ಗೋಕರ್ಣ : ಇಂದು ಗಿರಿನಗರದ ರಾಮಾಶ್ರಮದಲ್ಲಿ ಸುದ್ದಿಗೋಷ್ಟಿ ನಡೆಸಿದ ಶ್ರೀ ರಾಮಚಂದ್ರಾಪುರದ ರಾಘವೇಶ್ವರ ಭಾರತೀ ಶ್ರೀಗಳು ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ಅಶೋಕೆಯಲ್ಲಿ ವಿಶ್ವವಿದ್ಯಾಪೀಠ ಸ್ಥಾಪನೆಗೊಳ್ಳಲಿದ್ದು, 2020 ರ ಎಪ್ರಿಲ್ 26 ರ ಅಕ್ಷಯ ತೃತೀಯದಂದು ವಿಶ್ವವಿದ್ಯಾಲಯ ಲೋಕಾರ್ಪಣೆಗೊಳ್ಳಲಿದೆ ಎಂದರು.
ಭಾರತದ ದೇಶಿಯ ಹಾಗೂ ಪುರಾತನ ವಿದ್ಯೆಗಳಿಗೆ ಪುನರುಜ್ಜೀವನ ನೀಡುವ ಉದ್ದೇಶದಿಂದ ಶ್ರೀರಾಮಚಂದ್ರಾಪುರ ಮಠದ ಶ್ರೀರಾಘವೇಶ್ವರಭಾರತೀ ಶ್ರೀಗಳು ವಿಷ್ಣುಗುಪ್ತ (ಚಾಣಾಕ್ಯ) ಹೆಸರಿನ ವಿಶ್ವವಿದ್ಯಾಪೀಠದ ಸ್ಥಾಪನೆಗೆ ಮುಂದಾಗಿದ್ದು ಇದೀಗ ಅದರ ಬಗ್ಗೆ ಪೂರ್ಣ ಮಾಹಿತಿ ನೀಡಿದರು.
ವಿಶ್ವವಿದ್ಯಾಲಯವೂ, ಪುರಾತನ ವಿದ್ಯೆಗಳಾದ ಕೃಷಿ,ಆರ್ಯುವೇದ, ಸಮರ ಕಲೆಗಳು, ಶಿಲ್ಪಕಲೆ, ವೇದ ಸೇರಿದಂತೆ ನೂರಾರು ವಿಭಾಗಗಳಲ್ಲಿ ಶಿಕ್ಷಣ ನೀಡಲಿದೆ.೨೫ ಬೋಧಕರು, ೨೫ ಆಚಾರ್ಯರು ಹಾಗೂ ೧೦೦ ವಿದ್ಯಾರ್ಥಿಗಳು ಪ್ರವೇಶಕ್ಕೆ ಅವಕಾಶವಿದ್ದು, ದೇಶ-ವಿದೇಶದಿಂದ ತಜ್ಞರು ಅಧುನಿಕ ತಂತ್ರಜ್ಞಾನದ ಮೂಲಕ ಬೋಧನೆ ಮಾಡಲಿದ್ದಾರೆ. ವಿಶೇಷವೆಂದರೇ ಈ ವಿವಿಯಲ್ಲಿ ಪುರುಷ ಮಹಿಳೆಯರು ಹಾಗೂ ಎಲ್ಲ ವರ್ಗದ ಜನರಿಗೆ ಪ್ರವೇಶಾವಕಾಶ ಸಿಗಲಿದೆ.
ವಿಶ್ವವಿದ್ಯಾಪೀಠದಲ್ಲಿ ವಿಕಾಸಗೊಂಡ ವಿದ್ಯಾರ್ಥಿ ಬಾಹ್ಯ ಜಗತ್ತಿನಲ್ಲಿ ಅಪ್ರಸ್ತುತನಾಗಬಾರದು ಎಂಬ ಕಾರಣಕ್ಕೆ ಇಲ್ಲಿ ಇಂಗ್ಲೀಷ್, ಹಿಂದಿಯಂತಹ ಆಧುನಿಕ ಭಾಷೆಗಳ ಬೋಧನೆ ಹಾಗೂ ತಂತ್ರಜ್ಞಾನದ ಕಲಿಕೆಗೂ ಅವಕಾಶ ಕಲ್ಪಿಸಲಾಗಿದೆ.
25 ವರ್ಷಗಳ ಹಿಂದೆ ರಾಘವೇಶ್ವರ ಭಾರತೀ ಶ್ರೀಗಳ ಪೀಠಾರೋಹಣದ ದಿನ ಶ್ರೀಶಂಕರರ ನೆನಪಿನಲ್ಲಿ ವಿಶ್ವವಿದ್ಯಾಲಯ ಸ್ಥಾಪಿಸುವ ಘೋಷಣೆ ಮಾಡಿದ್ದ ಶ್ರೀಗಳು ಇದೀಗ ಶ್ರೀರಾಮಚಂದ್ರಾಪುರದ ಮೂಲಮಠವಿರುವ ಅಶೋಕೆಯಲ್ಲಿ ಈ ಮಹತ್ಕಾರ್ಯ ಕೈಗೊಳ್ಳಲಿದ್ದಾರೆ.
ಎಸ್ಎಸ್ಎಲ್ಸಿ ಉತ್ತೀರ್ಣರಾದ ಹಾಗೂ ಎಲ್ಲ ವಯೋಮಾನದ ಜನರಿಗೂ ಇಲ್ಲಿ ಶಿಕ್ಷಣ ಪಡೆಯಲು ಅವಕಾಶವಿದ್ದು, ಗುರುಕುಲ ಮಾದರಿಯಲ್ಲಿ ಶಿಕ್ಷಣೆ ನೀಡಲಾಗುವುದು ಎಂದು ಶ್ರೀಗಳು ಮಾಹಿತಿ ನೀಡಿದ್ದಾರೆ. ಇದರೊಂದಿಗೆ ಆದಿಶಂಕರಾಚಾರ್ಯರು ಮೂರು ಬಾರಿ ಭೇಟಿ ನೀಡಿದ ಅಶೋಕೆಯಲ್ಲಿ ಅವರ ಸ್ಮರಣೆಯನ್ನು ಅಮರವಾಗಿಸುವ ನಿಟ್ಟಿನಲ್ಲಿ ಶಂಕರ್ ಭಗವತ್ಪಾದರ ಪಾದಸ್ಪರ್ಶದ ಧನ್ಯತೆಯನ್ನು ಕಂಡ ಶ್ರೀಮಲ್ಲಿಕಾರ್ಜುನ್ ದೇವಸ್ಥಾನದ ಪರಿಸರದಲ್ಲಿ ಶ್ರೀಶಂಕರ್ ಥೀಂ ಪಾರ್ಕ್ ಕೂಡ ತಲೆಎತ್ತಲಿದ್ದು, ಇಲ್ಲಿ ದಿವ್ಯೌಷಧ ವನ, ಶಂಕರರ ಜೀವನಶಿಲ್ಪ,ಭಾರತೀಯ ಸಂಸ್ಕೃತಿ ಸಂಶೋಧನಾಲಯ, ಆಡಿಯೋ-ವಿಡಿಯೋ ವಸ್ತುಸಂಗ್ರಹಾಲಯ ತಲೆ ಎತ್ತಲಿದೆ.