ಭಟ್ಕಳ:ಪ್ಲಾಸ್ಟಿಕ್ ಮುಕ್ತ ಭಟ್ಕಳ ನಿರ್ಮಾಣಕ್ಕೆ ಸಹಕರಿಸುವಂತೆ ಪುರಸಭೆ ಈಗಾಗಲೆ ಸಾರ್ವಜನಿಕರಲ್ಲಿ ವಿನಂತಿಸಿಕೊಂಡಿದ್ದು ಜಾಗೃತಿ ಶಿಬಿರವನ್ನು ಮಾಡಿತ್ತು. ಆದರೂ ಪ್ಲಾಸ್ಟಿಕ ಬಳಕೆ ನಿಂತಿಲ್ಲ. ಹೆಚ್ಚಿನ ಪ್ರಮಾಣದ ನಿಷೇಧಿತ ಪ್ಲಾಸ್ಟಿಕ ದೊರಕಿದರೆ ಅಂತಹ ಮಳಿಗೆಗಳನ್ನು ಸೀಜ್ ಮಾಡಲಾಗುವದು ಎಂದು ಎಚ್ಚರಿಕೆಯನ್ನೂ ನೀಡಲಾಗಿತ್ತು.
ಪಟ್ಟಣದ ವಿವಿಧ ಅಂಗಡಿ ಮಳಿಗೆಗಳು, ಚಿಕನ್ ಸೆಂಟರ್ ಸೇರಿದಂತೆ ಬೀದಿ ಬದಿಯ ವ್ಯಾಪಾರದ ಅಂಗಡಿಗಳಿಗೆ ಭಟ್ಕಳ ಉಪವಿಭಾಗಾಧಿಕಾರಿ ಸಾಜಿದ್ ಮುಲ್ಲಾ ಅವರ ನಿರ್ದೇಶನದಂತೆ ದಾಳಿ ನಡೆಸಿ ಪ್ಲಾಸ್ಟಿಕ್ ವಶಕ್ಕೆ ಪಡೆದು ದಂಡ ಹಾಕಲಾಗಿದೆ.
ಪಟ್ಟಣದ ಮೀನು ಮಾರುಕಟ್ಟೆ, ಹೂವಿನ ಅಂಗಡಿ, ಚಿಕನ್ ಸೆಂಟರ್, ತರಕಾರಿ ಅಂಗಡಿ, ಹಣ್ಣು ಮಾರಾಟ ಮಾಡುವ ಅಂಗಡಿಗಳಿಗೆ ಪುರಸಭೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮಹ್ಮದ ಅಲಿ ರೋಡಿನಲ್ಲಿರುವ ಮಾಲ್‍ಗಳಿಗೂ ದಾಳಿ ನಡೆಸಿ ಸುಮಾರು 25ಕೆಜಿಗೂ ಅಧಿಕ ಪ್ಲಾಸ್ಟಿಕ್ ವಶಕ್ಕೆ ಪಡೆದಿದ್ದಾರೆ. ನಿಷೇಧಿತ ಪ್ಲಾಸ್ಟಿಕ್ ಮಾರಾಟ ಮಾಡುವವರ ಅಂಗಡಿಗೆ ದಾಳಿ ನಡೆಸಿ ಪ್ಲಾಸ್ಟಿಕ ವಶಕ್ಕೆ ಪಡೆದು ಪ್ರಥಮ ಬಾರಿಗೆ 500ರೂ ಗಳ ದಂಡ ವಿಧಿಸಿದ್ದಾರೆ.
ನಿಷೇಧಿತ ಪ್ಲಾಸ್ಟಿಕ ಮಾರಾಟ ಕಂಡು ಬಂದರೆ ಮುಂದಿನ ದಿನಗಳಲ್ಲಿ ದಂಡದ ಪ್ರಮಾಣ 25ಸಾವಿರದ ವರೆಗೂ ವಿಸ್ತರಿಸುವ ಅವಕಾಶ ಇದೆ ಎಂದು ಪುರಸಭೆ ಅಧಿಕಾರಿಗಳು ಅಂಗಡಿ ಮಾಲಿಕರಿಗೆ ಎಚ್ಚರಿಕೆ ನೀಡಿದ್ದಾರೆ.