ಕುಮಟಾ: ಕರ್ನಾಟಕ ರಕ್ಷಣಾ ವೇದಿಕೆ ಉತ್ತರಕನ್ನಡದ ವತಿಯಿಂದ ಕುಮಟಾ ತಾಲೂಕಿನ ಕನ್ನಡ ಮಾಧ್ಯಮ ಶಾಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ ಬುಕ್ ವಿತರಣಾ ಕಾರ್ಯಕ್ರಮ ಪಟ್ಟಣದ ನಾಮಧಾರಿ ಸಭಾಭವನದಲ್ಲಿ ಶನಿವಾರ ಜರುಗಿತು.

ಕಾರ್ಯಕ್ರಮವನ್ನು ಸಾಮಾಜಿಕ ಜಾಲತಾಣ ಬನವಾಸಿ ಬಳಗದ ಸಂಸ್ಥಾಪಕ ಅರುಣ ಜಾವಗಲ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಇಂದು ಕನ್ನಡ ಮಾಧ್ಯಮ ಶಾಲೆಗಳಿಗೆ ವಿದ್ಯಾರ್ಥಿಗಳನ್ನು ಕಳುಹಿಸುವವರ ಸಂಖ್ಯೆ ವಿರಳವಾಗುತ್ತಿದೆ. ಇದರಿಂದ ಕನ್ನಡ ಮಾಧ್ಯಮ ಶಾಲೆಗಳು ಮುಚ್ಚುತ್ತಿವೆ. ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲಿ ಮಕ್ಕಳಿಗೆ ವಿದ್ಯಾಭ್ಯಾಸವನ್ನು ಒದಗಿಸಿದರೆ ಮಾತ್ರ ಆತ ಉತ್ತಮನಾಗುತ್ತಾನೆ ಎಂಬುದು ತಪ್ಪು ಕಲ್ಪನೆ. ಮಾತೃಭಾಷೆ ಕನ್ನಡದಲ್ಲಿ ಕಲಿತವರಿಗೆ ವಿಷಯಗಳು ಸುಲಭವಾಗಿ ಅರ್ಥವಾಗುತ್ತದೆ. ಒತ್ತಡವೂ ಇರುವುದಿಲ್ಲ, ಸಾಧನೆಗೆ ಕ್ಷೇತ್ರ ವೈವಿಧ್ಯತೆ ಮುಕ್ತವಾಗಿದೆ. ಕನ್ನಡ ಮಾಧ್ಯಮದಲ್ಲಿ ಕಲಿತವರು ಸಾಕಷ್ಟು ಉನ್ನತ ಸಾಧನೆಗಳನ್ನು ಮಾಡಿದ್ದಾರೆ ಎಂದರು.

ಬನವಾಸಿ ಬಳಗದ ಸದಸ್ಯ ವಲ್ಲೇಶಕುಮಾರ ಮಾತನಾಡಿ, ಕನ್ನಡ ಮಾಧ್ಯಮ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ದೊರೆಯುವ ಸಂಸ್ಕ್ರತಿ ಹಾಗೂ ಸಂಸ್ಕಾರಗಳು ಇತರೇ ಮಾಧ್ಯಮ ಶಾಲೆಗಳಲ್ಲಿ ದೊರೆಯುವುದಿಲ್ಲ. ತಾಯ್ನುಡಿಯಲ್ಲಿ ಕಲಿಯುವವರಿಗೆ ವಿಷಯವಾರು ಕಲಿಕೆ ಪ್ರಭಾವಶಾಲಿಯಾಗಿರುತ್ತದೆ. ಇಂಗ್ಲೀಷ್ ಮಾಧ್ಯಮದ ಓದಿನಿಂದ ಸಾಧ್ಯವಿರುವ ಎಲ್ಲ ಅವಕಾಶಗಳನ್ನೂ ಕನ್ನಡ ಮಾಧ್ಯಮದ ಓದಿನಲ್ಲಿ ಪಡೆದುಕೊಳ್ಳಬಹುದು. ಕನ್ನಡ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಹಲವು ಅವಕಾಶಗಳ ಜೊತೆ, ಉತ್ತಮ ವೇದಿಕೆಯೂ ಲಭ್ಯವಿರುತ್ತದೆ ಎಂದರು.

RELATED ARTICLES  ಕರ್ಕಿ ಕಡಲು ಕೊರೆತ ಸ್ಥಳಕ್ಕೆ ನಿವೇದಿತ್ ಆಳ್ವ

ಕರವೇ ಜಿಲ್ಲಾಧ್ಯಕ್ಷ ಭಾಸ್ಕರ ಪಟಗಾರ ಪ್ರಾಸ್ತಾವಿಕ ಮಾತನಾಡಿ, ಕನ್ನಡ ಶಾಲೆಗಳನ್ನು ಉಳಿಸಬೇಕು. ಕನ್ನಡ ಮಾಧ್ಯಮ ಕಲಿಕೆಗೆ ಪ್ರೋತ್ಸಾಹಿಸಬೇಕು ಎಂಬ ಉದ್ದೇಶದಿಂದ ಕರವೇ ಕನ್ನಡ ಮಾಧ್ಯಮ ಶಾಲಾ ಮಕ್ಕಳಿಗೆ ನೋಟ್‌ಬುಕ್ ವಿತರಿಸುತ್ತಿದ್ದು, ಕಳೆದ ೮ ವರ್ಷದಿಂದ ಈ ಕಾರ್ಯಕ್ರಮ ನಡೆಸಿಕೊಂಡು ಬಂದಿದ್ದೇವೆ. ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸುವಲ್ಲಿ ಪಾಲಕರ ಪಾತ್ರ ಮಹತ್ವವಾದದ್ದು. ತಾಲೂಕಿನಲ್ಲಿ ಯಾವುದೇ ಕನ್ನಡ ಶಾಲೆಯಲ್ಲಿ ಸಮಸ್ಯೆಗಳಿದ್ದರೆ ಕರವೇ ಗಮನಕ್ಕೆ ತನ್ನಿ, ಪರಿಹಾರಕ್ಕೆ ಹೋರಾಡುತ್ತೇವೆ ಎಂದರು.

ಜಿ.ಪಂ ಸದಸ್ಯ ಪ್ರದೀಪ ನಾಯಕ ದೇವರಬಾವಿ, ಡಾ. ಜಿ.ಜಿ.ಹೆಗಡೆ, ಆರ್.ಜಿ.ನಾಯ್ಕ, ಜೆಡಿಎಸ್ ಮುಖಂಡ ಸೂರಜ ನಾಯ್ಕ ಸೋನಿ, ಬಿಇಓ ಎ.ಜಿ.ಮುಲ್ಲಾ ಮಾತನಾಡಿ, ಕನ್ನಡ ಶಾಲೆಗಳ ಮಹತ್ವ ಹಾಗೂ ಅದನ್ನು ಉಳಿಸಿಕೊಳ್ಳಲು ನಮ್ಮ ಮುಂದಿರುವ ಸವಾಲುಗಳ ಕುರಿತು ವಿಶ್ಲೇಷಿಸಿ, ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯವನ್ನು ಶ್ಲಾಘಿಸಿದರು.

RELATED ARTICLES  ಕೊಂಕಣದ ಸಿವಿಎಸ್‍ಕೆ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ

ಬಾಗಲಕೋಟ ತೋಟಗಾರಿಕೆ ವಿವಿ ಡೀನ್ ಡಾ. ನಾಗೇಶ ಎಚ್. ನಾಯ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನವನ್ನು ಪಡೆದ ನಾಗಾಂಜಲಿ ನಾಯ್ಕರಿಗೆ ಸನ್ಮಾನಿಸಲಾಯಿತು.

ತಾಪಂ ಅಧ್ಯಕ್ಷೆ ವಿಜಯಾ ಪಟಗಾರ, ನಾಗರಾಜ ತಾಂಡೇಲ, ವಿನಾಯಕ ನಾಯ್ಕ, ಕ.ಸಾ.ಪ. ತಾಲೂಕಾಧ್ಯಕ್ಷ ಶ್ರೀಧರ ಗೌಡ ಉಪ್ಪಿನ ಗಣಪತಿ, ಎಂ.ಜಿ.ಭಟ್ಟ, ರಾಮನಾಥ ಶಾನಭಾಗ, ಗಜು ನಾಯ್ಕ ಅಳ್ವೇಕೋಡಿ, ನಾಗೇಶ ನಾಯ್ಕ, ತಿಮ್ಮಪ್ಪ ನಾಯ್ಕ, ಕೃಷ್ಣಾನಂದ ವೆರ್ಣೇಕರ, ಕರವೇ ಯುವ ಜಿಲ್ಲಾಧ್ಯಕ್ಷ ನಾಗರಾಜ ನಾಯ್ಕ ಇನ್ನಿತರರು ಇದ್ದರು. ಪ್ರಾರಂಭದಲ್ಲಿ ಡಿ.ಜಿ.ನಾಯ್ಕ ಪ್ರಾರ್ಥಿಸಿದರು. ಗುಡಿಗಾರಗಲ್ಲಿ ಶಾಲೆ ವಿದ್ಯಾರ್ಥಿನಿಯರು ನಾಡಗೀತೆ ಹಾಡಿದರು. ರಾಮಚಂದ್ರ ಮಡಿವಾಳ ಸ್ವಾಗತಿಸಿದರು. ಶಿಕ್ಷಕ ಮಂಜುನಾಥ ನಾಯ್ಕ ನಿರೂಪಿಸಿದರು.