ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದಿಂದ ವೃಂದಾನವಸ್ಥ ಶ್ರೀಮದ್ ದ್ವಾರಕಾನಾಥ ತೀರ್ಥ ಶ್ರೀಪಾದ ವಡೇರ್ ಸ್ವಾಮೀಜಿಗಳ ಜನ್ಮ ಶತಾಬ್ದಿ ಮಹೋತ್ಸವದ ಅಂಗವಾಗಿ, ‘ಸಮಾಜ ಭೂಷಣ’ ಪ್ರಶಸ್ತಿಗೆ ಕುಮಟಾದ ವೆಂಕಟರಮಣ ದೇವಾಲಯದ ಮೊಕ್ತೇಸರ ವಸುದೇವ ಯಶ್ವಂತ ಪ್ರಭು ಭಾಜನರಾಗಿ ನಿನ್ನೆ ಪರ್ತಗಾಳಿಯ ಕೇಂದ್ರ ಮಠದಲ್ಲಿ ಪ.ಪೂ.ವಿದ್ಯಾಧಿರಾಜ ಸ್ವಾಮೀಜಿ ಹಾಗೂ ಪಟ್ಟ ಶಿಷ್ಯ ವಿದ್ಯಾಧೀಶ ಸ್ವಾಮೀಜಿಗಳಿಂದ ಹಾಗೂ ಸಹಸ್ರಾರು ಭಜಕರ ಸಮ್ಮುಖದಲ್ಲಿ ಶ್ರೀರಾಮದೇವರ ಸನ್ನಿಧಿಯಲ್ಲಿ ನಡೆದ ಸಮಾರಂಭದಲ್ಲಿ ಪುರಸ್ಕರಿಸಲ್ಪಟ್ಟಿದ್ದಾರೆ.


ಕುಮಟಾ ಬಸ್ತಿಪೇಟೆಯ ‘ಶಿವಪ್ಪ ಪ್ರಭು’ ಎಂದೇ ಹೆಸರಾದ, ಧಾರ್ಮಿಕ, ದೈವನಿಷ್ಠ, ಉಚ್ಛ ಸಂಸ್ಕಾರ ತುಂಬಿದ ಮನೆತನದಲ್ಲಿ ಹುಟ್ಟಿ ಉಚ್ಛ ಶಿಕ್ಷಣ ಪಡೆದು ಬೆಳೆದ ಶ್ರೀಯುತರು ಮನೆತನದ ಉದ್ಯೋಗ ಅಡಿಕೆ ವ್ಯಾಪಾರದ ಜೊತೆಯಲ್ಲಿ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಹಾಗೂ ಆರ್ಥಿಕ ಕ್ಷೇತ್ರಗಳಲ್ಲಿ ಗಮನ ಸೆಳೆಯುವಂತಹ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಇತರರಿಗೂ ಮಾರ್ಗದರ್ಶನ ನೀಡುತ್ತಾ ಸಮಾಜದ ಮುಂದಾಳತ್ವವನ್ನು ವಹಿಸಿ ಸರ್ವಾಂಗೀಣ ವಿಕಾಸಕ್ಕಾಗಿ, ಕಾಯಾ-ವಾಚಾ-ಮನಸಾ ಸುಮನಸ್ಸಿನಿಂದ ಮುನ್ನಡೆಸಿಕೊಂಡು ಬಂದಿರುತ್ತಾರೆ. ಕಳೆದ 25 ವರ್ಷಗಳಿಗಿಂತಲೂ ಅಧಿಕ ಕಾಲ ಶ್ರೀ ವೆಂಕಟರಮಣ ದೇವಾಲಯದ ವೈವಾಟಿ ಮೊಕ್ತೇಸರ ಹಾಗೂ ಅಧ್ಯಕ್ಷರಾಗಿ ಅನುಮಪ ಸೇವೆಗೈಯುತ್ತಾ ಶ್ರೀ ಮಠದ ಸರ್ವಾಂಗೀಣ ಅಭಿವೃದ್ಧಿಯ ಹರಿಕಾರರಾಗಿದ್ದಾರೆ. ಸಮಾಜದ ಧಾರ್ಮಿಕ ಕಾರ್ಯಕ್ರಮಗಳ ಕೇಂದ್ರಬಿಂದುವಾದ ಶ್ರೀ ಮುಖ್ಯ ಪ್ರಾಣಾಂತರ್ಗತ ಶ್ರೀ ಲಕ್ಷ್ಮೀ ವೆಂಕಟೇಶ, ಮೂಡ ಗಣಪತಿ ದೇವಸ್ಥಾನಗಳ ಸರ್ವಾಂಗೀಣ ವಿಕಾಸದಲ್ಲಿ ಕುಮಟಾದಲ್ಲಿ 1993 ರಲ್ಲಿ ಪ.ಪೂ.ವಿದ್ಯಾಧಿರಾಜ ತೀರ್ಥ ಸ್ವಾಮೀಜಿಯವರಿಂದ ಶ್ರೀ ಮಠದ ಚಾತುರ್ಮಾಸ್ಯದ ಸಮಯದಲ್ಲಿಯ ಎಲ್ಲಾ ಕಾರ್ಯಕ್ರಮಗಳ ಹೊಣೆಹೊತ್ತು, ಮೊಕ್ತೇಸರ ಎಂದು ಶ್ರೀಗಳಿಂದ ಪುರಸ್ಕಾರ ಪಡೆದ ನಂತರ ಪೂಜ್ಯರ ಸಕಾಲಿಕ ಮಾರ್ಗದರ್ಶನ ಪಡೆದು ಮಠದಲ್ಲಿ ಸುವರ್ಣ ಪಲ್ಲಕ್ಕಿ ನಿರ್ಮಾಣ, ಸುವರ್ಣ ಕಲಶಯುಕ್ತ ಶಿಖರ ಮಂಟಪ ನಿರ್ಮಾಣ, ಮಠದ ಪ್ರಾಕಾರದ ಜೀರ್ಣೋದ್ಧಾರ, ಶ್ರೀ ಮಠ ಹಾಗೂ ಹುನುಮಂತ ದೇವರ ಮಾಡಿಗೆ ತಾಮ್ರಾಚ್ಛನ, ಮೂಡಗಣಪತಿ ದೇವಸ್ಥಾನದ ನವೀಕರಣ, ತಿರುಪತಿಯ ಮೂಲಸ್ಥಾನದಿಂದ ಶ್ರೀದೇವಿ, ಭೂದೇವಿ ಸಹಿತ ಶ್ರೀನಿವಾಸನ ವಿಗ್ರಹಗಳನ್ನು ತಂದು ಶ್ರೀನಿವಾಸ ಕಲ್ಯಾಣೋತ್ಸವಕ್ಕೆ ವಿಶೇಷ ಸೌಂದರ್ಯ ಮೆರಗು ನೀಡಿದ್ದು, ವಿಷ್ಣು ತೀರ್ಥದ ಪ್ರಾಕಾರದ ಅಭಿವೃದ್ಧಿ, ಅತಿವಿಷ್ಣು ಯಾಗಾದಿಯೇ ಮೊದಲಾದ ಅನೇಕ ಕಾರ್ಯಕ್ರಮಗಳ ಸಂಯೋಜನೆ, ಕುಲದೇವಿ ಶ್ರೀ ಕಾಗಾಲ ದೇವಕೀ ಕೃಷ್ಣ, ಮಲ್ಲಿನಾಥ ಮೊದಲಾದ ದೇವಸ್ಥಾನಗಳ ನವೀಕರಣ, ಪುನರ್ ಪ್ರತಿಷ್ಠಾ ರಜತ ಸಂಭ್ರಮ ಹೀಗೆ ಹಲವಾರು ಕಾರ್ಯಕ್ರಮಗಳನ್ನು ಮುಂಚೂಣಿಯಲ್ಲಿ ನಿಂತು ದೇವಳಗಳ ಐತಿಹಾಸಿಕವಾದ ಸಾಧನೆ ಮಾಡಿದ್ದಾರೆ.

RELATED ARTICLES  ತಪಾಸಣೆಯ ವೇಳೆ ಹೆಸರು ತಪ್ಪಿದ ಮೀನುಗಾರರಿಗೂ ಸೀಮೆಎಣ್ಣೆ ವಿತರಿಸಿ


ಶೈಕ್ಷಣಿಕ ಕ್ಷೇತ್ರದಲ್ಲಿ ಈಗಿನ ಕೆನರಾ ಎಜ್ಯುಕೇಶನ್ ಸೊಸೈಟಿ ಕಾರ್ಯಾಧ್ಯಕ್ಷರಾಗಿ ಗಿಬ್ ಹೈಸ್ಕೂಲ್, ಗಿಬ್ ಬಾಲಕಿಯರ ಪ್ರೌಢಶಾಲೆ, ಮಹಾತ್ಮಾ ಗಾಂಧಿ ಪ್ರೌಢಶಾಲೆ, ಆಂಗ್ಲ ಮಾಧ್ಯಮ ನರ್ಸರಿ, ಪ್ರಾಥಮಿಕ, ಪ್ರೌಢಶಾಲೆಗಳ ನಿರ್ವಹಣಾ ಮುಖ್ಯಸ್ಥರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ನೂತನ ಸುಸಜ್ಜಿತ ಕಟ್ಟಡಗಳ ನಿರ್ಮಾಣ, ನವೀಕರಣ, ಅಮೃತ್ನಾನ್ನ ಭೋಜನ ವ್ಯವಸ್ಥೆಯೇ ಮೊದಲಾದ ಶಾಲೆಗಳ ಶೈಕ್ಷಣಿಕ ಗುಣಮಟ್ಟವನ್ನು ಎತ್ತರಿಸುವಲ್ಲಿ ಅನೇಕಾನೇಕ ಯೋಜನೆಗಳನ್ನು ಜಾರಿಗೆ ತಂದು ನಾಮಾಂಕಿತ ಸಂಸ್ಥೆಯ ಘನತೆ-ಗೌರವವನ್ನು ಕಾಪಾಡಿಕೊಂಡು ಹೋಗುತ್ತಿದ್ದಾರೆ.

RELATED ARTICLES  ಡಿ. 14 ರಂದು ಗೀತಾ ಜಯಂತಿ ಕಾರ್ಯಕ್ರಮ


ಆರ್ಥಿಕ ಕ್ಷೇತ್ರದಲ್ಲಿ ಸಮಾಜದ ಸರ್ವರ ಆರ್ಥಿಕ ಸುಧಾರಣೆಗಾಗಿ ಶ್ರೀನಿವಾಸನ ಸಾನಿಧ್ಯದಲ್ಲಿ ಸಮಾನ ಮನಸ್ಕ ಸಮಾಜದ ಬಂಧು-ಭಗಿನಿಯರ ಸಹಯೋಗತ್ವದಲ್ಲಿ ಸೌಹಾರ್ದ ಕ್ರೆಡಿಟ್ ನಿಯಮಿತವನ್ನು ಹುಟ್ಟುಹಾಕಿ, ಅದು ದಿನೇ ದಿನೇ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದ್ದು ಅವರ ಅಧ್ಯಕ್ಷತೆಯಲ್ಲಿ ಕತಗಾಲ, ಹೊನ್ನಾವರದಲ್ಲಿ ಶಾಖಾ ಸಂಸ್ಥೆಗಳನ್ನು ಸ್ಥಾಪಿಸಿ ಉದ್ಯೋಗಾವಕಾಶಗಳನ್ನು ಕಲ್ಪಿಸಿಕೊಡುತ್ತಿದ್ದಾರೆ.


ಪರ್ತಗಾಳಿಯ ಮಠದಲ್ಲಿ ಪಂಚ ಶತಾಬ್ದಿ, ಶ್ರೀರಾಮ ಜಪಯಜ್ಞ, ಶಿಷ್ಯ ಸ್ವೀಕಾರ ಸಮಾರಂಭ ಚಾರ್ತುಮಾಸ್ಯ ವೃತಾದಿಗಳಲ್ಲಿ ಸಕ್ರಿಯ ಸೇವೆ ಮಾಡುತ್ತಿದ್ದುದು ಮೆಚ್ಚುಗೆಗೆ ಪಾತ್ರವಾಗಿದೆ. ಉಭಯಶ್ರೀಗಳ ಪ್ರತಿಷ್ಠಾಪಿತ ‘ಸಮಾಜ ಭೂಷಣ’ ಪುರಸ್ಕಾರವನ್ನು ಅವರ ಅಮೃತ ಹಸ್ತದಿಂದಲೇ ಮುಡಿಗೇರಿಸಿಕೊಂಡಿದ್ದು ಸಮಾಜಕ್ಕೊಂದು ಹೆಮ್ಮೆಯ ಸಂತಸದ ಕ್ಷಣವಾಗಿದೆ.


ಶಾಂತ ಸ್ವಭಾವದ, ಎಲ್ಲ ಸಮಾಜದೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ, ಆಪತ್ತಿಗೆ ನೆರವಾಗುವ, ಆಧ್ಯಾತ್ಮಿಕ ಚಿಂತನೆ ತುಂಬಿರುವ, ಮತ್ತೊಬ್ಬರ ಮನಸ್ಸನ್ನು ನೋಯಿಸದ, ಬಡವರ ಅಸಹಾಯಕರ ಕೈಲಾಗದವರ ಬಗ್ಗೆ ಸದಾ ಕನಿಕರಿಸುವ, ಹೃದಯ ವೈಶಾಲತ್ಯೆಯ ವಸುದೇವ ಪ್ರಭು ಅವರನ್ನು ಈ ಸಂದರ್ಭದಲ್ಲಿ ಇಡಿಯ ಕುಮಟಾ ಮನಃಪೂರ್ವಕವಾಗಿ ಅಭಿನಂದಿಸುತ್ತಿದೆ.
• ಎನ್.ಆರ್.ಗಜು, ಕುಮಟಾ