ಹೊನ್ನಾವರ:  ಗುಣವಂತೆಯ ಕೆರೆಮನೆ ಶಿವರಾಮ ಹೆಗಡೆ ರಂಗಮಂದಿರದಲ್ಲಿ ಶ್ರೀ ಶಿವರಾಮ ಹೆಗಡೆ ಜನ್ಮ ದಿನಾಚರಣೆ, ಶ್ರೀ ನೆಬ್ಬೂರು ನಾರಾಯಣ ಭಾಗವತರ ಸಂಸ್ಮರಣೆ ಮತ್ತು ತಾಳಮದ್ದಳೆ  ಕಾರ್ಯಕ್ರಮ ನಡೆಯಿತು.

ಊರಿನ ಹಿರಿಯ ಮುತ್ಸದ್ಧಿಗಳಾದ ಶ್ರೀ ನಾರಾಯಣ ಪಂಡಿತರವರು ದೀಪ ಹಚ್ಚಿ, ಹಿರಿಯ ಚೇತನಗಳಿಗೆ ಪುಷ್ಪಾಂಜಲಿ ಮಾಡುವುದರ ಮೂಲಕ ಸಭಾ ಕಾರ್ಯಕ್ರಮಕ್ಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿದರು. ಕೆರೆಮನೆ ಶಿವರಾಮ ಹೆಗಡೆಯವರು ಯಕ್ಷಗಾನ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳನ್ನ ಸ್ಮರಿಸಿದ ಅವರ ಒಡನಾಡಿಗಳಾದ ಸಂತೆಗುಳಿ ನಾರಾಯಣ ಭಟ್ಟರು ಅವರೊಂದಿಗಿನ ಒಡನಾಟದ ಸೂಕ್ಷ್ಮತೆಯನ್ನ ದೃಷ್ಟಾಂತಗಳೊಂದಿಗೆ ವಿವರಿಸಿದರು. ಸರ್ವಶಕ್ತ, ಸಾರ್ವಭೌಮ ಕಲಾವಿದರಾದ ಶ್ರೀ ಶಿವರಾಮ ಹೆಗಡೆಯವರು ತಮ್ಮ ಜೀವನದುದ್ದಕ್ಕೂ ಯಕ್ಷಗಾನದ ಉತ್ಕೃಷ್ಟತೆಗೆ, ಕಲಾವಿದನ ಶ್ರೇಷ್ಟತೆಗೆ ಬೆಳವಣಿಗೆಗೆ ಮತ್ತು ಸರಳತೆಯ ಜೀವನಕ್ಕೆ ಬದ್ಧರಾಗಿ ಜೀವನ ಯಾತ್ರೆ ಕೈಗೊಂಡರು ಎಂದು ತಿಳಿಸಿದರು.

RELATED ARTICLES  ಕುಮಟಾ : ಅಳ್ವೇಕೋಡಿಯಲ್ಲಿ ಬೆಂಕಿ ಅವಘಡ : 6 ತಾಸು ಕಾರ್ಯಾಚರಣೆ ಮಾಡಿದರೂ ನಂದದ ಬೆಂಕಿ.

ಹಿರಿಯ ಪ್ರಾಧ್ಯಾಪಕರು, ಪ್ರಸಿದ್ಧ ಅರ್ಥದಾರಿಗಳಾದ ಡಾ. ಜಿ.ಎಲ್. ಹೆಗಡೆಯವರು ನೆಬ್ಬೂರು ನಾರಾಯಣ ಭಾಗವರನ್ನ ಸಂಸ್ಮರಿಸಿದರು. ನೆಬ್ಬೂರರ ಮಟ್ಟು ಎಂದೇ ಪ್ರಖ್ಯಾತಿ ಪಡೆದ ನೆಬ್ಬೂರರ ಭಾಗವತಿಕೆ ವಿಶೇಷ ಆಕರ್ಷಣೆಯಾಗಿತ್ತು ಎಂದರು. ಶ್ರೀ ಶಿವರಾಮ ಹೆಗಡೆಯವರ ಗರಡಿಯಲ್ಲಿ ಬೆಳೆದು ಶ್ರೀ ಶಂಭು ಹೆಗಡೆಯವರ ಒಡನಾಡಿಯಾಗಿ ಬೆಳೆದು ಸುದೀರ್ಘ ೫೫ ವರ್ಷಗಳ ಸಾರ್ಥಕ ಸೇವೆಯನ್ನ ಇಡಗುಂಜಿ ಮೇಳಕ್ಕೆ ನೀಡಿದ್ದನ್ನು ಸ್ಮರಿಸಿದರು. ಇಂತವರ ಬದುಕಿನ ಇತಿಹಾಸದ ಹೆಜ್ಜೆಗಳು ಪಠ್ಯವಾಗಬೇಕೆಂದು ಕರೆ ನೀಡಿದರು.
ಸಭಾ ಕಾರ್ಯಕ್ರಮದ ಕೊನೆಯಲ್ಲಿ ಒಂದು ನಿಮಿಷದ ಮೌನ ಆಚರಿಸಿ ದಿ. ನೆಬ್ಬೂರರಿಗೆ ಶ್ರದ್ಧಾಂಜಲಿ ಸಮರ್ಪಿಸಲಾಯಿತು.

RELATED ARTICLES  ಮೊಬೈಲ್ ಗೀಳು..! ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು..!

ಶ್ರೀ ಶಿವಾನಂದ ಹೆಗಡೆ ಕೆರೆಮನೆ   ಪ್ರಾಸ್ತಾವಿಕ ನುಡಿಯೊಂದಿಗೆ ನೆಬ್ಬುರರ ಕೊಡುಗೆಯನ್ನ ನೆನಪಿಸಿಕೊಂಡು  ಎಲ್ಲರನ್ನೂ ಸ್ವಾಗತಿಸಿದರು..  ಯಕ್ಷಗಾನ ಶೈಲಿಯಲ್ಲಿ  ಗಣಪತಿ ಪೂಜೆ ಯೊಂದಿಗೆ ಸಭಾಕಾರ್ಯಕ್ರಮ ಆರಂಭವಾಯಿತು. ನಂತರ ’ಕೃಷ್ಣ ಸಂಧಾನ’ ತಾಳಮದ್ದಲೆ ನಡೆಯಿತು.
ಭಾಗವತರಾಗಿ ಶ್ರೀ ಗಣೇಶ ಯಾಜಿ ಇಡಗುಂಜಿ, ಮದ್ದಲೆಯಲ್ಲಿ ಶ್ರೀ ಸಚಿನ ಭಂಡಾರಿ ಸಹಕರಿಸಿದರು.
ಕೃಷ್ಣನಾಗಿ ಶ್ರೀ ಸಂತೆಗುಳಿ ನಾರಾಯಣ ಭಟ್ಟ, ದುರ್ಯೋಧನನಾಗಿ ಡಾ. ಜಿ. ಎಲ್. ಹೆಗಡೆ ಮತ್ತು ವಿದುರನಾಗಿ ಶ್ರೀ ಈಶ್ವರ ಭಟ್ ಹಂಸಳ್ಳಿ ಪಾತ್ರಧಾರಿಗಳಾಗಿ ಅತ್ಯಂತ ಉತ್ತಮವಾಗಿ ಪಾತ್ರ ನಿರ್ವಹಣೆ ಮಾಡಿದರು.. ಊರು ಪರಊರಿನ ಹಲವಾರು ಯಕ್ಷಗಾನ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.