ಕುಮಟಾ: ಭಾರತೀಯ ವೈದ್ಯ ಸಂಘ ಕುಮಟಾ ಘಟಕವು ಇಲ್ಲಿಯ ಬ್ಲಡ್ ಬ್ಯಾಂಕ್ ಆಡಿಟೋರಿಯಮ್‍ನಲ್ಲಿ ವೈದ್ಯರ ದಿನವನ್ನು ಅರ್ಥವತ್ತಾಗಿ ಆಚರಿಸಿತು. ವೈದ್ಯರಾದವರು ರೋಗಿಗಳ ಜೀವ ಉಳಿಸುವಲ್ಲಿ ಇನ್ನಿಲ್ಲದ ಪ್ರಯತ್ನ ಮಾಡುತ್ತಾರೆಯೇ ವಿನಹಃ ಅಸಡ್ಡೆಯಿಂದ ಜೀವವನ್ನು ಎಂದಿಗೂ ತೆಗೆಯಲಾರರು ಎಂದು ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷೆ ಡಾ. ಚೈತ್ರಾ ನಾಯ್ಕ ಅನಿಸಿಕೆ ವ್ಯಕ್ತಪಡಿಸಿದರು.
ಆಕಸ್ಮಿಕ ಅವಗಢಗಳಿಗೆ ವೈದ್ಯ ಲೋಕದ ಮೇಲೆ ಆಪಾದನೆ, ಹಲ್ಲೆ ಖಂಡನೀಯ ಎಂದು ಅವರು ಅಭಿಪ್ರಾಯ ಪಟ್ಟರು. ಇಲ್ಲಿಯ ಬಹುತೇಕ ವೈದ್ಯರು ರೋಟರಿ ಕುಟುಂಬಕ್ಕೆ ಸೇರಿದವರಾಗಿದ್ದು, ವೈದ್ಯ ವೃತ್ತಿಯ ಜೊತೆಗೆ ಸಮಾಜ ಸೇವೆಯಲ್ಲಿಯೂ ತೊಡಗಿಸಿ ಕೊಂಡವರಾಗಿದ್ದಾರೆಂದು, ತುರ್ತು ನಿಗಾ ಘಟಕದಲ್ಲಿ ಸ್ಮರಣೀಯ ಸೇವೆಸಲ್ಲಿಸುತ್ತಾ ಬಂದಿದ್ದಾರೆಂದೂ ಮುಖ್ಯ ಅತಿಥಿಗಳಾಗಿ ಆಗಮಿಸಿದ ರೋಟರಿ ಅಧ್ಯಕ್ಷ ಸುರೇಶ ಭಟ್ ತಿಳಿಸಿದರು.
ಡಾ.ಡಿ.ಡಿ.ನಾಯಕ, ಡಾ.ದೀಪಕ ನಾಯ್ಕ, ಶ್ರೀನಿವಾಸ ನಾಯಕರಂತಹವರ ಅಮೂಲ್ಯ ಸೇವೆಯನ್ನು ರೋಟರಿಯೊಂದಿಗಿನ ಅವರ ಅನನ್ಯತೆಯನ್ನು ಕೊಂಡಾಡಿದರು. ಈ ಸಂದರ್ಭದಲ್ಲಿ ವೈದ್ಯ ಕುಟುಂಬದವರೆಲ್ಲಾ ಸೇರಿ, ವಿವಿಧ ಮನರಂಜನಾ ಕಾರ್ಯಕ್ರಮ, ಭೋಜನ ಕೂಟ ಏರ್ಪಡಿಸಿ ಸಂಭ್ರಮಿಸಿದರು. ಸಂಘದ ಕಾರ್ಯದರ್ಶಿ ಡಾ. ಗಣೇಶ ಭಟ್ಟ ಕೊನೆಯಲ್ಲಿ ವಂದಿಸಿದರು.