ಕುಮಟಾ: ಕರ್ನಾಟಕ ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಹಾಗೂ ನಾಗರಿಕ ಒಕ್ಕೂಟ ಹುಬ್ಬಳ್ಳಿಯ ಕುಮಟಾ ಘಟಕವು ಇಲ್ಲಿಯ ಗಿಬ್ ಬಾಲಕಿಯರ ಪ್ರೌಢಶಾಲೆಯಲ್ಲಿ ಸಭೆ ಸೇರಿ ಖಾಸಗಿ ಆಡಳಿತ ಮಂಡಳಿಯ ಶಿಕ್ಷಣ ಸಂಸ್ಥೆಗಳಿಗೆ ಸರಕಾರವು ತೋರುತ್ತಿರುವ ಧೋರಣೆಯನ್ನು ಖಂಡಿಸಿ ತಮ್ಮ ಸಂಸ್ಥೆಯ ಬೇಡಿಕೆಗಳ ಈಡೇರಿಕೆಗಾಗಿ ಪ್ರತಿಭಟನೆ ನಡೆಸುವ ಕುರಿತಾಗಿ ಚರ್ಚಿಸಿದರು. ಒಕ್ಕೂಟದ ಸಂಚಾಲಕ ರಮೇಶ ಉಪಾಧ್ಯಾಯ ಮಾತನಾಡಿ, ವಿಧಾನ ಪರಿಷತ್ ಸದಸ್ಯ, ಮಾಜಿ ಶಿಕ್ಷಣ ಸಚಿವ ಬಸವರಾಜ ಹೊರಟ್ಟಿಯವರ ಮಾರ್ಗದರ್ಶನ ಹಾಗೂ ರಾಜ್ಯ ಘಟಕದ ತೀರ್ಮಾನದಂತೆ, ತಮ್ಮ ಬೇಡಿಕೆಗಳಿಗೆ ಸರಕಾರ ಸ್ಪಂದಿಸದಿದ್ದಲ್ಲಿ, ದಿ. 21 ರಿಂದ ಅನಿರ್ದಿಷ್ಟಾವಧಿ ಶಾಲಾ-ಕಾಲೇಜುಗಳನ್ನು ಮುಚ್ಚಿ ಬೃಹತ್ ಪ್ರಮಾಣದ ಪ್ರತಿಭಟನೆ ನಡೆಸಿ ಸರಕಾರದ ಗಮನ ಸೆಳೆಯಬೇಕಾಗುತ್ತದೆ ಎಂದರು. ಒಕ್ಕೂಟ ಉಪಾಧ್ಯಕ್ಷ ಎಚ್.ಎನ್.ನಾಯ್ಕ ಖಾಸಗಿ ಆಡಳಿತ ಮಂಡಳಿ ನಡೆಸುವ ಶಿಕ್ಷಣ ಸಂಸ್ಥೆಗಳನ್ನು ವ್ಯವಸ್ಥಿತವಾಗಿ ಮುಚ್ಚುವ ಹುನ್ನಾರ ಸರಕಾರ ನಡೆಸಿದ್ದು ಮೇಲ್ನೋಟಕ್ಕೆ ಸಾಬೀತಾಗುತ್ತದೆ ಎಂದರು. ಅಧ್ಯಕ್ಷತೆಯನ್ನು ವಹಿಸಿದ್ದ ಒಕ್ಕೂಟದ ಗೌರವಾಧ್ಯಕ್ಷ ದಿನಕರ ಶೆಟ್ಟಿ ಶಿಕ್ಷಕರ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಈ ಹಿಂದಿನಂತೆ ತಾನು ಮುಂಚೂಣಿಯಲ್ಲಿದ್ದು ಸಹಕರಿಸುವೆ ಎಂದು ಅಭಿಪ್ರಾಯ ಪಟ್ಟರು. ಒಕ್ಕೂಟ ಸಮಿತಿಯ ಕಾರ್ಯದರ್ಶಿ ಅನಿಲ್ ರೊಡ್ರಿಗೀಸ್ ಹೋರಾಟದ ರೂಪು ರೇಷೆಗಳನ್ನು ನೀಡುತ್ತಾ, ದಿ.11 ರಂದು ತಾಲೂಕಾ ಮಟ್ಟದಲ್ಲೂ, ದಿ.19 ರಂದು ಜಿಲ್ಲಾಮಟ್ಟದಲ್ಲೂ ಶಾಂತಿಯುತ ಪ್ರತಿಭಟನೆ ನಡೆಸಿ ಆಗಲೂ ಸರಕಾರ ಗಮನ ಹರಿಸದಿದ್ದಲ್ಲಿ, ದಿ.21 ರಂದು ಬಂದ್ ನಡೆಸುವುದಾಗಿ ತಿಳಿಸಿದರು. ಸದಸ್ಯ ಶಿಕ್ಷಕ ಆರ್.ಡಿ.ನಾಯ್ಕ ಆಡಳಿತ ಮಂಡಳಿ ಹಾಗೂ ಶಿಕ್ಷಕರ ಬೇಡಿಕೆಗಳ ಪಟ್ಟಿಯನ್ನು ಪ್ರಕಟಿಸಿದರು. ಶಿಕ್ಷಕ ಉದಯ ನಾಯ್ಕ ವಂದಿಸಿದರು. ವೇದಿಕೆಯಲ್ಲಿ ಕೆನರಾ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎಸ್.ಎನ್.ಪ್ರಭು, ಒಕ್ಕೂಟ ಸಮಿತಿಯ ಪ್ರಧಾನ ಕಾರ್ಯದರ್ಶಿ ದಯಾನಂದ ದೇಶಭಂಡಾರಿ ಉಪಸ್ಥಿತರಿದ್ದರು. ತಾಲೂಕಿನ ಎಲ್ಲ ಖಾಸಗಿ ಆಡಳಿತ ಮಂಡಳಿ ಹಾಗೂ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಪಾಲ್ಗೊಂಡು ಒಕ್ಕೊರಲಿನಿಂದ ನಿರ್ಣಯವನ್ನು ಸ್ವಾಗತಿಸಿದರಲ್ಲದೇ, ಪ್ರತಿಭಟನೆಗೆ ಸಹಕರಿಸುವುದಾಗಿ ನುಡಿದರು.