಾರು ಕಿ.ಮೀ. ದೂರದ ಬಾಂಬೋಲಿಯಮ್, ಮಂಗಳೂರು, ಹುಬ್ಬಳ್ಳಿಗೆ ತೆರಳಬೇಕಾದ ಪರಿಸ್ಥಿತಿ ಇದೆ. ಆಸ್ಪತ್ರೆ ತಲುಪುವುದರ ಒಳಗೇ ಅದೆಷ್ಟೋ ಮಂದಿ ಸಾವನ್ನಪ್ಪಿರುವ ಉದಾಹರಣೆ ಇದೆ. ಹೀಗಾಗಿ, ಇದನ್ನು ನಿವಾರಿಸಲು ಜಿಲ್ಲೆಯಲ್ಲಿ ಸುಸಜ್ಜಿತ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯೊಂದನ್ನು ಸ್ಥಾಪಿಸಬೇಕೆಂದು ಇದೇ ಸಂದರ್ಭದಲ್ಲಿ ಒತ್ತಾಯಿಸಿದರು.
ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆ ವಿಳಂಬವಾಗುವುದರಿಂದ, ಅದಕ್ಕೂ ಮುನ್ನ ಜಿಲ್ಲೆಯ ಕರಾವಳಿ ಹಾಗೂ ಮಲೆನಾಡು ಭಾಗಕ್ಕೆ ಅನುಕೂಲ ಆಗುವಂತೆ ತುರ್ತಾಗಿ ಎರಡು ಟ್ರಾಮಾ ಸೆಂಟರ್ ಗಳನ್ನು ಸ್ಥಾಪಿಸಲೇಬೇಕು. ಇದರೊಂದಿಗೆ, ಪ್ರತಿ ತಾಲ್ಲೂಕಿಗೆ ತಲಾ ಒಂದರಂತೆ ಸುಸಜ್ಜಿತ ವೆಂಟಿಲೇಟರ್ ಹೊಂದಿರುವ ಆಂಬುಲೆನ್ಸ್ ಅನ್ನೂ ಒದಗಿಸಬೇಕು ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಮನವಿ ಸ್ವೀಕರಿಸಿದ ಸಚಿವರು, ಯುವಕರ ಟ್ವಿಟರ್ ಅಭಿಯಾನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಯುವಕರು ಮುನ್ನೆಲೆಗೆ ಬಂದು, ಅಭಿವೃದ್ಧಿ ಪರವಾಗಿ ಸಮಾಜದಲ್ಲಿ ಕೆಲಸ ಮಾಡುತ್ತಿರುವುದು ಅಭಿನಂದನಾರ್ಹ ಎಂದರು.
ಮನವಿ ಸಲ್ಲಿಸುವ ವೇಳೆ ಪ್ರಶಾಂತ್ ಕರ್ಕಿ, ಮಂಜು ದೀವಗಿ, ಗಜೇಂದ್ರ ಪಟಗಾರ, ಸಿದ್ದಾರ್ಥ ನಾಯಕ, ಶಿವಾನಂದ ಪಟಗಾರ, ಪ್ರೇಮ ಭಂಡಾರಿ ವಿಶ್ವನಾಥ ಹೊದ್ಕೆ, ಗಜೇಂದ್ರ ಬಿಣಗೇಕರ್, ಅಭಿಶೇಕ ಕಳಸ, ರಾಹುಲ್ ಶೆಟ್ಟಿ ಇದ್ದರು.
ಅದೇ ರೀತಿ ಶಾಸಕ ದಿನಕರ ಶೆಟ್ಟಿಯವರು ಮನವಿ ಸಲ್ಲಿಸುವ ವೇಳೆ. ಪ್ರಮುಖರಾದ ಶಿವಾನಂದ ಹೆಗಡೆ, ಸೂರಜ್ ನಾಯ್ಕ ಸೋನಿ, ವಿ.ಎಲ್ ನಾಯ್ಕ, ಪ್ರದೀಪ ನಾಯಕ ಹಾಗೂ ಇನ್ನಿತರರು ಇದ್ದರು.