೨೦೧೩ ರಲ್ಲಿ ಶ್ರೀರಾಮಚಂದ್ರಾಪುರ ಮಠಕ್ಕೆ ಬ್ಲಾಕ್ ಮೈಲ್ ಮಾಡಿದ ಪ್ರಕರಣದಲ್ಲಿ ದಿನಾಂಕ: 15.06.2019 ರಂದು 56 ನೇ ಅಪರ ಮುಖ್ಯ ಮಹಾನಗರ ದಂಡಾಧಿಕಾರಿಗಳವರ ನ್ಯಾಯಾಲಯವು ಇದು ಸಂಪೂರ್ಣ ವಿಚಾರಣೆಗೆ ಅರ್ಹವಾದ ಪ್ರಕರಣವೆಂದು ಪರಿಗಣಿಸಿ, ತಮ್ಮನ್ನು ದೋಷಮುಕ್ತಗೊಳಿಸುವಂತೆ ಆರೋಪಿಗಳು ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿ ಆದೇಶಿಸಿದೆ.
ಪ್ರಕರಣದ ಹಿನ್ನಲೆ:
’ಅಸ್ತ್ರ’ ಎಂಬ ಸರ್ಕಾರೇತರ ಸಂಸ್ಥೆ (ಎನ್.ಜಿ.ಓ)ಯ ಎಕ್ಸಿಕೂಟೀವ್ ಡೈರಡಕ್ಟರ್ ಆದ ಚಂದನ್ ಎಮ್.ಸಿ ಎಂಬುವವರು ಹಾಗೂ ಗೋಕರ್ಣ ಹಿತರಕ್ಷಣಾ ಸಮಿತಿ ಜೊತೆ ಸೇರಿ ಶ್ರೀರಾಮಚಂದ್ರಾಪುರಮಠದ ಪೂಜ್ಯ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹಾಗೂ ಧರ್ಮಚಕ್ರ ಟ್ರಸ್ಟ್ ವಿರುದ್ದ ಮಾನ್ಯ ಉಚ್ಚನ್ಯಾಯಾಲಯದಲ್ಲಿ 2013 ಜೂನ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿ.ಐ.ಎಲ್) ದಾಖಲು ಮಾಡಿದ್ದರು.
ಈ ಪ್ರಕರಣ ವಿಚಾರಣೆ ಹಂತದಲ್ಲಿದ್ದ ಸಂದರ್ಭದಲ್ಲಿ ಚಂದನ್ ಎಮ್.ಸಿ. ಹಾಗೂ ಗೋಕರ್ಣ ಹಿತರಕ್ಷಣಾ ಸಮಿತಿ ಸದಸ್ಯರು ಬ್ಲಾಕ್ ಮೇಲ್ ತಂತ್ರ ಬಳಸಿ ಹಣ ದೋಚಲು ಪ್ರಯತ್ನಿಸಿದ್ದರು. ಪಿರ್ಯಾದುದಾರರು ಈ ಪಿ.ಐ.ಎಲ್‌ನ್ನು ಹಿಂದಕ್ಕೆ ಪಡೆಯಲು ರೂ. 10 ಕೋಟಿ ಹಣ ಬೇಡಿಕೆ ಇಟ್ಟಿದ್ದರು.
ಆದರೆ ಬೆದರಿಕೆಗಳಿಗೆ ಬಗ್ಗದ ಶ್ರೀಮಠ; ಪೋಲೀಸರ ನಿರ್ದೇಶನದಂತೆ 10 ಲಕ್ಷ ಮುಂಗಡ ಕೊಡುವಂತೆ ನಟಿಸಿ, ಸಾಕ್ಷಾಧಾರ ಸಹಿತವಾಗಿ ಆರೋಪಿತರನ್ನು ಪೋಲಿಸರು ಬಂಧಿಸಿದ್ದರು.
ತದನಂತರ ನಕಲಿ ಕೇಸು ದಾಖಲಿಸಿದ್ದಕ್ಕೆ ಕರ್ನಾಟಕ ಉಚ್ಛನ್ಯಾಯಾಲಯ ಪಿರ್ಯಾದುದಾರರಿಗೆ ದಂಡ ವಿಧಿಸಿ ಹಾಗೂ ಪಿರ್ಯಾದುದಾರ ವಕೀಲ ಕೆ ಎನ್ ಪ್ರವೀಣ್ ಕುಮಾರ್ ಇವರಿಗೆ ಇನ್ನು ಮುಂದೆ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗಳಲ್ಲಿ ವಕೀಲನಾಗಿ ಹಾಜರಾಗದಂತೆ ನಿರ್ದೇಶಿಸಿ, ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ವಜಾಗೊಳಿಸಿತ್ತು.
ಗಿರಿನಗರ ಪೊಲೀಸ್ ರವರು ಪ್ರಕರಣದಲ್ಲಿ ವಿಚಾರಣೆ ನಡೆಸಿ, ನ್ಯಾಯಾಲಯಕ್ಕೆ ಎಲ್ಲಾ ಏಳು ಆರೋಪಿಗಳ ವಿರುದ್ಧ ವಿಸ್ತೃತ ದೋಷಾರೋಪಣಾ ಪಟ್ಟಿ ಸಲ್ಲಿಸಿತ್ತು. ನ್ಯಾಯಾಲಯವು ಎಲ್ಲಾ ಆರೋಪಿಗಳ ವಿರುದ್ಧ ದೋಷಾರೋಪಣಾ ಪಟ್ಟಿಯನ್ನು ಮಾನ್ಯ ಮಾಡಿ, ಕ್ರಿಮಿನಲ್ ಪ್ರಕರಣವನ್ನು ದಾಖಲಿಸಿಕೊಂಡಿತ್ತು. ಪ್ರಕರಣದಲ್ಲಿ ಆರೋಪಿಗಳು ತಮ್ಮನ್ನು ದೋಷಮುಕ್ತಗೊಳಿಸುವಂತೆ ಕಲಂ ೨೩೯ ಸಿ.ಆರ್.ಪಿ.ಸಿ. ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಗೆ ಸೂಕ್ತ ತಕರಾರನ್ನು ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಶ್ರೀ ಅಶೋಕ ನಾಯಕ್ ರವರು ಸಲ್ಲಿಸಿ, ಪ್ರಕರಣದ ಗಂಭೀರತೆಯನ್ನು ನ್ಯಾಯಾಲಯಕ್ಕೆ ಮನದಟ್ಟು ಮಾಡಿಕೊಟ್ಟಿದ್ದರು.
ಈ ಪ್ರಕರಣದಲ್ಲಿ ದಿನಾಂಕ:೧೫.೦೬.೨೦೧೯ ರಂದು ೫೬ ನೇ ಅಪರ ಮುಖ್ಯ ಮಹಾನಗರ ದಂಡಾಧಿಕಾರಿಗಳವರ ನ್ಯಾಯಾಲಯವು ಆರೋಪಿಗಳ ವಿರುದ್ಧ ಇದು ಸಂಪೂರ್ಣ ವಿಚಾರಣೆಗೆ ಅರ್ಹವಾದ ಪ್ರಕರಣವೆಂದು ಪರಿಗಣಿಸಿ, ಅವರು ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿ ಆದೇಶಿಸಿದೆ.