ಭಟ್ಕಳ: ಶಿರಾಲಿ ಪಂಚಾಯತ್ ವ್ಯಾಪ್ತಿಯ ಚಿತ್ರಾಪುರದ ಬಡ್ಡುಕುಳಿ ರಸ್ತೆಯು ಕಳೆದ ಹಲವಾರು ವರ್ಷಗಳಿಂದ ಡಾಂಬರು ಕಾಣದೆ ಗದ್ದೆಯಾಗಿ ಮಾರ್ಪಟ್ಟಿದೆ. ಈ ಪರಿಸ್ಥಿತಿ ಗಮನಿಸಿದ ಗ್ರಾಮಸ್ಥರು ಭತ್ತನಾಟಿ ಮಾಡುವುದರ ಮೂಲಕ ವಿನೂತನವಾಗಿ ಪ್ರತಿಭಟಿಸಿದ ಘಟನೆ ನಡೆದಿದೆ.
ದಲಿತ ಹಾಗೂ ಹಿಂದುಳಿದ ವರ್ಗದವರೇ ಹೆಚ್ಚಾಗಿರುವ ಈ ಭಾಗದ ಜನರು ಮಾತ್ರ ಮೂಲಭೂತ ಸೌಲಭ್ಯದಿಂದ ವಂಚಿತರಾಗಿಯೇ ಉಳಿದುಕೊಂಡಿದ್ದಾರೆ.
ಗೊಂಡ ಸಮುದಾಯ ಹಾಗೂ ಹಿಂದುಳಿದ ವರ್ಗಕ್ಕೆ ಸೇರಿರುವ 150ರಿಂದ 200 ಕುಟುಂಬಗಳು ಇಲ್ಲಿ ವಾಸಿಸುತ್ತಿದ್ದು, ಈ ರಸ್ತೆ ಚಿತ್ರಾಪುರ ಅಂಚೆ ಕಛೇರಿಯ ಎದುರಿನಿಂದ ಬಡ್ಡುಕುಳಿ ದೇವಾಲಯದವರೆಗೆ ಇದ್ದು ನಿತ್ಯ ನೂರಾರು ಜನ ಓಡಾಡುತ್ತಾರೆ. ಕಳೆದ 15 ವರ್ಷದಿಂದ ಇಲ್ಲಿನ ಜನರು ಮಳೆಗಾಲದಲ್ಲಿ ಕೆಸರಿನಲ್ಲಿಯೇ ತಿರುಗಾಡುವಂತಾಗಿದೆ.
ಈ ಹಿಂದೆ ಇಲ್ಲಿನ ಸ್ಥಳೀಯರೆಲ್ಲರು ಸೇರಿ ಪಂಚಾಯತಗೆ ರಸ್ತೆ ನಿರ್ಮಾಣಕ್ಕೆ ಮನವಿಯನ್ನು ಸಲ್ಲಿಸಿದ್ದಾರೆ. ಮನವಿಗೆ ಯಾವುದೇ ಸ್ಪಂದನೆ ಇಲ್ಲವಾದ್ದರಿಂದ ಜನರು ಹೈರಾಣಾಗಿದ್ದಾರೆ. ಜನರಿಗೆ ಸಿಗಬೇಕಾದ ಮೂಲಭೂತ ಸೌಕರ್ಯಗಳಿಗೆ ಜನಪ್ರತಿನಿಧಿಗಳಾಗಲಿ, ಪಂಚಾಯತ ಅಧಿಕಾರಿಗಳಾಗಲಿ ಗಮನಹರಿಸಿಲ್ಲವಾಗಿದ್ದು ಸ್ಥಳೀಯರಿಗೆ ರಸ್ತೆ ನಿರ್ಮಾಣದ ಭರವಸೆಯೆ ಇಲ್ಲವಾಗಿದೆ.
ಆದಷ್ಟು ಬೇಗ ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಹಾಗೂ ಶಾಸಕರು ಗಮನ ಹರಿಸಬೇಕಾಗಿದೆ. ಅದಲ್ಲದೆ ರಸ್ತೆ ನಿರ್ಮಾಣಕ್ಕೆಂದು ಸರ್ಕಾರ ಹಣ ಮಂಜೂರು ಮಾಡಿದ್ದು ಟೆಂಡರ್ ಕರೆಯುವಲ್ಲಿ ಸಂಬಂಧಪಟ್ಟ ಇಲಾಖೆ ಮೀನಾಮೇಷ ಎಣಿಸುತ್ತಿದ್ದು, ಇಲ್ಲಿನ ಜನರ ಸಮಸ್ಯೆಯನ್ನು ನಿರ್ಲಕ್ಷಿಸುತ್ತಿದೆ ಎಂಬ ಕೂಗು ಕೇಳಿ ಬಂದಿದೆ.