ಗೋಕರ್ಣ: ಪಂಚಲಿಂಗ ಕ್ಷೇತ್ರದಲ್ಲಿ ಒಂದಾದ ಗೋಕರ್ಣದ ಪ್ರಸಿದ್ಧ ತೀರ್ಥವಾದ ಕೋಟಿ ತೀರ್ಥ ಮಳೆಯಿಂದಾಗಿ ತನ್ನ ನೈಜ ಸೌಂದರ್ಯವನ್ನು ಹೆಚ್ಚಿಸಿಕೊಂಡಿವೆ. ಈಗ ನೋಡುಗರಿಗೆ ಪುರಾಣ ಪ್ರಸಿದ್ಧ ಕೋಟಿತೀರ್ಥ ಕಳೆಗಟ್ಟಿದೆ.
ಬಿಸಿಲ ಜಳಕ್ಕೆ ಸೋತು ಸೊರಗಿದ್ದ ಈ ತೀರ್ಥಗಳು ಕೆಲ ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಮತ್ತೆ ತುಂಬಿಕೊಂಡು ಹರಿಯುತ್ತಿವೆ.
ಪುರಾಣ ಪ್ರಸಿದ್ಧ ಕೋಟಿ ತೀರ್ಥದಲ್ಲಂತೂ ಒಳ ನೀರಿನ ಹರಿವು ಹೆಚ್ಚಿದೆ. ಕ್ರಿಯಾ ಮಾಡುವ ಮಂಟಪದ ಕಡೆಗೂ ಕೆಲವೆಡೆ ನೀರು ನುಗ್ಗಿದೆ. ಕೋಟಿತೀರ್ಥ, ರಾಮ ಸೀತಾ ಲಕ್ಷ್ಮಣ ತೀರ್ಥ, ಗಾಯತ್ರಿ ತೀರ್ಥ, ಬ್ರಹ್ಮ ತೀರ್ಥ, ಇಂದ್ರ ತೀರ್ಥ, ಹೀಗೆ ಹಲವಾರು ತೀರ್ಥಗಳು ನೀರು ತುಂಬಿ ಕಂಗೊಳಿಸುತ್ತಿವೆ.
ಪ್ರವಾಸಿಗರು, ಯಾತ್ರಾರ್ಥಿಗಳು ತುಂಬಿ ತುಳುಕುತ್ತಿರುವ ತೀರ್ಥದಲ್ಲಿ ಮಿಂದು ಕೃತಾರ್ಥರಾಗುತ್ತಿದ್ದಾರೆ.ಇಲ್ಲಿನ ಸೌಂದರ್ಯ ನೋಡುವುದೇ ಒಂದು ಸೊಬಗು ಎನ್ನುವಂತಿದೆ.