ಕುಮಟಾ: ಜಿಲ್ಲೆಯಲ್ಲಿ ಸುಸಜ್ಜಿತ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯನ್ನು ಸ್ಥಾಪಿಸುವ ನಿಟ್ಟಿನಲ್ಲಿ ನಡೆಸಲಾಗುತ್ತಿರುವ ಅಭಿಯಾನದ ಮುಂದಿನ ಭಾಗವಾಗಿ ಮುಂಬರುವ ಹೋರಾಟದ ರೂಪುರೇಷೆ ಹಾಗೂ ಆಸ್ಪತ್ರೆ ನಿರ್ಮಾಣಗೊಳ್ಳಬೇಕಾದ ಸ್ಥಳದ ಕುರಿತಾಗಿ ಚರ್ಚಿಸಲು ಕುಮಟಾದ ವೈಭವ ಪ್ಯಾಲೇಸಿನ ಸಭಾಂಗಣದಲ್ಲಿ ಸಾರ್ವಜನಿಕರ ಸಭೆಯನ್ನು ಆಯೋಜಿಸಲಾಗಿತ್ತು. ಅನೇಕ ವೈದ್ಯರೂ ಕೂಡ ಸಭೆಗೆ ಆಗಮಿಸುತ್ತಿದ್ದು, ಸರಕಾರಿ ಆಸ್ಪತ್ರೆಗೆ ಆದ್ಯತೆ ನೀಡಬೇಕೋ ಅಥವಾ ಖಾಸಗಿಯವರ ಸಹಭಾಗಿತ್ವದಲ್ಲಿ ಆಸ್ಪತ್ರೆಗೆ ಒಲವು ತೋರಬೇಕೋ ಎಂಬುದರ ಕುರಿತು ಚರ್ಚೆ ನಡೆಸಲಾಯಿತು.
ನಂತರ ಶಾಸಕ ದಿನಕರ ಶೆಟ್ಟಿ ಮಾತನಾಡಿ, ಜಿಲ್ಲೆಗೆ ಕುಮಟಾ ಮಧ್ಯ ಭಾಗವಾಗಿದ್ದು, ಇಲ್ಲಿಯೇ ಆಸ್ಪತ್ರೆ ಆಗಬೇಕೆಂಬುದು ನಮ್ಮ ಅಭಿಪ್ರಾಯವಾಗಿದೆ. ಇದಕ್ಕೆ ಭಟ್ಕಳದ ಶಾಸಕರೂ ಬೆಂಬಲ ವ್ಯಕ್ತಪಡಿಸಿದ್ದಾರೆ. ಪ್ರತೀ ಕಾಯಿಲೆಗೂ ಇಲ್ಲೇ ಚಿಕಿತ್ಸೆ ಸಿಗುವಂತಾಗುವಂತಾಗಬೇಕು. ಈ ಬಗ್ಗೆ ಖಾಸಗಿ ಉದ್ಯಮಿಯೋರ್ವರೊಂದಿಗೆ ಚರ್ಚೆ ನಡೆಸಿದ್ದು, ಅವರು ಈ ಕುರಿತು ಉತ್ಸುಕರಾಗಿದ್ದಾರೆ. ತಾಲೂಕಿನಲ್ಲಿಯೇ ಎರಡು ಮೂರು ಕಡೆಗಳಲ್ಲಿ ಸೂಕ್ತವಾದ ಸ್ಥಳವನ್ನು ನೋಡಿಟ್ಟಿದ್ದೇವೆ ಎಂದರು.
ಮಾಜಿ ಶಾಸಕರು ಹಾಗೂ ಕಾಂಗ್ರೆಸ್ ಮುಖಂಡರಾದ ಶ್ರೀಮತಿ ಶಾರದಾ ಶೆಟ್ಟಿಯವರು ಮಾತನಾಡಿ ಸುಸಜ್ಜಿತ ಆಸ್ಪತ್ರೆಯ ಅಗತ್ಯತೆ ನಮ್ಮೆಲ್ಲರಿಗೂ ಇದೆ. ಈ ನಿಟ್ಟಿನಲ್ಲಿ ನಿರಂತರ ಪ್ರಯತ್ನನಡೆಸಲೇ ಬೇಕು. ಎಲ್ಲರೂ ಸೇರಿ ನಮ್ಮ ಬೇಡಿಕೆ ಈಢೇರಿಕೆಗೆ ಪ್ರಯತ್ನಿಸೋಣ ಎಂದರು.
ಉದ್ಯಮಿಗಳಾದ ಮುರಳೀಧರ ಪ್ರಭು ಮಾತನಾಡಿ ಸಮಾಜದ ಆಗು ಹೋಗುಗಳ ಕುರಿತಾದ ಚಿಂತನೆಗೆ ಎಲ್ಲರೂ ಸೇರಿರುವುದು ಸಂತಸ ತಂದಿದೆ. ಹೈದ್ರಾಬಾದ್ ಕರ್ನಾಟಕ ಎಂಬ ಪ್ರದೇಶ ವಿಂಗಡಿಸಿ ಸಕಲ ಸೌಲಭ್ಯ ನೀಡಲಾಗಿದೆ ಆದರೆ ಕರ್ನಾಟಕಕ್ಕೆ ಆ ಸೌಲಭ್ಯ ಇಲ್ಲ. ಅದರಂತೆ ನಮ್ಮಪಾಡೂ ಕೂಡಾ ಇದೆ. ನಮ್ಮ ಪ್ರಯತ್ನ ಸುಸಜ್ಜಿತ ಆಸ್ಪತ್ರೆಯ ನಿರ್ಮಾಣಕ್ಕೆ ಇರಬೇಕು. ಆಸ್ಪತ್ರೆಯ ಅಗತ್ಯತೆ ಪೂರೈಸಲು ಸರಿಯಾದ ಮಾರ್ಗ ಹಾಗೂ ಕಾರ್ಯಗಳ ಬಗ್ಗೆ ವಿಸ್ತಾರವಾದ ವಿವರ ನೀಡಿದರು.
ಸುಸಜ್ಜಿತ ಆಸ್ಪತ್ರೆ ನಿರ್ಮಾಣದ ಕುರಿತಾದ ಜಿಲ್ಲಾ ಮಟ್ಟದ ಸಮಿತಿ ರಚಿಸುವಂತೆ ಒಕ್ಕೊರಲಿನಿಂದ ತೀರ್ಮಾನಕ್ಕೆ ಬರಲಾಯಿತು.
ಈ ಸಂದರ್ಭದಲ್ಲಿ ಆರ್ ಜಿ ನಾಯ್ಕ, ಜೆಡಿಎಸ್ ಪ್ರಮುಖ ಸೂರಜ್ ನಾಯ್ಕ ಸೋನಿ, ಪ್ರದೀಪ ನಾಯಕ, ಭಾಸ್ಕರ ಪಟಗಾರ, ಜಿಲ್ಲಾ ಪಂಚಾಯತ ಸದಸ್ಯ ರತ್ನಾಕರ ನಾಯ್ಕ, ಸಾಮಾಜಿಕ ಕಾರ್ಯಕರ್ತ ಎಮ್.ಜಿ. ಭಟ್ಟ, ತಾ.ಪಂ ಸದಸ್ಯ ಜಗನ್ನಾಥ ನಾಯ್ಕ, ಕಾಂಗ್ರೆಸ್ ಪ್ರಮುಖ ನಾಗೇಶ ನಾಯ್ಕ, ಮುಖಂಡರಾದ ಶೈಲೇಶ ನಾಯ್ಕ, ವಸಂತ ಗೌಡ ಸೇರಿದಂತೆ ಪ್ರಮುಖರು ಹಾಜರಿದ್ದರು.