ಕುಮಟಾ: ಹಂದಿಗೋಣ ಶಾಲೆ ಸಮೀಪ ಮೋರಿಗಂಡಿ ಕ್ರಾಸ್‌ನ ಮೂಲಕ ಮಳೆ ನೀರು ಸರಾಗವಾಗಿ ಹರಿದು ಹೋಗಲು ರಾ.ಹೆದ್ದಾರಿ 66 ರ ಅಂಚಿಗೆ ಮೊದಲಿನಿಂದಲೂ ಮೋರಿಗಳು, ಗಟಾರ, ಕಾಲುವೆಗಳಿದ್ದವು, ಆದರೆ ಚತುಷ್ಪಥ ಕಾಮಗಾರಿಯಿಂದಾಗಿ ಮಣ್ಣು ಮುಚ್ಚಿ, ಮಳೆ ನೀರಿನ ಹರಿವಿನ ಮಾರ್ಗ ಕಟ್ಟಿಹೋಗಿದೆ ಇದರಿಂದಾಗಿ ಅಕ್ಕ ಪಕ್ಕದ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ.
ಕಲಭಾಗ ಗ್ರಾಮ ಪಂಚಾಯತ ವ್ಯಾಪ್ತಿಯ ಹಂದಿಗೋಣದ ಮೋರಿಗಂಡಿ ಕ್ರಾಸ್ ಬಳಿ ಚತುಷ್ಪಥ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಮಳೆ ನೀರು ಸರಾಗವಾಗಿ ಹರಿದುಹೋಗಲು ಮಾರ್ಗವಿಲ್ಲದೇ, ಆಸುಪಾಸಿನ ಗದ್ದೆ, ಮನೆಗಳಿಗೆ ನೀರು ನುಗ್ಗಿ ಸ್ಥಳೀಯರು ಸಮಸ್ಯೆ ಎದುರಿಸುವಂತಾಗಿದೆ.
ಲಕ್ಷ್ಮಣ ತಿಪ್ಪಯ್ಯ ಪಟಗಾರ ಎಂಬವರ ಮನೆ ಎದುರು ಚತುಷ್ಪಥಕ್ಕಾಗಿ ಸುರಿದ ಮಣ್ಣಿನಡಿ ಮಳೆನೀರ ಕಾಲುವೆ ಮುಚ್ಚಿಹೋಗಿದ್ದು, ಸುಮಾರು ಒಂದು ಕಿಮೀ ನಷ್ಟು ವ್ಯಾಪ್ತಿಯಲ್ಲಿ ಬೀಳುವ ಮಳೆ ನೀರಿಗೆ ಹರಿದು ಹೋಗಲು ಮಾರ್ಗವಿಲ್ಲದಂತಾಗಿದೆ. ಕಳೆದ ಎರಡು ದಿನದಿಂದ ಸುರಿಯುತ್ತಿರುವ ಮಳೆಗೆ ಈ ಸಮಸ್ಯೆ ಉದ್ಭವಿಸಿದ್ದು, ನಾರಾಯಣ ಎಚ್. ಪಟಗಾರ ಎಂಬವರ ಮನೆಯೊಳಗೂ ನೀರು ನುಗ್ಗಿದೆ. ಇದರಿಂದಾಗಿ ಭತ್ತದ ಗದ್ದೆಗಳು, ಪಾದಚಾರಿ ಮಾರ್ಗಗಳೂ ಜಲಾವೃತಗೊಂಡಿದ್ದು, ಅಪಾಯಕಾರಿ ಹಾಗೂ ಅನಾರೋಗ್ಯಕರ ವಾತಾವರಣ ನಿರ್ಮಾಣವಾಗಿದೆ.