ಕುಮಟಾ: ಇಲ್ಲಿಯ ಮಹಾತ್ಮಾ ಗಾಂಧಿ ಪ್ರೌಢಶಾಲೆಯಲ್ಲಿ ಭಾರತೀಯ ಕುಟುಂಬ ಯೋಜನಾ ಸಂಘ ಹಾಗೂ ಶಾಲೆಯ ಕಸ್ತೂರಬಾ ಇಕೋ ಕ್ಲಬ್ ಸಹಯೋಗದಲ್ಲಿ ವಿದ್ಯಾರ್ಥಿಗಳಿಗೆ ಹದಿಹರಯದ ಸಮಸ್ಯೆಗಳನ್ನು ಹಾಗೂ ಅದರ ಪರಿಹಾರೋಪಾಯಗಳನ್ನು ತಿಳಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಡಾ.ಎ.ವಿ.ಬಾಳಿಗಾ ವಿಜ್ಞಾನ ಮಹಾವಿದ್ಯಾಲಯದ ನಿವೃತ್ತ ಪ್ರಾಚಾರ್ಯ ಹಾಗೂ ಭಾ.ಕು.ಯೋ.ಸಂಘದ ಕಾರ್ಯದರ್ಶಿ ಡಾ.ಎಸ್.ವಿ.ಕಾಮತ ಮಾತನಾಡುತ್ತಾ ಹದಿಹರಯ ಎಂದರೆ ಅದು ರಸ್ತೆತಡೆಗಳಿದ್ದ ಹಾಗೆ. ಅದನ್ನು ನಿಧಾನವಾಗಿ ದಾಟಿ ಸಂಯಮದಿಂದ ವರ್ತಿಸುವುದನ್ನು ಕಲಿತಾಗ ಸಮಸ್ಯೆ ಎನಿಸದು ಎಂದರು.
ಅಧ್ಯಕ್ಷತೆಯನ್ನು ವಹಿಸಿದ್ದ ಮುಖ್ಯಾಧ್ಯಾಪಕ ಎನ್.ಆರ್.ಗಜು ಹದಿಹರಯದ ತಲ್ಲಣ ಮನಸ್ಸಿನಲ್ಲಿ ಬಣ್ಣದೋಕುಳಿಯನ್ನೇನೋ ಎಬ್ಬಿಸುತ್ತದೆ. ಆದರೆ ಅದರಿಂದ ಗಲಿಬಿಲಿಗೊಳ್ಳದೇ ಕಲುಷಿತಗೊಳ್ಳದೇ ಪರಿವರ್ತನೀಯ ದಾರಿ ತೋರಿಸುವಂತೆ ಹಿರಿಯರ ಮಾರ್ಗದರ್ಶನ ಲಭಿಸಲಿ ಎಂದು ಆಶಿಸಿದರು. ಭಾ.ಕು.ಯೋ.ಸಂಘದ ಯೋಜನಾಧಿಕಾರಿ ಮಂಜುಳಾ ಗೌಡ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಇಕೋಕ್ಲಬ್ ಸಂಚಾಲಕ ಕಿರಣ ಪ್ರಭು ನಿರೂಪಿಸಿದರು. ಶಿಕ್ಷಕ ಶಿವಾನಂದ ಪೈ ವಂದಿಸಿದರು. ವೇದಿಕೆಯಲ್ಲಿ ಶಿಕ್ಷಕ ಪ್ರದೀಪ ನಾಯ್ಕ ಉಪಸ್ಥಿತರಿದ್ದರು.