ಕುಮಟಾ : ತಾಲೂಕಿನ ಕೊಂಕಣ ಎಜ್ಯುಕೇಶನ್ ಟ್ರಸ್ಟ ನ ಸರಸ್ವತಿ ವಿದ್ಯಾ ಕೇಂದ್ರದಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವ ಸುವರ್ಣ ಮಯ್ಯರ್ ರವರು ಬರೆದ “ನನ್ನೊಳಗಿನ ನಾನು” ಮತ್ತು “ನಮ್ಮ ಹಬ್ಬಗಳು” ಎಂಬ ಎರಡು ಪುಸ್ತಕದ ಲೋಕಾರ್ಪಣೆ ಹೆಗಡೆಯ ಶಾಂತಿಕಾಂಬಾ ದೇವಸ್ಥಾನದ ಸಭಾಭವನದಲ್ಲಿ ನೆರವೇರಿತು.
ಕವಯಿತ್ರಿ ಹಾಗೂ ಲೇಖಕಿ ಸುವರ್ಣಾ ಮಯ್ಯರ್ ಅವರ ತಾಯಿ ಸುಶೀಲಾ ಮೈಯ್ಯರ್ ರವರು ಕೃತಿ ಬಿಡುಗಡೆ ಮಾಡಿದರು.
ಕೊಂಕಣ ಎಜ್ಯುಕೇಶನ್ ಟ್ರಸ್ಟ ನ ಕಾರ್ಯದರ್ಶಿಗಳಾದ ಮುರಳೀಧರ ಪ್ರಭು ಅತಿಥಿಗಳಾಗಿ ಹಾಜರಿದ್ದು ಮಾತನಾಡಿ ಶಿಕ್ಷಕರಿಗೆ ಅಧ್ಯಾಪನ ಎಷ್ಟು ಮುಖ್ಯವೋ ಅಧ್ಯಯನವೂ ಅಷ್ಟೇ ಮಹತ್ವದ್ದು. ಓದಿದ್ದು ಅಕ್ಷರ ರೂಪಕ್ಕೆ ಬಂದಾಗ ಅದು ಮಹತ್ವ ಪಡೆಯುತ್ತದೆ . ನಿರಂತರ ಓದುಗರಾಗಿ ವ್ಯಕ್ತಿತ್ವ ಬೆಳೆಸಿಕೊಳ್ಳುವತ್ತ ಗಮನ ನೀಡಬೇಕು ಎಂದರು.
ಕುಮಟಾ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಶ್ರೀಧರ್ ಗೌಡ ಉಪ್ಪಿನ ಗಣಪತಿ ಅಧ್ಯಕ್ಷತೆ ವಹಿಸಿ ಮಾತನಾಡಿ ಸಾಹಿತ್ಯ ಕಾರ್ಯಕ್ರಮಗಳಲ್ಲಿ ಇಷ್ಟು ಸಂಖ್ಯೆಯಲ್ಲಿ ಜನ ಸೇರಿರುವುದು ಸಂತಸ ಹಾಗೂ ಅಭಿಮಾನ ಮೂಡಿಸುತ್ತದೆ. ಸಾಹಿತ್ಯದ ಕೃಷಿ ಮಾಡುವುದೊಂದು ಸಾಧನೆ ಅಂತಹ ಸಾಧನೆಗೆ ಇದು ಮುನ್ನುಡಿ ಎಂದರು.
ಕೊಂಕಣ ಎಜುಕೇಶನ್ ಟ್ರಸ್ಟ್ ನ ಅಧ್ಯಕ್ಷರಾದ ಶ್ರೀ ವಿಠ್ಠಲ್ ನಾಯಕ್, ಹೆಗಡೆ ಶಾಂತಿಕಾಂಬಾ ದೇವಸ್ಥಾನದ ಮೊಕ್ತೇಸರರಾದ ಶ್ರೀ ನಾಗೇಶ ಶಾನಭಾಗ್ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಪಿಯುಸಿಯಲ್ಲಿ ಸಂಸ್ಕೃತದಲ್ಲಿ ನೂರಕ್ಕೆ ನೂರು ಅಂಕ ಪಡೆದ ವಿದ್ಯಾರ್ಥಿಗಳಿಗೆ ನಗದು ಬಹುಮಾನವನ್ನೂ ಇದೇ ಸಂದರ್ಭದಲ್ಲಿ ವಿತರಿಸಲಾಯಿತು.
ವಿದ್ವಾನ್ ಶ್ರೀ ಗೋಪಾಲಕೃಷ್ಣ ಹೆಗಡೆ ಅವರು ಪ್ರಾಸ್ತಾವಿಕ ಮಾತನಾಡಿದರು. ಕವಿಯಿತ್ರಿ ಸುವರ್ಣ ಮೈಯರ್ ಸ್ವಾಗತಿಸಿದರು. ಕಸಾಪ ಗೌರವ ಕಾರ್ಯದರ್ಶಿ ಶ್ರೀ ಚಿದಾನಂದ ಬಂಡಾರಿ ಕೃತಿ ಪರಿಚಯ ಮಾಡಿದರು. ಶಿಕ್ಷಕ ಸೂರಿ ಭಟ್ ರವರು ಕಾರ್ಯಕ್ರಮ ನಿರೂಪಿಸಿದರು. ವಿದ್ವಾನ್ ಲಕ್ಷ್ಮೀ ಹೆಗಡೆ ಹಾಗೂ ಸಂಹ ಕಲಾವಿದರು ಗೀತ ಗಾಯನ ನಡೆಸಿಕೊಟ್ಟರು.