ಬೆಂಗಳೂರಿನ ಪುನರ್ವಸು ಜಾಗಕ್ಕೆ ಸಂಬಂಧಿಸಿ; ಬಿಬಿಎಂಪಿ ಮಾಡಿದ್ದ ಮೇಲ್ಮನವಿಯನ್ನು ಉಚ್ಚನ್ಯಾಯಾಲಯದ ದ್ವಿಸದಸ್ಯ ಪೀಠ ನಿನ್ನೆ (01.07.2019) ತಿರಸ್ಕರಿಸಿದ್ದು, ಕಟ್ಟಡ ನಿರ್ಮಾಣ ಹಾಗೂ ಬಳಕೆಗೆ ಯಾವುದೇ ತಡೆ ಇಲ್ಲ ಎಂದು ಪುನರುಚ್ಚರಿಸಿದೆ.
ಉಚ್ಚ ನ್ಯಾಯಾಲಯದಲ್ಲಿ ಮುಖಭಂಗದ ನಂತರವೂ ಕಳೆದ ವರ್ಷ ಶ್ರೀಮಠದ ಜಾಗದ ಖಾತಾವನ್ನು ಅಳಿಸಿ, ಕಟ್ಟಡ ನೆಲಸಮಕ್ಕೆ ಕಾನೂನು ಬಾಹಿರವಾಗಿ ಬಿಬಿಎಂಪಿ ಆದೇಶಿಸಿತ್ತು. ಈ ಕುರಿತಾಗಿ ವಿಚಾರಣೆ ನಡೆಸಿದ್ದ ಉಚ್ಚನ್ಯಾಯಾಲಯದ ಏಕಸದಸ್ಯ ಪೀಠ ಬಿಬಿಎಂಪಿ ಕ್ರಮಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಬಿಬಿಎಂಪಿ ಅಧಿಕಾರಿಗಳನ್ನು ತರಾಟೆಗೆ ತಗೆದುಕೊಂಡು ; ಆದೇಶಕ್ಕೆ ತಡೆ ನೀಡಿತ್ತು. ಈ ಆದೇಶದ ವಿರುದ್ಧ ಬಿಬಿಎಂಪಿ ಮಾಡಿದ್ದ ಮೇಲ್ಮನವಿ ನಿನ್ನೆ ತಿರಸ್ಕೃತವಾಗಿದ್ದು, ಶ್ರೀಮಠದ ಪರವಾಗಿ ಆದೇಶನೀಡಿದೆ.
ಹಿನ್ನೆಲೆ :
ಪ್ರಸ್ತುತ ‘ಪುನರ್ವಸು’ವಿನ ಜಾಗವು 1978ನೇ ಇಸವಿಯಲ್ಲಿ (ಬ್ರಹ್ಮೈಕ್ಯ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಂದ್ರಭಾರತೀ ಮಹಾಸ್ವಾಮಿಗಳ ಕಾಲದಲ್ಲಿ) ಶ್ರೀರಾಮಚಂದ್ರಾಪುರಮಠಕ್ಕೆ ಶುದ್ಧ ಕ್ರಯಪತ್ರದ ಮೂಲಕ ನೋಂದಾಯಿತವಾಗಿದ್ದು, ಶ್ರೀಮಠದ ಹೆಸರಿನಲ್ಲಿ ಖಾತಾ ಆಗಿ; ಅಂದಿನಿಂದಲೂ ಕಂದಾಯವನ್ನೂ ಕಟ್ಟಿಕೊಂಡು ಬರಲಾಗುತ್ತಿದೆ. ಜಾಗವು ಮಠದ ಸ್ವಾಧೀನದಲ್ಲೇ ಇದ್ದು, ಈ ಹಿಂದೆ ಎರಡು ಮಹಡಿಯ ಕಟ್ಟಡವು ಇತ್ತು. ಆ ಜಾಗದಲ್ಲಿ ನೂತನ ಧರ್ಮಶಾಲಾ ಕಟ್ಟಡವನ್ನು ನಿರ್ಮಿಸಲು ಬಿಬಿಎಂಪಿಯಿಂದ ಅಧಿಕೃತ ಕಟ್ಟಡ ನಕಾಶೆಗೆ ಪರವಾನಗಿಯನ್ನು ಪಡೆದು, ಕಾಮಗಾರಿಯನ್ನು ಆರಂಭಿಸಲು ಶ್ರೀಮಠ ಮುಂದಾದಾಗ; ಜಾಗವನ್ನು ವಿವಾದಿತ ಜಾಗವಾಗಿಸುವ ಪ್ರಯತ್ನಗಳು ನಡೆಯಿತು!
ಬಿಬಿಎಂಪಿಯ ಕಾನೂನು ಬಾಹಿರ ಕ್ರಮ :
- ‘ಪುನರ್ವಸು’ ಜಾಗಕ್ಕೆ ಸಂಬಧಿಸಿದಂತೆ ಎರಡು ವರ್ಷಗಳ ಹಿಂದೆ ಬಿಬಿಎಂಪಿ ಪುನರ್ವಸು ಕಟ್ಟಡದ ನಕ್ಷೆ ರದ್ಧುಪಡಿಸಿತ್ತು, ಈ ಕುರಿತಾಗಿ ಮಠ ನ್ಯಾಯಾಲಯದ ಮೆಟ್ಟಿಲೇರಿದಾಗ; ಸಂಬಂಧಿತ 4 ಸರ್ಕಾರಿ ಅಧಿಕಾರಿಗಳಿಗೆ ತಲಾ 50,000 ದಂಡ ಸ್ವರೂಪದ ಠೇವಣಿ ಸಲ್ಲಿಸಲು ಹೈಕೋರ್ಟ್ ಸೂಚಿಸಿತ್ತು!
ಈ ಸಂದರ್ಭದಲ್ಲಿ ಹಿಂದಿನ ಬಿಡಿಎ ಆಯುಕ್ತರ( ಶ್ರೀ ಶ್ಯಾಂಭಟ್) ಮೌಖಿಕ ಆದೇಶದಂತೆ ಬಿಬಿಎಂಪಿಗೆ ಪತ್ರಬರೆದು, ನಕ್ಷೆ ಹಿಂಪಡೆಯಲು ಸೂಚಿಸಿದ್ದಾಗಿ ಬಿಡಿಎ ಮಾಜಿ ಇಂಜಿನಿಯರ್ ರಾಜಗೋಪಾಲ್ ನ್ಯಾಯಪೀಠದ ಮುಂದೆ ಹಾಜರಾಗಿ ಈ ಕುರಿತಾಗಿ ಅಫಿಡವಿಟ್ ಸಲ್ಲಿಸಿದ್ದರು.! ಆ ಮೂಲಕ ಈ ಪ್ರಕರಣದಲ್ಲೂ ಷಡ್ಯಂತ್ರಿಗಳ ಕಾಣದ ಕೈಗಳ ಪ್ರಭಾವ ಬಳಕೆಯಾಗಿರುವುದು ಬೆಳಕಿಗೆ ಬಂದಿತು.!!
ಬಿಬಿಎಂಪಿ ಪರ ವಕೀಲರು, ಶ್ರೀರಾಮಚಂದ್ರಾಪುರಮಠದ ಗಿರಿನಗರದ ಜಾಗದ ಕುರಿತು ಹೊಸದಾಗಿ ತನಿಖೆ ಮಾಡುತ್ತೇವೆ ಎಂದು ನ್ಯಾಯಾಲಯವನ್ನು ಕೇಳಿದ್ದಕ್ಕೆ; “1978ರಲ್ಲಿ ಕ್ರಯಪತ್ರದ ಮೂಲಕ ನೋಂದಾಯಿತವಾದ ಹಾಗೂ ಕಂದಾಯ ಕಟ್ಟಿ, ಖಾತೆಯಾಗಿ, ಅನುಭೋಗದಲ್ಲಿರುವ ಜಾಗದ ಕುರಿತು ಯಾವ ನೆಲೆಯಲ್ಲಿ ತನಿಖೆ ಮಾಡುತ್ತೀರಿ” ಎಂದು ನ್ಯಾಯಾಲಯ ಬಿಬಿಎಂಪಿಯನ್ನು ತರಾಟೆಗೆ ತೆಗೆದುಕೊಂಡದ್ದಕ್ಕೂ ನ್ಯಾಯಾಲಯ ಸಾಕ್ಷಿಯಾಗಿತ್ತು.
ಆನಂತರ ಬಿಬಿಎಂಪಿ ತನ್ನಿಂದ ತಪ್ಪಾಗಿದೆ ಎಂಬರ್ಥದಲ್ಲಿ ಕಟ್ಟಡ ನಕ್ಷೆಯನ್ನು ಹಿಂಪಡೆದಿದ್ದ ತನ್ನ ಕ್ರಮದಿಂದ ಹಿಂದೆ ಸರಿದು, ಈ ಕುರಿತಾಗಿ ಮಠಕ್ಕೆ ಪತ್ರವನ್ನೂ ಬರೆದಿತ್ತು. ತನ್ನ ತಪ್ಪನ್ನು ಒಪ್ಪಿಕೊಂಡಿತ್ತು!
ಪಿಐಎಲ್ ದುರ್ಬಳಕೆ :
ಎರಡು ವರ್ಷದ ಹಿಂದೆ ಕರ್ಣಂ ಪವನ್ ಪ್ರಸಾದ್ ಅವರು ಮಠ ಜಾಗವನ್ನು ಅತಿಕ್ರಮಿಸಿಕೊಂಡಿದೆ ಎಂದು ದೂರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದಾಖಲಿಸಿದ್ದರು, ಇದರ ಆಧಾರದ ಮೇಲೆ ಪ್ರಸ್ತುತ ಜಾಗದಲ್ಲಿ ಕಟ್ಟಡ ಕಟ್ಟದಂತೆ ಮಧ್ಯಂತರ ತಡೆಯನ್ನು ಹೈಕೋರ್ಟ್ ನೀಡಿತ್ತು. ಹಾಗೆಯೇ ಕಮಿಟಿ ಆಫ್ ಜುಡಿಶಿಯಲ್ ಅಕೌಂಟೇಬ್ಲಿಟಿಯ ಶಿವಕುಮಾರ್ ಅವರು ಕಳೆದ ವರ್ಷ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮತ್ತೊಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದಾಖಲಿಸಿದ್ದರು.
ಕರ್ಣಂ ಪವನ್ ಪ್ರಸಾದ್ ಹಾಗೂ ಕಮಿಟಿ ಆಫ್ ಜುಡಿಶಿಯಲ್ ಅಕೌಂಟೇಬ್ಲಿಟಿಯ ಶಿವಕುಮಾರ್ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕಳೆದ ವರ್ಷ ವಿಚಾರಣೆ ನಡೆಸಿದ್ದ ವಿಭಾಗೀಯ ಪೀಠ, ಪ್ರಸ್ತುತ ಜಾಗದ ಕುರಿತಾದ ಸಮಗ್ರ ದಾಖಲೆಗಳನ್ನು ಪರಿಶೀಲಿಸಿ; ಜಾಗದ ವಿಚಾರವಾಗಿ ಯಾವುದೇ ಆಕ್ಷೇಪಣೆಗಳಿದ್ದಲ್ಲಿ, ದಾಖಲೆ ಸಹಿತವಾಗಿ ಬಿಬಿಎಂಪಿ ಆಯುಕ್ತರ ಮುಂದೆ ಲಿಖಿತವಾಗಿ ಹೇಳಿಕೆಯನ್ನು ಸಲ್ಲಿಸಬೇಕು ಹಾಗೂ ಶ್ರೀಮಠಕ್ಕೆ ಸೂಕ್ತ ನೋಟೀಸು ಮತ್ತು ವಾದ ಮಂಡಿಸಲು ಸರಿಯಾದ ಅವಕಾಶವನ್ನು ಕೊಡಬೇಕು ಎಂದು ಸೂಚಿಸಿ, ಎರಡು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ವಜಾಗೊಳಿಸಿತ್ತು.
ಸಮಯ ಹಾಳುಮಾಡಿದರೆ ದಂಡ: ಇದೇ ಸಂದರ್ಭದಲ್ಲಿ
ಅನಗತ್ಯವಾಗಿ ವಾದಮಾಡುತ್ತ ನ್ಯಾಯಾಲಯದ ಸಮಯವನ್ನು ಹಾಳುಮಾಡಿದರೆ, ದಂಡ ವಿಧಿಸಲಾಗುವುದು ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿದಾರರಿಗೆ ಖಡಕ್ ಎಚ್ಚರಿಕೆ ನೀಡಿದ್ದ ನ್ಯಾಯಾಲಯ, ಅನಗತ್ಯವಾಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ಮೂಲಕ ವಿವಾದ ಎಬ್ಬಿಸದಂತೆ ಸ್ಪಷ್ಟ ಸೂಚನೆ ರವಾನಿಸಿತ್ತು.
ಇಷ್ಟಾದರೂ… ಧರ್ಮಪೀಠವನ್ನು ನ್ಯಾಯಪೀಠದ ಸಮ್ಮುಖದಲ್ಲಿ ಕುತಂತ್ರಪೂರ್ವಕವಾಗಿ ಸಿಲುಕಿಸಿ ಹಾಕಿಸುವ ವ್ಯರ್ಥಪ್ರಯತ್ನಗಳು ನಡೆಯುತ್ತಲೇ ಇವೆ.. ಆದರೇ, 1978ರಲ್ಲಿ ಕ್ರಯಪತ್ರದ ಮೂಲಕ ಖರೀದಿಸಿ, ನೆಲದ ಕಾನೂನಿನನ್ವಯ ಖಾತಾ ಆಗಿ, ಸರ್ಕಾರಕ್ಕೆ ಕಂದಾಯ ಕಟ್ಟುತ್ತಿರುವ; ನ್ಯಾಯಮಾರ್ಗದಲ್ಲಿರುವ ಧರ್ಮಪೀಠಕ್ಕೆ ಎಲ್ಲಾ ಕುತಂತ್ರಗಳನ್ನೂ ಮೀರಿ ನ್ಯಾಯಾಲಯದಲ್ಲಿ ಜಯವು ಲಭಿಸುತ್ತಲೇ ಇದೆ!
‘ಪುನರ್ವಸು’ ನಕ್ಷತ್ರದಲ್ಲಿ ಜನಿಸಿದ ರಾಮ ; ಧಾರಾ ರಾಮಾಯಣದಲ್ಲಿ ಜನಿಸಿ ಎರಡು ದಿನ ಕಳೆಯುವುದರಲ್ಲೇ, ‘ಪುನರ್ವಸು’ ಜಾಗಕ್ಕೆ ಸಂಬಂಧಿಸಿ ಈ ಮಹತ್ವದ ಆದೇಶ ಸಿಕ್ಕಿರುವುದು ಶ್ರೀಮಠದ ಭಕ್ತರಲ್ಲಿ ಸಂತವನ್ನುಂಟುಮಾಡಿದೆ.