ಶಿರಸಿ: ನಗರದ ಮಧ್ಯಭಾಗದಲ್ಲಿ 5ಎಕರೆ-35ಗುಂಟೆ ವಿಸ್ತೀರ್ಣ ಇರುವ ಶ್ರೀ ಮಾರಿಕಾಂಬಾ ಪ್ರೌಢಶಾಲೆಯ ಆವಾರದಲ್ಲಿ ಮಳೆನೀರು ಪೋಲಾಗುವುದನ್ನು ಗಮನಿಸಿ ಶಿರಸಿ ಜೀವಜಲ ಕಾರ್ಯಪಡೆ ಬಿದ್ದ ನೀರನ್ನು ಭೂಮಿಯಲ್ಲಿ ಇಂಗಿಸುವ ಹಾಗು ಬಳಸುವ ಮೂಲಕ ಸಂಸ್ಥೆಗೂ ಹಾಗು ಸುತ್ತಮುತ್ತಲಿನ ಎಲ್ಲರಿಗೂ ಪ್ರಯೋಜನ ಲಭಿಸಲಿ ಎಂಬ ಸದುದ್ದೇಶದಿಂದ ₹44,500 ವೆಚ್ಚದಲ್ಲಿ ಮಳೆ ನೀರು ಇಂಗಿಸುವ ಘಟಕ ನಿರ್ಮಾಣ ಮಾಡಿ ಮಾದರಿಯಾಗಿದೆ.

ಬುಧವಾರ ವಿದ್ಯಾಲಯದ ಆವರಣದೊಳಗೆ ಘಟಕ ನಿರ್ಮಾಣದ ಕುರಿತಾಗಿ ಮಾಹಿತಿ ನೀಡಿದ ಸಮಿತಿ ಶ್ರೀಕಾಂತ ಹೆಗಡೆ ಸುಮಾರು 540 ಚ. ಮೀಟರ್ ಛಾವಣಿ ಇರುವ ಸುಂದರ ಕಟ್ಟಡದಿಂದ ಶಿರಸಿಯ ವಾಡಿಕೆಯ ಮಳೆಯಿಂದ ವರ್ಷಕ್ಕೆ ಸುಮಾರು 14 ಲಕ್ಷ ಲೀಟರ್ ನೀರು ಸಂಗ್ರಹ ಸಾಧ್ಯವಿದೆ. ಈ ಕಟ್ಟಡಕ್ಕೆ ಅಳವಡಿಸಿರುವ 4 ಇಂಚು ಪೈಪಿಗೆ ಕಾರ್ಯಪಡೆ 4 ಇಂಚಿನ 250 ಅಡಿ ಪಿ.ವಿ.ಸಿ. ಪೈಪ್‍ನ್ನು ಅಳವಡಿಸಿ ಭಾವಿಯ ಹತ್ತಿರ ಒಂದು 3 ಅಡಿ ಘಿ 3 ಅಡಿ ಘಿ 2.5 ಅಡಿ ಚೇಂಬರನ್ನು ನಿರ್ಮಿಸಿ ಅದರ ಮೂಲಕ, ಭಾವಿಯ ಹತ್ತಿರದಲ್ಲೇ ತೆಗೆದ 10 ಅಡಿ ಮಳೆನೀರು ಇಂಗಿಸುವ ಭಾವಿಗೆ ಹೋಗುವಂತೆ ಮಾಡಿದೆ. ಈ ಹತ್ತು ಅಡಿ ಭಾವಿಯನ್ನು 4 ಅಡಿ ವ್ಯಾಸದಲ್ಲಿ ತೆಗೆದು ಅದಕ್ಕೆ ಏಳು 3 ಅಡಿ ವ್ಯಾಸದ ರಿಂಗ್‍ನ್ನು ಅಳವಡಿಸಲಾಗಿದೆ. ರಿಂಗಿನ ಹೊರಗಡೆ ಹೊಳೆಗೊಚ್ಚನ್ನು ತುಂಬಲಾಗಿದ್ದು ಒಳಗಡೆ 5 ಅಡಿ ಎತ್ತರಕ್ಕೆ ಹೊಳೆ ಕಲ್ಲುಗಳನ್ನು ತುಂಬಲಾಗಿದೆ. ಈ ವ್ಯವಸ್ಥೆ ನೀರು ಸರಾಗವಾಗಿ ಇಂಗಿಸಲು ಅನುವು ಮಾಡಿಕೊಡುತ್ತದೆ. ಭಾವಿಯ ಮೇಲ್ಭಾಗವನ್ನು ಖಾಲಿ ಇಡುವುದರಿಂದ ಜೋರಾಗಿ ಮಳೆ ಬಂದಾಗಲೂ ನೀರು ಅಲ್ಲಿಯೇ ನಿಂತು ನಿಧಾನವಾಗಿ ನೆಲದಲ್ಲಿ ಇಂಗಲು ಸಾಧ್ಯವಾಗುತ್ತದೆ. ಈ ರೀತಿಯಾಗಿ ಇಂಗಿದ ನೀರು ಪಕ್ಕದಲ್ಲಿರುವ ಭಾವಿಗೆ ನೀರುಣಿಸುವುದಲ್ಲದೇ ಅಂತರ್ಜಲದ ಮಟ್ಟವನ್ನು ಹೆಚ್ಚಿಸಲು ಅನುವು ಮಾಡಿಕೊಡುತ್ತದೆ.
ವಾಡಿಕೆಯ ಮಳೆಗಿಂತ ಅರ್ಧದಷ್ಟು ಮಳೆಯಾದರೂ ನೀರಿನ ಅಗತ್ಯತೆಯನ್ನು ಈ ವ್ಯವಸ್ಥೆ ಪೂರೈಸಬಲ್ಲದು. ಪಿ.ವಿ.ಸಿ. ಪೈಪ್, ಚೇಂಬರ್ ಹಾಗೂ ಇಂಗು ಗುಂಡಿಗಳನ್ನೊಳಗೊಂಡ ಇದರ ಒಟ್ಟೂ ವೆಚ್ಚ ಸುಮಾರು 44,500 ತಗುಲಿದೆ.
ಪ್ರೌಢಶಾಲೆಯ ಹಳೆಯ ಕಟ್ಟಡದ ಭಾಗಶಃ ಛಾವಣಿಯಿಂದ ಮಳೆನೀರು ಸಂಗ್ರಹದ ವ್ಯವಸ್ಥೆ ಮಾಡಲಾಗಿದ್ದು, ಛಾವಣಿಯಿಂದ 4 ಇಂಚು ಪಿ.ವಿ.ಸಿ. ಪೈಪ್‍ಗಳನ್ನು ಜೋಡಿಸಿ ಕಸಗಳನ್ನು ಟ್ರ್ಯಾಪ್ ಮಾಡುವ ವ್ಯವಸ್ಥೆಯ ಮೂಲಕ ನೆಲ ಮಹಡಿಯಲ್ಲಿ ಇರುವ 5000 ಲೀಟರ್ ಟ್ಯಾಂಕ್‍ಗೆ ಜೋಡಿಸಲಾಗಿದೆ ಎಂದರು.
ಮಳೆಗಾಲದಲ್ಲೂ ನೀರಿನ ಕೊರತೆಯನ್ನು ಅನುಭವಿಸುತ್ತಿರುವ ಸಂಸ್ಥೆಗೆ ಶಿರಸಿ ಜೀವಜಲ ಕಾರ್ಯಪಡೆಯಿಂದ ನಿರ್ಮಿತಗೊಂಡ ಈ ವ್ಯವಸ್ಥೆ ಬಹಳ ಸಹಾಯಕಾರಿಯಾಯಿತು ಎಂದು ಪ್ರೌಢಶಾಲೆಯ ಮುಖ್ಯೋಪಧ್ಯಾಯ ನಾಗರಾಜ ನಾಯ್ಕ ಹೇಳಿದರು.
ಈ ವೇಳೆ ಜೀವಜಲ ಸಮಿತಿಯ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್, ಸಹಾಯಕ ಆಯುಕ್ತ ರಾಜು ಮೊಗವೀರ, ಪರಿಸರ ತಜ್ಞ ಶಿವಾನಂದ ಕಳವೆ, ಜಿ ಪಂ ಸದಸ್ಯೆ ಉಷಾ ಹೆಗಡೆ, ಅನಿಲ ನಾಯಕ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು

RELATED ARTICLES  ಜನತೆಯ ಬೇಡಿಕೆಗೆ ಸ್ಪಂದಿಸಿ ಬೆಂಗಳೂರಿಗೆ ಸ್ಲೀಪರ್ ಕೋಚ್ ಬಸ್ ವ್ಯವಸ್ಥೆ ಕಲ್ಪಿಸಿದ ಶಾಸಕಿ ಶಾರದಾ ಶೆಟ್ಟಿ