ಗೋಕರ್ಣ: ದಕ್ಷಿಣಕಾಶಿ ಎಂದು ಪ್ರಸಿದ್ಧಿ ಪಡೆದ ಮಹಾಬಲೇಶ್ವರ ದೇವಾಲಯದ ಪೂಜಾ ಹಕ್ಕು ನೀಡುವ ಬಗ್ಗೆ ಸಲ್ಲಿಸಿದ ಪ್ರಕರಣಕ್ಕೆ ಸಂಬಂಧಿಸಿ ಸರ್ವೋಚ್ಛ ನ್ಯಾಯಾಲಯ ಮಹತ್ತರ ಆದೇಶ ನೀಡಿದ್ದು, ಸ್ವಾಮೀಜಿಯವರು ಸೇರಿದಂತೆ, ದೇವಾಲಯದ ಆಡಳಿತ ವ್ಯವಸ್ಥೆ ಮೇಲೆ ಹೈಕೋರ್ಟ್ ಏಕಸದಸ್ಯ ಪೀಠ ಸ್ವಯಂ ಪ್ರೇರಿತ ನ್ಯಾಯಾಂಗ ನಿಂದನೆ ಅರ್ಜಿ ದಾಖಲಿಸುವಂತೆ ಆದೇಶಿಸಿದ್ದ ಪ್ರಕರಣಕ್ಕೆ ತಡೆ ನೀಡಿ; ಪ್ರತಿವಾದಿಗಳಿಗೆ ನೋಟೀಸ್ ಜಾರಿ ಮಾಡಿದೆ.
ಮಹಾಬಲೇಶ್ವರ ದೇವರ ಪೂಜೆಯ ಹಕ್ಕು ನೀಡಬೇಕೆಂದು ದಾಖಲಿಸಿದ್ದ ಪ್ರಕರಣಕ್ಕೆ ಸಂಬಂಧಿಸಿ, ಶ್ರೀಮಠವು ಅರ್ಜಿಯನ್ನು ವಾಪಸ್ಸು ಪಡೆದಿದ್ದರೂ, ಉಚ್ಚ ನ್ಯಾಯಾಲಯವು (ಧಾರವಾಡ ಪೀಠ) ದೇವಾಲಯದ ಆಡಳಿತ ಮತ್ತು ಶ್ರೀಸ್ವಾಮೀಜಿ ವಿರುದ್ಧ ಸುಮೋಟೋ ನ್ಯಾಯಾಂಗ ನಿಂದನೆ ಪ್ರಕರಣವನ್ನು ದಾಖಲಿಸುವಂತೆ ಆದೇಶಿಸಿತ್ತು. ಇದನ್ನು ಸುಪ್ರೀಂ ಕೋರ್ಟಿನಲ್ಲಿ ಶ್ರೀಮಠವು ಪ್ರಶ್ನಿಸಿತ್ತು. ಸೋಮವಾರ ಸರ್ವೋಚ್ಚ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು, ವಾದ – ವಿವಾದಗಳನ್ನು ಆಲಿಸಿದ ನ್ಯಾಯಾಲಯವು ; ಧಾರವಾಡ ಉಚ್ಚನ್ಯಾಯಾಲಯದ ಆದೇಶದ ಹಿಂದೆ ಹಲವಾರು ವಿಷಯಗಳು ಒಳಗೊಂಡಿದೆ.
ಆದ್ದರಿಂದ ಈ ಬಗ್ಗೆ ಸಮಗ್ರವಾಗಿ ವಿಚಾರಣೆ ನಡೆಸುತ್ತೇವೆ ಎಂದ ನ್ಯಾಯಾಲಯ; ರಾಜ್ಯ ಉಚ್ಚ ನ್ಯಾಯಾಲಯದ ಆದೇಶವು ವ್ಯಾಪ್ತಿ ಮೀರಿದ ಕ್ರಮವಾಗಿದೆ ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿ; ಶ್ರೀಮಠದ ಅರ್ಜಿಯನ್ನು ಮಾನ್ಯ ಮಾಡುವುದರ ಮೂಲಕ ಉಚ್ಚ ನ್ಯಾಯಾಲಯದ ಆದೇಶಕ್ಕೆ ತಡೆ ನೀಡಿ, ಪ್ರತಿವಾದಿಗಳಿಗೆ ನೋಟೀಸ್ ಜಾರಿ ಮಾಡಿದೆ.
Source: Face Book