ಕುಮಟಾ: ವಿದಾರ್ಥಿ ಪ್ರತಿನಿಧಿಗಳಾಗಿ ಆಯ್ಕೆಯಾದವರು ಅಂತಃಕರಣ ಶುದ್ಧಿಯಿಂದ ಶಾಲಾ ಅಭ್ಯುದಯಕ್ಕಾಗಿ ನಿಯಮಿತ ಕಾರ್ಯ ಪಾಲಿಸಬೇಕೆಂದು ವಾಣಿಜ್ಯೋದ್ಯಮಿ, ಚಲನಚಿತ್ರ ನಿರ್ಮಾಪಕ ಸುಬ್ರಾಯ ವಾಳ್ಕೆ ಅಭಿಪ್ರಾಯಪಟ್ಟರು. ಅವರು ಚಿತ್ರಿಗಿ ಮಹಾತ್ಮಾ ಗಾಂಧಿ ಪ್ರೌಢಶಾಲೆಯ ವಾರ್ಷಿಕ ವಿದ್ಯಾರ್ಥಿ ಸಂಸತ್ತನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಪ್ರಮಾಣ ವಚನ ಸ್ವೀಕರಿಸಿದ ನೂತನ ಮಂತ್ರಿಮಂಡಳದ ಸದಸ್ಯರನ್ನು ಕುರಿತು ದೇಶ ಇಂದು ಸ್ವಚ್ಛತೆಯ ಬಗ್ಗೆ ಗಂಭೀರ ಚಿಂತನೆ ನಡೆಸಿ ಅನೇಕ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸುತ್ತಿದೆ. ಅದಕ್ಕೆ ಪೂರಕವಾಗಿ ಶಾಲೆಯನ್ನೂ ಸ್ವಚ್ಛವಾಗಿಟ್ಟುಕೊಳ್ಳುವಲ್ಲಿ ಪ್ರತಿ ವಿದ್ಯಾರ್ಥಿಯೂ ಸೂಕ್ಷ್ಮಪ್ರಜ್ಞೆ ಹೊಂದಿರಬೇಕೆಂದು ಸ್ವಚ್ಛತಾ ಮಂತ್ರಿಗಳಾಗಿ ಆಯ್ಕೆಗೊಂಡವರನ್ನು ಎಚ್ಚರಿಸಿದರು. ಸಾಧನೆಗೈಯಲು ಬಡತನ ಹಾಗೂ ಕನ್ನಡ ಮಾಧ್ಯಮದಂತಹ ಕೀಳರಿಮೆ ಸಲ್ಲದು. ಅದನ್ನು ತೊರೆದು ಹೊರಬಂದು ದೇಶ ಕಟ್ಟಿ ಎಂದು ಕರೆ ನೀಡಿದರು. ಇದೇ ಸಂದರ್ಭದಲ್ಲಿ ಅವಶ್ಯಕತೆಯುಳ್ಳ ಮಕ್ಕಳಿಗೆ ನೋಟ್ ಬುಕ್ ಬ್ಯಾಗ್ ಪೂರೈಸಲು ಸಹಕರಿಸುವುದಾಗಿ ತಿಳಿಸಿದರಲ್ಲದೇ ಆಯ್ದ ವಿದ್ಯಾರ್ಥಿಗಳಿಗೆ ಶಿಷ್ಯ ವೇತನವನ್ನು ನೀಡಿದರು.


ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮುಖ್ಯಾಧ್ಯಾಪಕ ಎನ್.ಆರ್.ಗಜು, ಶಾಲಾ ಕಾರ್ಯಾಂಗ ವ್ಯವಸ್ಥೆ ಸುಲಲಿತವಾಗಿ ನಡೆಯಲು ಮಂತ್ರಿಮಂಡಳದ ಪಾತ್ರ ಗುರುತರವಾದುದು ಎಂದರು.

RELATED ARTICLES  ಜೊತೆ ಜೊತೆಯಲಿ' ಸೀರಿಯಲ್​ನ ನಾಯಕ ನಟ ಅನಿರುದ್ಧ್​ ಗೆ ನಿಷೇಧ..?


ಪೌರನೀತಿ ಬೊಧಿಸುವ ಶಿಕ್ಷಕ ಪ್ರದೀಪ ನಾಯಕ ದೇಶದ ಸಂಸತ್ತಿನ ರಚನೆ ಹಾಗೂ ಕಾರ್ಯಭಾರಗಳನ್ನು ಶಾಲಾ ಸಂಸತ್ತಿನೊಂದಿಗೆ ತುಲನೆ ಮಾಡುತ್ತಾ ರಾಜಕೀಯ ಒಳನೋಟ ಬೀರಿದರು. ಈ ಸಂದರ್ಭದಲ್ಲಿ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದ ಪ್ರಶಿಕ್ಷಣಾರ್ಥಿಗಳು ಹಾಗೂ ಮಾಜಿ ಪುರಸಭಾ ಸದಸ್ಯ ವಿಶ್ವನಾಥ ನಾಯ್ಕ ಮೊದಲಾದವರು ಉಪಸ್ಥಿತರಿದ್ದರು. ತರುವಾಯ ಮೊದಲ ಸಂಸತ್ತಿನ ಕಾರ್ಯಕಲಾಪಗಳನ್ನು ನಡೆಸಲಾಯಿತು.


ಕುಮಾರಿ ಪ್ರಜ್ಞಾ ಆಚಾರಿ ಪ್ರಾರ್ಥಿಸಿದರು. ಸಂಸತ್ತಿನ ಕಾರ್ಯದರ್ಶಿ ಶಿಕ್ಷಕ ಸುರೇಶ್ ಪೈ ಸ್ವಾಗತಿಸಿ, ಪ್ರತಿಜ್ಞಾ ವಿಧಿ ಬೋಧಿಸಿದರು. ಶಿಕ್ಷಕ ಕಿರಣ ಪ್ರಭು ಅತಿಥಿ-ಉದ್ಘಾಟಕರನ್ನು ಪರಿಚಯಿಸಿದರು. ಶಿಕ್ಷಕ ವಿ.ಎನ್.ಭಟ್ಟ ನಿರೂಪಿಸಿದರು. ನೂತನವಾಗಿ ಅಧಿಕಾರ ವಹಿಸಿಕೊಂಡ ವಿದ್ಯಾರ್ಥಿ ಪ್ರತಿನಿಧಿ ರಕ್ಷಿತಾ ಪಟಗಾರ ವಂದಿಸಿದರು.


“ಹತ್ತನೆಯ ತರಗತಿ ಓದುತ್ತಿರುವ ಕುಮಾರಿ ರಕ್ಷಿತಾ ಗೋಪಾಲ ಪಟಗಾರ ಎಂಬ ಹೆಸರಿನವಳಾದ ನಾನು, ಶಾಲಾ ಸಂಸತ್ತಿನ ಸದಸ್ಯಳಾಗಿ ಚುನಾಯಿತಳಾಗಿ ಮುಖ್ಯ ಮಂತ್ರಿಯಾಗಿ ನೇಮಕವಾಗಿ, ಶುದ್ಧ ಅಂತಃಕರಣದಿಂದ ಶಾಲಾ ಸಂಸತ್ತಿನ ನಿಯಮದಡಿ ಶ್ರದ್ಧೆ, ಸತ್ಯ ಮತ್ತು ನಿಷ್ಠೆಯಿಂದ ವಿದ್ಯಾಸಂಸ್ಥೆಯ ಘನತೆ, ಶ್ರೇಷ್ಠತೆ, ಸಾರ್ವಭೌಮತೆಯನ್ನು ಮತ್ತು ಅಖಂಡತೆಯನ್ನು ಎತ್ತಿ ಹಿಡಿಯುತ್ತೇನೆಂದು, ಪ್ರತಿಭಾ ಸಾಧನೆಗಳೊಂದಿಗೆ ಶಾಲೆಯ ಹಿರಿಮೆ ಬೆಳೆಗಲು ಶ್ರಮಿಸುತ್ತೇನೆಂದೂ, ಗುರುವೃಂದದವರೊಂದಿಗೆ, ಸಹಪಾಠಿಗಳೊಂದಿಗೆ, ಸ್ನೇಹಪೂರ್ವಕವಾಗಿ, ಶ್ರದ್ಧಾಪೂರ್ಣವಾಗಿ ಸಂಯಮದೊಂದಿಗೆ ಕಾರ್ಯನಿರ್ವಹಿಸುತ್ತೇನೆಂದು ಹಾಗೂ ನಾನು ರಾಗ ದ್ವೇಷ ಅಸೂಯೆಗಳಿಲ್ಲದೇ ಶಾಲೆಯ ಕೀರ್ತಿ ಹೆಚ್ಚಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆಂದು ತಾಯಿ ಶಾರದಾಂಬೆಯ ಹೆಸರಿನಲ್ಲಿ ಪ್ರಮಾಣ ಮಾಡುತ್ತೇನೆ”
-ಮುಖ್ಯ ಮಂತ್ರಿ ರಕ್ಷಿತಾ ಪಟಗಾರ

RELATED ARTICLES  ಯಶೋಧರಾ ನಾಯ್ಕ ಟ್ರಸ್ಟ ಮಹಿಳೆಯರಿಗೆ ದಾರಿದೀಪವಾಗಿದೆ : ಕೃಷ್ಣಮೂರ್ತಿ ಹೆಬ್ಬಾರ.


“ಈ ಶಾಲೆಯ ಮುನ್ನೂರು ವಿದ್ಯಾರ್ಥಿಗಳ ಪ್ರತಿನಿಧಿಯಾಗಿ ನನ್ನ ಆಯ್ಕೆಯನ್ನು ಅತ್ಯಂತ ಸಂತೋಷದಿಂದ ಸಂಭ್ರಮಿಸುತ್ತೇನೆ. ವಿವಿಧ ಕಾರ್ಯಹಂಚಿಕೆಯ 24 ಪ್ರತಿನಿಧಿಗಳೆಲ್ಲಾ ಸೇರಿ ಶಾಲೆಯ ಉತ್ತಮ ಫಲಿತಾಂಶಕ್ಕೂ ಕಠಿಣ ಅಭ್ಯಾಸ ಮಾಡುತ್ತೇವೆ. ಎಲ್ಲ ನನ್ನ ಸಹಪಾಠಿಗಳಲ್ಲಿಯ ಜಡತ್ವವನ್ನು ಹೋಗಲಾಡಿಸಲು ಶಕ್ತಿಮೀರಿ ಯತ್ನಿಸುತ್ತೇನೆ”
–ಕುಮಾರ ಲಕ್ಷ್ಮೀಧರ ಗೌಡ, ವಿದ್ಯಾರ್ಥಿ ಪ್ರತಿನಿಧಿ