ಬೆಂಗಳೂರು: ಅತೃಪ್ತ ಶಾಸಕರು ಸ್ಪೀಕರ್ ಕ್ರಮದ ವಿರುದ್ಧ ಸುಪ್ರೀಂಕೋರ್ಟ್ ಮೊರೆ ಹೋಗಿದ್ದು, ನಮ್ಮ ರಾಜೀನಾಮೆ ಅಂಗೀಕರಿಸಲು ಸ್ಪೀಕರ್ ಅವರಿಗೆ ನಿರ್ದೇಶನ ನೀಡುವಂತೆ ಮನವಿ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.
ಇಂದು ಬೆಳಗ್ಗೆ ಮುಂಬೈನಲ್ಲಿರುವ 10 ಶಾಸಕರು ಅರ್ಜಿಯನ್ನು ಸಲ್ಲಿಸಿದ್ದಾರೆ. ಶನಿವಾರ ನಾವು ಸ್ಪೀಕರ್ ಕಚೇರಿಗೆ ತೆರಳಿ ರಾಜೀನಾಮೆ ಸಲ್ಲಿಸಿದ್ದೇವೆ. ಆದರೆ ಇಲ್ಲಿಯವರೆಗೂ ರಾಜೀನಾಮೆ ಅಂಗೀಕಾರವಾಗಿಲ್ಲ. ಹೀಗಾಗಿ ರಾಜೀನಾಮೆಯನ್ನು ಅಂಗೀಕಾರ ಮಾಡುವಂತೆ ಸ್ಪೀಕರ್ ಅವರಿಗೆ ಸೂಚನೆ ನೀಡಬೇಕೆಂದು 10 ಶಾಸಕರು ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಸ್ಪೀಕರ್ ಅವರು ರಾಜೀನಾಮೆ ಅಂಗೀಕಾರ ತಡಮಾಡಲೆಂದೇ ನೆಪ ಹೇಳುತ್ತಿದ್ದಾರೆ ಎಂದು ಅತೃಪ್ತ ಶಾಸಕರ ಪರ ಮಾಜಿ ಅಟಾರ್ನಿ ಜನರಲ್ ಮುಖುಲ್ ರೋಹಟಗಿ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ನಾಳೆ ಸುಪ್ರೀಂನಲ್ಲಿ ಅರ್ಜಿ ವಿಚಾರಣೆ ನಡೆಯಲಿದೆ ಎಂದು ವರದಿಯಾಗಿದೆ.