ಕುಮಟಾ: ಮಹಾತ್ಮಾ ಗಾಂಧಿ ಪ್ರೌಢಶಾಲೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ‘ಯೋಗವೇ ನಮ್ಮನ್ನು ರಕ್ಷಿಸು’ ಎಂಬ ಶೀರ್ಷಿಕೆಯಡಿ ನಡೆಸಲಾಯಿತು. ಯೋಗ ಶಿಕ್ಷಕಿ ಚಂದ್ರಕಲಾ ಆಚಾರ್ಯ ಸರಳ ಯೋಗಾಸನಗಳನ್ನು 300 ವಿದ್ಯಾರ್ಥಿಗಳಿಗೆ ಸಾಮೂಹಿಕವಾಗಿ ವಿವಿಧ ಫಾರ್ಮೆಟ್‍ಗಳಲ್ಲಿ ತರಬೇತುಗೊಳಿಸಿ ಪ್ರದರ್ಶಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಮುಖ್ಯಾಧ್ಯಾಪಕ ಎನ್.ಆರ್.ಗಜು ಈ ಸಂದರ್ಭದಲ್ಲಿ ನಿಯಮಿತ ಯೋಗಾಭ್ಯಾಸದಿಂದ ಮಕ್ಕಳಲ್ಲಿ ಏಕಾಗ್ರತೆ ಸಿದ್ಧಿಸಿ, ಚಿತ್ತ ಚಂಚಲ್ಯತೆ ದೂರವಾಗುತ್ತದಲ್ಲದೇ ಆರೋಗ್ಯ ವೃದ್ಧಿಯಾಗಿ ಸದಾ ಚೈತನ್ಯಶೀಲತೆ ಹೊರಹೊಮ್ಮುತ್ತಿರುತ್ತದೆ ಎಂದಭಿಪ್ರಾಯಪಟ್ಟರು. ಯೋಗೋ ರಕ್ಷತಿ ರಕ್ಷಿತಃ ಯೋಗವನ್ನು ನಾವು ಉಳಿಸಿಕೊಂಡರೆ ಯೋಗವೇ ನಮ್ಮನ್ನು ರಕ್ಷಿಸುತ್ತದೆ ಎಂಬಂತೆ, ಭಾರತೀಯ ಯೋಗ ಋಷಿಗಳಿಂದ ಪ್ರತೀತ, ಅತ್ಯಂತ ಪುರಾತನ ಯೋಗ ಎಲ್ಲಾ ಕಾಲಕ್ಕೂ, ಧರ್ಮ, ಜಾತಿ, ಜನಾಂಗ, ಬಣ್ಣವನ್ನವಲಂಬಿಸಿ ಬದಲಾಗಲಾರದೆಂದರು. ಸಹಶಿಕ್ಷಕರಾದ ವಿಷ್ಣು ಭಟ್ಟ, ಶಿವಾನಂದ ಪೈ, ಸುರೇಶ್ ಪೈ, ಕಿರಣ ಪ್ರಭು, ಪ್ರದೀಪ ನಾಯಕ, ಪ್ರಶಾಂತ ಗಾವಡಿ, ಕೆ.ಅನ್ನಪೂರ್ಣ, ಬಿ.ಪವತ್ರಾ, ಅಂಕಿತಾ ನಾಯ್ಕ ಮೊದಲಾದವರು ಸಹಕರಿಸಿದರು.